ಮಲೆನಾಡಿನಲ್ಲಿ ಅಡಿಕೆ ಸುಗ್ಗಿ ಆರಂಭವಾಗಿ ಮುಗಿಯುತ್ತ ಬಂತು. ಬಹುತೇಕ ಅಡಿಕೆ ಬೆಳೆಗಾರರು ತಮಗೆ ಈ ವರ್ಷ ಮುಕ್ಕಾಲು ಪಾಲು ಅಡಿಕೆ ಉತ್ಪತ್ತಿ ಇಲ್ಲ ಎನ್ನುತ್ತಿದ್ದಾರೆ…!!!!
ಹೌದು….
ಹಿಂದೆ ಇದಕ್ಕಿಂತಲೂ ದೊಡ್ಡ ದೊಡ್ಡ “ಹುಚ್ಚು ಮಳೆ” ಮಲೆನಾಡು ಕರಾವಳಿಯಲ್ಲಿ ಬಂದಿದೆ. ಹೆಚ್ಚು ಮಳೆ ಬಂದಾಗಲೆಲ್ಲ ಅಡಿಕೆ ಕೊಳೆ ಶಿಲೀಂದ್ರ ರೋಗ ಬಾಧೆಗೆ ಅಡಿಕೆ ಫಸಲು ನಷ್ಟವಾಗುವುದು ಸಾಮಾನ್ಯ. ಆದರೆ ಈ ಬಾರಿ ಅಡಿಕೆ ಬೆಳೆಗಾರರ ಅನುಭವದ ಇತಿಹಾಸದಲ್ಲೆಲ್ಲೂ ಈ ಪ್ರಮಾಣದ ಅಡಿಕೆ ನಷ್ಟವಾಗಿಲ್ಲ. ಇದಕ್ಕೆ ಅಡಿಕೆ ಕೊಳೆ ರೋಗ ಬಾಧೆಯೊಂದೇ ಮಾತ್ರ ಕಾರಣವೇ….?
ಈ ಮಳೆಗಾಲಕ್ಕೆ ಮೊದಲೇ ಒಂದು ರೌಂಡ್ ಸಿಂಗಾರ ಅತಿಯಾದ ಉಷ್ಣಾಂಶಕ್ಕೆ ಅರಳದೇ ಕರಟಿ ಹೋಗಿದೆ…!!
ಚಿಗುರು ಅಡಿಕೆಯೂ ಉದುರಿದೆ…!!! ಆದರೆ ಅದೆಲ್ಲಾ ಲೆಕ್ಕಾಚಾರ ಹಾಕಿದರೂ !! ಅರವತ್ತು ಎಪ್ಪತ್ತು ಪ್ರತಿಶತ ಅಡಿಕೆ ಉತ್ಪತ್ತಿ ನಷ್ಟವಾಗಿದೆ. ಇದಕ್ಕೆ ಖಂಡಿತವಾಗಿಯೂ ಅಡಿಕೆ ಕೊಳೆಯೊಂದೇ ಕಾರಣವಲ್ಲ…!! ಅಡಿಕೆ ಕೊಳೆ ಶಿಲೀಂದ್ರ ಮತ್ತು ಎಲೆಚುಕ್ಕಿ ಶಿಲೀಂಧ್ರ ಜೊತೆಯಾಗಿ ಕೆಲಸ ಮಾಡಿದ್ದು ಈಗ ಕೊನೆ ತೆಗದ ಮೇಲೆ ಅನುಭವಕ್ಕೆ ಬರುತ್ತಿದೆ…!! ನಮ್ಮ ಕಡೆಯಲ್ಲಿ ಅಡಿಕೆಸೋಗೆಯಲ್ಲಿ ಎಲೆಚುಕ್ಕಿ ಕಾಣಿಸುತ್ತಿಲ್ಲ. ಆದರೆ ಅಡಿಕೆ ಗೊನೆಯ ಅಡಿಕೆ ಕಾಯಿ ಮೇಲೆ ಚುಕ್ಕಿ ಚುಕ್ಕಿ ಸಿಂಗಾರ ಮೂಡಿದೆ…!! ಅಡಿಕೆ ಕೊಳೆ ಶಿಲೀಂದ್ರ ಎಲೆಚುಕ್ಕಿ ಶಿಲೀಂಧ್ರಗಳ ಜೊತೆಗೆ ಎಂದಿನಂತೆ ಮಂಗಗಳೂ ತಮ್ಮ ಶಕ್ತಿ ಮೀರಿ ಸೇವೆ ಸಲ್ಲಿಸಿದೆ…!!
