ಹಾವೇರಿ: ಸಾಂಪ್ರದಾಯಿಕ ಜ್ಞಾನ ಮತ್ತು ನಂಬಿಕೆಗಳ ಆಧಾರದಲ್ಲಿ ಮೌಖಿಕವಾಗಿ ಬೆಳೆದು ಬಂದ ಸಂಸ್ಕೃತಿಯ ಸಿದ್ಧಾಂತವೇ ಜನರಿಂದ ಬಂದ ಜನಪದ ಸಾಹಿತ್ಯ. ಬಾಯಿಂದ ಬಾಯಿಗೆ ಬಂದ ಗದ್ಯ, ಪದ್ಯ, ಪುರಾಣಗಳು ಒಗಟುಗಳು, ನಾಟಕಗಳು, ನಿರೂಪಣೆಗಳು, ಆಚರಣೆಗಳು, ಜಾನಪದ ಜಗತ್ತನ್ನು ಕಟ್ಟಿಕೊಟ್ಟಿವೆ ಎಂದು ಶಿಕ್ಷಣ ತಜ್ಞ ಲೇಖಕ ಡಾ.ಜಿ.ಎ. ಹೆಗಡೆ ಸೋಂದಾ ನುಡಿದರು.
ಅವರು ಶಿಗ್ಗಾಂವ್ ತಾಲೂಕಿನ ಗೋಟಗೋಡಿ ಉತ್ಸವ್ ರಾಕ್ ಗಾರ್ಡನ್ ನ ಜಾನಪದ ರಂಗ ಮಂದಿರದಲ್ಲಿ ಹೊಂಗಿರಣ ಫೌಂಡೇಷನ್ ಶಿರಸಿ ಏರ್ಪಡಿಸಿದ ಮಕ್ಕಳ ಜಾನಪದ ಕಮ್ಮಟ ಉದ್ಘಾಟಿಸಿ ಮಾತನಾಡುತ್ತಿದ್ದರು.
ಪ್ರಪಂಚದಲ್ಲಿ ಬರವಣಿಗೆಯ ಬಳಕೆ ಬೆಳದಂತೆ ಲಿಖಿತ ದಾಖಲೆಗೆ ಮಹತ್ವ ಬಂತು. ಓದು ಬರಹಕ್ಕೆ ಒಗ್ಗಿಕೊಂಡಿರದ ಜನರಿಂದಲೇ ಜಾನಪದ ಸಾಹಿತ್ಯವು ಮೌಖಿಕವಾಗಿ ವರ್ಗಾವಣೆ ಆಗುತ್ತಾ ಬಂದು ಗ್ರಾಂಥಿಕವಾಗಿ ದಾಖಲೆ ಆಗುತ್ತ ಬಂದಿರುವುದು ನಾಡಿನ ಸೌಭಾಗ್ಯ ಎಂದರು. ಮುಖ್ಯ ಅತಿಥಿ ಸ್ಥಾನದಿಂದ ಹಿರಿಯ ಸಾಹಿತಿ ಮನೋಹರ ಮಲ್ಮನೆ ಮಾತನಾಡಿ ಜಾನಪದ ಸಾಹಿತ್ಯವು ಶಿಷ್ಠ ಸಾಹಿತ್ಯಕ್ಕೆ ಪ್ರೇರಣೆ ನೀಡಿದೆ. ಬದುಕನ್ನು ಜೀವಂತವಾಗಿಸಿದೆ ಎಂದರು. ಹಾಗಾಗೀ ಎಂದಿಗೂ ಸಾವಿರದ ಸದಾ ಜೀವಂತಿಕೆ ಇರುವ ಸಾಹಿತ್ಯ ಪ್ರಾಕಾರ ಜಾನಪದವಾಗಿದೆ ಎಂದರು.
ನಾಟಕಕರ್ತ ಕಲಾವಿದ ಹನುಮಂತ ಸಾಲಿ ಮಾತನಾಡಿ ಜಾನಪದ ರಂಗ ಭೂಮಿಗೆ ಜನಪದರ ನಾಟಕ ಮಾಧ್ಯಮವು ಜೀವಾಳವಾಗಿದೆ. ಉತ್ತರ ಕನಾಟಕದ ದೊಡ್ಡಾಟಗಳ ಪರಂಪರೆ ಅವನತಿಯ ಅಂಚಿನಲ್ಲಿ ಇರುವುದು ವೀಷಾದನೀಯ ಎಂದರು. ಅಧ್ಯಕ್ಷತೆ ವಹಿಸಿದ ಜಾನಪದ ತಜ್ಞೆ ಸರಿತಾ ಪಾಟೀಲ್ ರಾಯಭಾಗ ಜಾನಪದ ರಂಗ ಮಂದಿರದಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿಶೇಷ ಕಮ್ಮಟವು ಜಾನಪದ ಸಾಹಿತ್ಯದ ಕುರಿತಾಗಿ ಉತ್ತಮ ಸಂವಾದಿಯಾಗಿ ಜಾಗೃತಿ ಮೂಡಿಸಲು ಯಶಸ್ವಿಯಾಗಿದೆ ಎಂದರು. ಪ್ರದೀಪ ಸಾಲಿ ರಾಯಭಾಗ ವಂದಿಸಿದರು.