ಶಿರಸಿ: ನಗರದ ಲಯನ್ಸ್ ಕ್ಲಬ್ನ ಆಶ್ರಯದಲ್ಲಿ ಶಿರಸಿಯ ಲಯನ್ಸ್ ಶಾಲಾ ಆವರಣದಲ್ಲಿ ಎರಡು ದಿನಗಳ ‘ದಿಶಾ’-ಜಿಲ್ಲಾ ಸೆಮಿನಾರ್ನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಾಗಾರದಲ್ಲಿ ಶ್ರೀ ರಾಜರಾಜೇಶ್ವರೀ ವಿದ್ಯಾಸಂಸ್ಥೆಯ ಶ್ರೀನಿಕೇತನ ಶಾಲೆ, ಇಸಳೂರಿನ ಸುಮಾರು 60 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಅನೇಕ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದವು. ಹುಡುಗರ ವಿಭಾಗದ ವಾಲಿಬಾಲ್ ಪಂದ್ಯಾವಳಿಯಲ್ಲಿ ಅಥರ್ವ, ಮನೋಭಿರಾಮ್, ಗಂಧರ್ವ, ಶೌರ್ಯ, ವೀರೇಶ್, ಭಾರ್ಗವ್, ಮಯೂರ್ ಇವರ ತಂಡವು ಪ್ರಥಮ ಸ್ಥಾನವನ್ನು, ಮತ್ತು ಹುಡುಗಿಯರ ವಿಭಾಗದಲ್ಲಿ ದಿವ್ಯ, ಖುಷಿ, ಆರ್ಣಾ, ವೈಷ್ಣವಿ, ವರ್ಣಿತಾ, ವೇದಾ ಹಾಗೂ ಮೀನಾಕ್ಷಿ ಇವರ ತಂಡವು ದ್ವಿತೀಯ ಸ್ಥಾನವನ್ನು ಪಡೆದಿರುತ್ತವೆ. ಹುಡುಗರ ಕಬಡ್ಡಿ ಪಂದ್ಯಾವಳಿಯಲ್ಲಿ ಗಂಧರ್ವ, ಮಯೂರ್, ತೇಜಸ್, ಪ್ರತ್ಯಕ್ಷ, ಹರ್ಷಿತ್, ದೃಶ್ಯ ಹಾಗೂ ಶೌರ್ಯ ಇವರ ತಂಡವು ದ್ವಿತೀಯ ಸ್ಥಾನವನ್ನು ಗೆದ್ದುಕೊಂಡಿರುತ್ತದೆ.
ಅಂತೆಯೇ, ಲಯನ್ಸ್ ಅಂತರ್ರಾಷ್ಟ್ರೀಯ ಪೀಸ್ ಪೋಸ್ಟರ್ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯರಾದ ಕುಮಾರಿ ಸಾನ್ವಿ ನಾಯ್ಕ ಪ್ರಥಮ ಸ್ಥಾನ, ಶ್ರಾವಣಿ ಭಟ್ ದ್ವಿತೀಯ ಸ್ಥಾನ ಹಾಗೂ ಚಿನ್ಮಯೀ ಭಟ್ ತೃತೀಯ ಸ್ಥಾನವನ್ನು ಪಡೆಯುವ ಮೂಲಕ ಶಾಲೆಗೆ ಕೀರ್ತಿ ತಂದಿರುತ್ತಾರೆ. ಕಾರ್ಯಾಗಾರದಲ್ಲಿ ಭಾಗವಹಿಸಿದ ಎಲ್ಲಾ ಲಿಯೋ ವಿದ್ಯಾರ್ಥಿಗಳಿಗೂ ವಿಶೇಷ ಕಿಟ್ನ್ನು ನೀಡಿ, ಅವರಲ್ಲಿ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಪ್ರಯೋಜನ ಹಾಗೂ ದೇಶದ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತು ಅರಿವು ಮೂಡಿಸಲಾಯಿತು. ಅನಂತರ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ವಿದ್ಯಾರ್ಥಿಗಳ ಈ ಮಹತ್ತರ ಸಾಧನೆಯನ್ನು ಮೆಚ್ಚಿದ ಶ್ರೀನಿಕೇತನ ಶಾಲೆಯ ಪ್ರಾಂಶುಪಾಲರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಶಿಕ್ಷಕ ವೃಂದದವರು ಹರ್ಷ ವ್ಯಕ್ತಪಡಿಸಿರುತ್ತಾರೆ.