ಅಡಿಕೆ ಫಸಲು ಮೂವತ್ತು ಪ್ರತಿಶತಕ್ಕಿಂತ ಈ ಬಾರಿ ಕಡಿಮೆ…!!
ಇದು ಒಬ್ಬ ಇಬ್ಬರು ಅಥವಾ ಒಂದು ಊರು ಒಂದು ತಾಲ್ಲೂಕು ಒಂದು ಜಿಲ್ಲೆಯ ಅಡಿಕೆ ಬೆಳೆಗಾರರ ಪರಿಸ್ಥಿತಿ ಅಲ್ಲ…!! ಸಮಸ್ತ ಮಲೆನಾಡು ಕರಾವಳಿಯ ಅಡಿಕೆ ಬೆಳೆಗಾರರೆಲ್ಲರ ಪರಿಸ್ಥಿತಿ. ಹತ್ತು ಕ್ವಿಂಟಾಲ್ ಅಡಿಕೆ ಬೆಳೆ ತೆಗೆಯತ್ತಿದ್ದ ಅಡಿಕೆ ಬೆಳೆಗಾರ ಈ ಬಾರಿ ಮೂರು ಕ್ವಿಂಟಾಲ್ ಮಾತ್ರ ಅಡಿಕೆ ಉತ್ಪತ್ತಿಯಾದರೆ ಕೇವಲ ಮೂರು ಕ್ವಿಂಟಾಲ್ ಅಡಿಕೆಯ ಮಾರುಕಟ್ಟೆಯ ಚಾಲ್ತಿ ದರ ಒಂದು ಒಂದೂವರೆ ಲಕ್ಷ ರೂಪಾಯಿಯಲ್ಲಿ ಕೃಷಿ ಬದುಕು ಮತ್ತು ದೈನಂದಿನ ಜೀವನ ಹೇಗೆ ನಡೆಸುತ್ತಾನೆ….!?
ಯಾಕೆ ಹೀಗಾಯಿತು…?
ನೀವು ಗಮನಿಸಿ ನೋಡಿ ನಮ್ಮ ಮಲೆನಾಡಿನಲ್ಲಿ ಅಕ್ಟೋಬರ್ನಿಂದ ಚಳಿಗಾಲ ಆರಂಭವಾಗಿ ಜನವರಿ ತಿಂಗಳ ಅಂತ್ಯಕ್ಕೆ ಚಳಿಗಾಲದ ಅಧಿವೇಶನ ಮುಗಿಯಬೇಕು. ಈ ಲೆಕ್ಕದಲ್ಲಿ ಮೂರು ತಿಂಗಳ ಚಳಿಗಾಲ ಮುಗಿದಿದೆ. ಆದರೆ ಈ ಬಾರಿ ಚಳಿ ಇದ್ದದ್ದು ಒಂದೇ ಒಂದು ದಿನ ಮಾತ್ರ. ಸಾಮಾನ್ಯ ಚಳಿ ಒಂದೆರಡು ದಿನಗಳ ಕಾಲ ಇತ್ತೇನೋ. ಇನ್ನುಳಿದ ಎಲ್ಲಾ ದಿನಗಳಲ್ಲಿ ರಾತ್ರಿಯೂ ಫ್ಯಾನ್ ಇಲ್ಲದೇ ಮಲಗಲು ಅಸಾಧ್ಯ ಎನ್ನುವಷ್ಟು ಸೆಖೆ…!!
ಮಳೆಗಾಲ ಕೂಡ ಹಾಗೇಯೇ ಆಗುತ್ತಿದೆ…ಸರಿಯಾಗಿ ಜೂನ್ ಮೊದಲ ವಾರ ಮಲೆನಾಡಿನಲ್ಲಿ ಆರಂಭವಾಗಿ ಸೆಪ್ಟೆಂಬರ್ ಹೊತ್ತಿಗೆ ಬಿಡುವು ಕೊಡುತ್ತಿತ್ತು.
ಇಪ್ಪತ್ತು ವರ್ಷಗಳ ಈಚೆ ಮಳೆ ಹೆಚ್ಚು ಬೀಳುತ್ತಿದೆ ಎಂದಿನಿಸುತ್ತಿದೆ. ಆದರೆ ಇದು ತಪ್ಪಾದ ಅನಿಸಿಕೆ. ಆಗ ಈಗಿನಿಗಿಂತ ಹೆಚ್ಚು ಮಳೆ ಬೀಳುತ್ತಿತ್ತು. ಸುಮಾರು ಮುನ್ನೂರು ಇಂಚು ಮಳೆಗಾಲವನ್ನು ಇಪ್ಪತ್ತೈದು ಮೂವತ್ತು ವರ್ಷಗಳ ಹಿಂದಿನ ಮಲೆನಾಡು ಸಲೀಸಾಗಿ ತಡೆದುಕೊಳ್ತಿತ್ತು.ಈಗ ನೂರೈವತ್ತರಿಂದ ಇನ್ನೂರು ಇಂಚಿನ ಮಳೆ ನಮ್ಮ ಮಲೆನಾಡಿನಲ್ಲಿ ಬರುತ್ತಿದೆ. ಈ ಲೆಕ್ಕಾಚಾರದಲ್ಲಿ ಮೊದಲಿಗಿಂತ ಈಗ ಮಳೆ ಕಡಿಮೆಯೇ ಸರಿ…
ಆದರೆ ಮಳೆಗಾಲ ವಾಯಿದೆಯಲ್ಲಿ ಅತ್ಯಂತ ತಡವಾಗಿ ಆರಂಭವಾಗಿ ವಾಯಿದೆ ಮುಗಿದರೂ ಮುಗಿಯದೇ ನಿಸರ್ಗದ ಎಲ್ಲ ಚಟುವಟಿಕೆಗಳಿಗೆ ವಿರುದ್ಧವಾಗಿ ದುಷ್ಪರಿಣಾಮ ಬೀರುತ್ತಿದೆ.
ಮೊನ್ನೆ ಮಳೆಗಾಲದಲ್ಲಿ ನಮ್ಮೂರಿನಲ್ಲಿ ಒಂದೇ ದಿನ ಇಪ್ಪತ್ತ್ನಾಲ್ಕು ಗಂಟೆಗಳಲ್ಲಿ ಸುಮಾರು ಹನ್ನೊಂದು ಇಂಚು ಮಳೆ ಹೊಯ್ದಿದೆ…!!
ಹೀಗೆ ಒಂದೇ ದಿನ ಹೈ ಕಂಪ್ರೆಷರ್ ವಾಟರ್ ವಾಷರ್ನಲ್ಲಿ ಅತಿ ವೇಗವಾಗಿ ಒತ್ತಡದಿಂದ ನೀರು ಬಿಟ್ಟಂತೆ ಭೂಮಿಗೆ ಮಳೆ ಬಿದ್ದರೆ ಭೂಮಿಯ ಮೇಲ್ಮೈನ ಸಾರ ಸೂಕ್ಷ್ಮ ಜೀವಿಗಳು ಮತ್ತು ಸೂಕ್ಷ್ಮ ಪೋಷಕಾಂಶಗಳು ಉಳಿಯುತ್ತದೆಯೇ..?
ಮುನ್ನೂರು ಇಂಚು ಮಳೆ ನೂರಿಪ್ಪತ್ತು ದಿನಗಳ ಕಾಲ ಪ್ರತಿ ದಿನವೂ ಹಂತ ಹಂತವಾಗಿ ಎರಡೋ ಮೂರೋ ಇಂಚು ಮಳೆಯಂತೆ ಹದವಾಗಿ ಮಳೆ ಸುರಿದರೆ ಇಳಿಜಾರಿನ ಮಲೆನಾಡಿನ ಭೂಮಿ ತಡೆದು ಕೊಳ್ಳಲು ಸಾದ್ಯ. ಆದರೆ ಇಪ್ಪತ್ತು ಮೂವತ್ತು ದಿನಗಳಲ್ಲೇ ನೂರಿಂಚು ಮಳೆ ಹೋಯ್ದರೆ ಮಲೆನಾಡಿನಲ್ಲಿ ಯಾವ ಕೃಷಿ ಮಾಡಿ ಉಳಿಸಿಕೊಳ್ಳಲು ಸಾದ್ಯ…? ಈ ಹೈ ಪ್ರಷರ್ ಮಳೆ ನೀರು ಭೂಮಿಯ ಮೇಲಿನ ಸತ್ವ ಸಾರ ತೊಳೆದು ಹೋಗುತ್ತದೆ…!!!
ಇದರ ನಂತರ ನಾಡಿದ್ದಿನಿಂದ ಬೇಸಿಗೆ ಶುರುವಾಗುತ್ತದೆ. ಸಾಮಾನ್ಯವಾಗಿ ನಮ್ಮ ಮಲೆನಾಡಿನ ಭಾಗಕ್ಕೆ ಮೂವತ್ತೆರಡು ಡಿಗ್ರಿ ಅತಿ ಹೆಚ್ಚಿನ ಉಷ್ಣಾಂಶ. ಆದರೆ ಇತ್ತೀಚಿನ ವರ್ಷಗಳಲ್ಲಿ ನಮ್ಮ ಭಾಗದಲ್ಲಿ ನಲವತ್ತು ಡಿಗ್ರಿ ಉಷ್ಣಾಂಶ ಏರಿಕೆಯಾದದ್ದೂ ಇದೆ. ಈ ಅತಿಯಾದ ಉಷ್ಣಾಂಶ ಅಡಿಕೆ ಸಿಂಗಾರ ಕರಟುವಲ್ಲಿ ನೇರವಾಗಿ ಕಾರಣ ಕರ್ತವಾಗಿದೆ.
ಅತಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಮಳೆ, ಅತಿ ಹೆಚ್ಚು ಉಷ್ಣಾಂಶ ಕೃಷಿ ಬೆಳೆಗಳ ಮೇಲೆ ಇಳುವರಿಯ ಮೇಲೆ ಮತ್ತು ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಈ ಸಮಶೀತೋಷ್ಣ ವಲಯದಲ್ಲಿ ಮಳೆಗಾಲ ಬೇಸಿಗೆ ಕಾಲದಂತೆ ಚಳಿಗಾಲವೂ ನಿಸರ್ಗದ ಚಟುವಟಿಕೆಗಳಿಗೆ ಅತ್ಯವಶ್ಯಕ. ಆದರೆ ಚಳಿಗಾಲ ಮಲೆನಾಡಿನಲ್ಲಿ ಇಲ್ಲವೇ ಇಲ್ಲ ಅಥವಾ ಅತಿ ಕಡಿಮೆ.
ಮಳೆಗಾಲ ನಮಗೆ ಚೆನ್ನಾಗಿ ಅನುಭವಕ್ಕೆ ಬರುತ್ತದೆ. ಬೇಸಿಗೆಯ ಸೆಖೆ ಉರಿಬಿಸಿಲೂ ಅನುಭವಕ್ಕೆ ಬರುತ್ತದೆ. ಆದರೆ ಈ ಅತಿವೃಷ್ಟಿ ಯ ಮಳೆಗಾಲ ಮತ್ತು ಅನಾವೃಷ್ಟಿಯ ಬೇಸಿಗೆ ಕಾಲ ನಮಗೆ ಅನುಭವಕ್ಕೆ ಬಂದಂತೆ “ಚಳಿಗಾಲ” ಕಳೆದು ಹೋದದ್ದೇ ಗೊತ್ತಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದೆಷ್ಟೋ ವರ್ಷದಿಂದ “ಚಳಿಗಾಲ” ಕಾಣೆಯಾಗಿದೆ.
ಬೇಸಿಗೆ ಕಾಲ ಮತ್ತು ಮಳೆಗಾಲದಂತೆ ಚಳಿಗಾಲವೂ ಈ ನಿಸರ್ಗದ ಅತ್ಯಂತ ಅವಶ್ಯಕ ಋತುಮಾನ. ಆದರೆ ಮನುಷ್ಯನ ನಿಸರ್ಗದ ಮೇಲಿನ ದಾಳಿಗೆ ಚಳಿಗಾಲ ಸಂಪೂರ್ಣ ಇಲ್ಲದಾಗಿದೆ. ಚಳಿಗಾಲ ಕೃಷಿ ಬೆಳೆಗಳಿಗೆ ಅತಿ ಮುಖ್ಯ. ಈ ಶುಷ್ಕತೆ ಕೃಷಿಗೆ ಮಾರಕವಾದ ಶಿಲೀಂಧ್ರವನ್ನ ನಾಶ ಮಾಡುತ್ತದೆ.
ಮಲೆನಾಡು ಕರಾವಳಿಯಲ್ಲಿ ಸರಿಯಾಗಿ ಜೂನ್ ನಿಂದ ಆರಂಭವಾಗಿ ಸೆಪ್ಟೆಂಬರ್ ನಲ್ಲಿ ಮಳೆಗಾಲ ಮುಗಿದು ಸರಿಯಾಗಿ ಪರಿಣಾಮಕಾರಿಯಾಗಿ ಅಕ್ಟೋಬರ್ ತಿಂಗಳಲ್ಲಿ ಚಳಿಗಾಲ ಆರಂಭವಾಗಿ ನಾಲ್ಕು ತಿಂಗಳ ಕಾಲ ಇದ್ದಿದ್ದರೆ ಮಲೆನಾಡು ಕರಾವಳಿಯಲ್ಲಿ ಎಲೆಚುಕ್ಕಿ ಶಿಲೀಂಧ್ರ ಈ ಪ್ರಮಾಣದ ಭಾದೆಯುಂಟು ಮಾಡುತ್ತಿರಲಿಲ್ಲ.
ಎಲೆಚುಕ್ಕಿ ಶಿಲೀಂಧ್ರ ರೋಗ ಬಾಧೆಗೆ ಅತಿ ಮುಖ್ಯ ಔಷಧೀ ಎಂದರೆ ಬಿಸಿಲು ಅಥವಾ ಸೆಪ್ಟೆಂಬರ್ ನಲ್ಲಿ ಮುಕ್ಕಾಲು ಪಾಲು “ಮಳೆ” ಕಡಿಮೆ ಆಗುವುದು ಮತ್ತು ಅಕ್ಟೋಬರ್ ತಿಂಗಳಲ್ಲಿ ಮಳೆ ಬಾರದಿರುವುದು. ಚಳಿಗಾಲ ಆರಂಭವಾಗುವುದು .
ಮಲೆನಾಡು ಮತ್ತು ಕರಾವಳಿಯ ಅಡಿಕೆ ಕೃಷಿಕರು ಈ ವರ್ಷ ಒಂದಷ್ಟು ಗಂಭೀರ ಚಿಂತನೆ ಮಾಡಲಿಕ್ಕಿದೆ:
ಇಷ್ಟು ಸರ್ತಿ ಎಲೆಚುಕ್ಕಿ ಶಿಲೀಂಧ್ರ ಅಡಿಕೆ ಮರದ ಸೋಗೆಯ ಮೇಲೆ ಕಾಣಿಸಿಕೊಂಡರೆ ಈ ಸರ್ತಿ ಎಲೆಚುಕ್ಕಿ ಶಿಲೀಂಧ್ರ ಅಡಿಕೆ ಗೊನೆಯ ಮೇಲೇ ದಾಳಿ ಮಾಡಿ ಅಡಿಕೆ ಫಸಲಿನ ಮೇಲೆ ಗಂಭೀರ ಪರಿಣಾಮ ಬೀರಿದೆ…
ಇಲ್ಲಿ ಅಡಿಕೆ ಬೆಳೆಗಾರರು ಚಿಂತನೆ ಮಾಡಬೇಕಾದದ್ದು ಈ ಅನಾಹುತ ಈ ವರ್ಷಕ್ಕೆ ಕೊನೆಯಾಗುತ್ತದೆಯಾ…?
ಖಂಡಿತವಾಗಿಯೂ ಇಲ್ಲ… ಮುಂದಿನ ವರ್ಷವೂ ಅಡಿಕೆ ಬೆಳೆಗಾರರು ಚೇತರಿಸಿಕೊಳ್ಳಲು ಅವಕಾಶ ಸಿಗದು ಎಂದೆನ್ನಿಸುತ್ತಿದೆ. ಏಕೆಂದರೆ ಎಲೆಚುಕ್ಕಿ ಶಿಲೀಂಧ್ರಕ್ಕೆ ಮದ್ದಿಲ್ಲ….!! ಋತುಮಾನ ಸಹಕರಿಸಿದರೆ ಮಾತ್ರ ಎಲೆಚುಕ್ಕಿ ಶಿಲೀಂಧ್ರ ನಿಯಂತ್ರಣಕ್ಕೆ ಬರಬಹುದು.
ಮಲೆನಾಡಿನಲ್ಲಿ ಈ ಹಿಂದೆ ಒಂದೊಂದು ವರ್ಷ ಅಡಿಕೆ ಕೊಳೆರೋಗ ಶಿಲೀಂಧ್ರ ಕ್ಕೆ ಫಸಲು ನಷ್ಟ ವಾಗುತ್ತಿದ್ದದ್ದು ಸಾಮಾನ್ಯ ಸಂಗತಿ. ಅಡಿಕೆ ಕೊಳೆ ಶಿಲೀಂದ್ರ ನಿಯಂತ್ರಣ ಮಾಡಬಹುದು ಆದರೆ ಎಲೆಚುಕ್ಕಿ ಶಿಲೀಂಧ್ರ ನಿಯಂತ್ರಣ ಮಾಡಲು ಅಸಾಧ್ಯವಾಗಿದೆ.
ಈ ಕಾರಣಕ್ಕೆ ಮಲೆನಾಡು ಕರಾವಳಿಯಲ್ಲಿ ನೇರವಾಗಿ ಅಡಿಕೆ ಕೃಷಿಯನ್ನೇ ನಂಬಿಕೊಂಡ ಐದು ಎಕರೆ ಯ ಒಳಗಿನ ಅಡಿಕೆ ಬೆಳೆಗಾರರು ಭವಿಷ್ಯದ ದಿನಗಳನ್ನು ಎದುರಿಸಲು ಮತ್ತು ಪರ್ಯಾಯ ಜೀವನೋಪಾಯದ ಬಗ್ಗೆ ಚಿಂತನೆ ನಡೆಸುವುದು ಅತ್ಯವಶ್ಯಕ. ಹೌದು ಈ ಹವಾಮಾನ ವೈಪರೀತ್ಯ ಅಡಿಕೆ ಒಂದು ಬೆಳೆಯಲ್ಲದೇ ಈ ಭಾಗದ ಉಳಿದ ಕೃಷಿ ಬೆಳೆಗಳ ಮೇಲೂ ದುಷ್ಪರಿಣಾಮ ಬೀರುತ್ತದೆ.
ಈ ವರ್ಷ ಅಡಿಕೆ ಕೃಷಿ ವಿಸ್ತರಣೆ ಮಾಡಬೇಕು ಎನ್ನುವವರೂ…. ಅಡಿಕೆ ಉತ್ಪತ್ತಿ ನಂಬಿಕೊಂಡು ಸಾಲ ಮಾಡುವವರೂ ಅಡಿಕೆ ಅಧಾರಿತ ಉದ್ಯೋಗ ಮಾಡಬೇಕು ಎನ್ನುವವರು…. ಮತ್ತೆ ಮತ್ತೆ ಪರಮಾರ್ಶೆ ಮಾಡಿ…
ಮಲೆನಾಡು ಕರಾವಳಿಯಲ್ಲಿ ಅಡಿಕೆಯನ್ನು ಮೊದಲ್ಗೊಂಡು ಯಾವುದೇ ಕೃಷಿ ಬೆಳೆಗೂ ಸದ್ಯ ಪೂರಕ ವಾತಾವರಣ ಇಲ್ಲ.
ಮಲೆನಾಡು – ಕರಾವಳಿಯಲ್ಲಿ ಅಡಿಕೆಯಷ್ಟು ಉತ್ತಮ ಬೆಳೆ ಇನ್ನೊಂದು ಇಲ್ಲ. ಇಲ್ಲಿ ಅಡಿಕೆ ಬೆಳೆಗೆ ಅಡಿಕೆ ಬೆಳೆಯೇ ಪರ್ಯಾಯ….!!
ಪರ್ಯಾಯಕ್ಕೆ ಸದ್ಯ ಕಾಫಿ ಮತ್ತು ಕಾಳುಮೆಣಸು ಆಯ್ಕೆಗಳು:
ಅಡಿಕೆ ಬೆಳೆಗೆ ಪರ್ಯಾಯ ಹುಡುಕುವವರು ದಯವಿಟ್ಟು ಯೂಟ್ಯೂಬ್ ನೋಡಿ “ಡ್ರ್ಯಾಗನ್ ಫ್ರೂಟ್ ” ಬೆಳೆದು ಕೋಟ್ಯಾಧೀಶರಾಗಿ , ಬಟರ್ ಫ್ರೂಟ್ ಬೆಳೆದು “ಬೆಟರ್ ಲೈಫ್ ” ಲೀಡ್ ಮಾಡಿ , “ರಾಂಬೊಟನ್ ” ಬೆಳೆದು ಬದುಕಿನಲ್ಲಿ “ರೈಂಬೋ” ನೋಡಿ ಹೀಗಿನ ಜಾಹೀರಾತು/ಕಾರ್ಯಕ್ರಮ ನೋಡಿ ಬಂಡವಾಳ ದಯವಿಟ್ಟು ಹೂಡಿ ಬಾಣಲೆಯಿಂದ ಬೆಂಕಿಗೆ ಬೀಳದಿರಿ…. ಸದ್ಯ ನಮ್ಮ ಭಾಗಕ್ಕೆ ಖಾತರಿ ಮಾರುಕಟ್ಟೆ ಇರುವ ಪರ್ಯಾಯ ಬೆಳೆ ಇಲ್ಲ…
ಅಡಿಕೆ ಉತ್ಪತ್ತಿ ಇಲ್ಲದೇ ಕಂಗೆಟ್ಟ ರೈತರು ಮತ್ತೆ ಇಂತಹ ಅನಾಹುತ ಕ್ಕೆ ಕೈ ಹಾಕಿ ಇನ್ನಷ್ಟು ಪ್ರಪಾತಕ್ಕೆ ಬೀಳದಿರಿ ಜಾಗೃತೆ…
ರೈತನ ನಷ್ಟಕ್ಕೆ ಸರ್ಕಾರ ಖಂಡಿತವಾಗಿಯೂ ಕೈ ಹಿಡಿಯೋಲ್ಲ..
ರೈತರಿಗೆ ರೈತಾಪಿ ಬದುಕಿಗೆ ರೈತರೇ ಜವಾಬ್ದಾರರು….!!
ಮಲೆನಾಡು ಕರಾವಳಿಯ ಅಡಿಕೆಯನ್ನೇ ನಂಬಿಕೊಂಡ ಚಿಕ್ಕ ಮದ್ಯಮ ವರ್ಗದ ಅಡಿಕೆ ಬೆಳೆಗಾರರು ಈ ವರ್ಷದ ಎಪ್ಪತ್ತು ಪರ್ಸೆಂಟ್ ಅಡಿಕೆ ಉತ್ಪತ್ತಿ ಕಡಿತ ಎಂಬ ವಾಸ್ತವ ಸಂಗತಿಯನ್ನು ಒಂದು ಜಾಗೃತಿಯ ಘಂಟೆ ಎಂದು ಅರ್ಥ ಮಾಡಿಕೊಂಡರೆ ಭವಿಷ್ಯ ನೆಮ್ಮದಿ…
ಏಳಿರಿ ಎಚ್ಚರವಾಗಿ ಅಡಿಕೆ ಬೆಳೆಗಾರ ಬಂಧುಗಳೇ…
ಈ ವರ್ಷದ ಎಪ್ಪತ್ತು ಪ್ರತಿಶತ ಇಳುವರಿ ಇಲ್ಲ ಎನ್ನುವ ವಿಚಾರ ಈ ವರ್ಷಕ್ಕೆ ಕೊನೆ ಅಲ್ಲ. ಇದು ಮುಂದುವರಿಯುತ್ತದೆ. ಇದು ನಿಯಂತ್ರಣವಾಗಲು ಅಡಿಕೆ ಕೊಳೆ ರೋಗ ಅಲ್ಲ…!!!
ಇದು ಔಷಧ ಇಲ್ಲದ ಅಡಿಕೆ ಎಲೆಚುಕ್ಕಿ ಶಿಲೀಂಧ್ರ ರೋಗ..
ತಕ್ಷಣಕ್ಕೆ ಋತುಮಾನಗಳು ಸರಿಹೊಂದಲ್ಲ..!!
ಹಾಗಾಗಿ ನೇರವಾಗಿ ಅಡಿಕೆ ಉತ್ಪತ್ತಿಯನ್ನೇ ನಂಬಿಕೊಂಡ ಅಡಿಕೆ ಬೆಳೆಗಾರರು ಈ ವರ್ಷದ ಎಪ್ಪತ್ತು ಪರ್ಸೆಂಟ್ ಅಡಿಕೆ ಉತ್ಪತ್ತಿ ಇಲ್ಲ ಎನ್ನುವ ವಾಸ್ತವ ಘಟನೆಯನ್ನು ಭವಿಷ್ಯಕ್ಕೂ ಮುಂದುವರಿಯುತ್ತದೆ ಎನ್ನುವ ಪ್ರಜ್ಞೆ ಮೂಡಿಸಿಕೊಂಡರೆ ಅತ್ಯುತ್ತಮ.
ವಾತಾವರಣ ಸರಿಯಾಗಿ ಎಲೆಚುಕ್ಕಿ ಶಿಲೀಂಧ್ರ ಒಂದು ಹಂತಕ್ಕೆ ನಿಯಂತ್ರಣ ಕ್ಕೆ ಬರುವ ಹೊತ್ತಿಗೆ ಮಲೆನಾಡು ಕರಾವಳಿಯ ಅಡಿಕೆ ಕೃಷಿ ಬದುಕಿಗೊಂದು ತಿರುವು ಬಂದಾಗಿರುತ್ತದೆ.
ಮಾನ್ಯ ಅಡಿಕೆ ಕೃಷಿಕ ಬಂಧುಗಳೇ… ನನ್ನ ಊಹೆ ಅಥವಾ ಅನಿಸಿಕೆ ಸುಳ್ಳಾಗಲಿ ಎಂದು ಆಶಿಸುತ್ತಿದ್ದೇನೆ. ಏಕೆಂದರೆ ನಾನೂ ಕೂಡ ಚಿಕ್ಕ ಅಡಿಕೆ ಬೆಳೆಗಾರ.ಈ ಎಲೆಚುಕ್ಕಿ ಶಿಲೀಂಧ್ರ ರೋಗ ಬಾಧೆಯಿಂದಾದ ಈ ಎಪ್ಪತ್ತು ಪರ್ಸೆಂಟ್ ಉತ್ಪತ್ತಿ ಕಡಿಮೆ ನಷ್ಟದ ಸಮಸ್ಯೆ ಗೆ ಸರ್ಕಾರಗಳು, ರಾಜಕೀಯ ಪಕ್ಷಗಳು ಯಾರೂ ಪರಿಹಾರ ಕೊಡೋಲ್ಲ..
ನಾವು ಅಡಿಕೆ ಬೆಳೆಗಾರರು ಯಾರೋ ನಮ್ಮ ಜೊತೆಗೆ ಇದ್ದಾರೆ ಎನ್ನುವ ಭ್ರಮೆಯಿಂದ ಹೊರಬರಬೇಕು…
ಅಡಿಕೆ ಬೆಳೆಗೊಂದಷ್ಟು ಪೌಷ್ಟಿಕಾಂಶದ ಗೊಬ್ಬರ ನೀಡಿ. ಯಾರೋ ಕಂಪನಿಯವರು ನಮ್ಮ ಉತ್ಪನ್ನ ಬಳಸಿ ಎಲೆಚುಕ್ಕಿ ರೋಗ ವಾಸಿಯಾಗುತ್ತದೆ ಅಂತ ಅವರ ಔಷಧ ಗೊಬ್ಬರ ಬಳಸಬೇಡಿ. ಇದೂವರೆಗೂ ಎಲೆಚುಕ್ಕಿ ಶಿಲೀಂಧ್ರ ಬಾಧೆ ಸಂಪೂರ್ಣ ನಿವಾರಣೆಯಾಗುವ ಔಷಧ ಬಂದಿಲ್ಲ. ಈ ವಿಚಾರ ಜ್ಞಾಪಕದಲ್ಲಿರಲಿ ಬಂಧುಗಳೇ….
ಮಲೆನಾಡು ಕರಾವಳಿಯ ಅಡಿಕೆ ಬೆಳೆಗಾರರಲ್ಲಿ ಮುಕ್ಕಾಲು ಪಾಲು ಅಡಿಕೆ ಬೆಳೆಗಾರರಿಗೆ ಅಡಿಕೆ ಬೆಳೆ “ಬರಡೆಮ್ಮೆ ಹಾಲು” ಕೊಟ್ಟಷ್ಟು ದಿನ ಕರೆದುಕೊಂಡ ಹಾಗೆ ಅಡಿಕೆ ಉತ್ಪತ್ತಿ ಬಂದಷ್ಟು ದಿನ ಕೊಯ್ದು ಮಾರಾಟ ಮಾಡುವುದು. ಏಕೆಂದರೆ ಬಹುತೇಕ ಅಡಿಕೆ ಬೆಳೆಗಾರರ ಮನೆಯಲ್ಲಿ ಅಡಿಕೆ ಕೃಷಿ ಮುಂದುವರಿಸಿ ಕೊಂಡು ಹೋಗುವ ಮುಂದಿನ ಪೀಳಿಗೆ ಇಲ್ಲ. ಹೊರಗೆ ದುಡಿಯುತ್ತಿರುವ ಅವರ ಮಕ್ಕಳಿಗೆ ಅಡಿಕೆ ಉತ್ಪತ್ತಿ ಮುಖ್ಯ ಅಲ್ಲ…!! ಹಾಗಾಗಿ ತೀರಾ ಕಡಿಮೆ ಪ್ರಮಾಣದಲ್ಲಿ ಕರಾವಳಿ ಮಲೆನಾಡಿನಲ್ಲಿ ನೇರವಾಗಿ ಅಡಿಕೆ ಕೃಷಿಯನ್ನೇ ನೆಚ್ಚಿಕೊಂಡ ಅಡಿಕೆ ಬೆಳೆಗಾರರಿರುವುದು. ಇಂತಹ ಅಡಿಕೆ ಬೆಳೆಗಾರರು ನಮ್ಮ ಜೊತೆಗೆ ಯಾರೂ ಇಲ್ಲ. ಇದನ್ನು ಹೆಚ್ಚು ನಂಬಿ ಬಾರ ಹಾಕಿ ಜೀವನ ಮುಂದುವರಿಸಿಕೊಂಡು ಹೋಗುವುದು ತೀರಾ ಅಪಾಯಕಾರಿ… ಜಾಗೋ ಅಡಿಕೆ ಬೆಳೆಗಾರ ಜಾಗೋ….
ಇದು “ಅಂತ್ಯ ಅಲ್ಲ ಆರಂಭ”… ಅಷ್ಟೇ…
ವಂದನೆಗಳು
ಪ್ರಬಂಧ ಅಂಬುತೀರ್ಥ
9481801869