ಶಿರಸಿ: ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಮೇಲೆ ಎಲ್ಲ ಅಭಿವೃದ್ಧಿ ಕೆಲಸಗಳು ಅಧೋಗತಿಯತ್ತ ಸಾಗುತ್ತಿರುವುದು ರಾಜ್ಯಾದ್ಯಂತ ಕಂಡು ಬರುತ್ತಿದೆ. ಅದರಲ್ಲಿಯೂ ಪ್ರಮುಖವಾಗಿ ಗುತ್ತಿಗೆದಾರರ ಸ್ಥಿತಿಯಂತೂ ತೀರಾ ದಯನೀಯವಾಗಿದ್ದು, ಗುತ್ತಿಗೆದಾರರಿಗೆ ನೀಡಬೇಕಾಗಿರುವ ಸಂಪೂರ್ಣ ಹಣವನ್ನು ಈ ಕೂಡಲೇ ರಾಜ್ಯ ಸರಕಾರ ಬಿಡುಗಡೆಗೊಳಿಸಬೇಕು ಎಂದು ಜಿಲ್ಲಾ ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ಕಳೆದ ಎರಡು ವರ್ಷದಿಂದ ಗುತ್ತಿಗೆದಾರರ ಪರಿಸ್ಥಿತಿ ಹದಗೆಟ್ಟಿದೆ. ಯಾವುದೇ ಹೊಸ ಅಭಿವೃದ್ಧಿ ಕೆಲಸಗಳೇ ನಡೆಯುತ್ತಿಲ್ಲ, ಜೊತೆಗೆ ಈಗಾಗಲೇ ಹಣ ಹಾಕಿ ಕೆಲಸ ಮಾಡಿರುವ ಗುತ್ತಿಗೆದಾರರಿಗೆ ಕೋಟ್ಯಾಂತರ ಹಣವನ್ನು ಸರಕಾರ ಬಾಕಿ ಇರಿಸಿಕೊಂಡಿದೆ. ಕೆಲಸ ಪೂರ್ಣಗೊಳಿಸಬೇಕೆಂದು ಸಾಲ ಮಾಡಿ ಹಣ ಹಾಕಿ ಕೆಲಸ ಮಾಡಿರುವ ಗುತ್ತಿಗೆದಾರರ ಸ್ಥಿತಿ ಕಷ್ಟಕರವಾಗಿದೆ. ಬ್ಯಾಂಕಿನ ಬಡ್ಡಿ ಕಟ್ಟಲೂ ಹಣವಿಲ್ಲದೇ ತಮ್ಮ ಬಳಿಯಿದ್ದ ಜೆಸಿಬಿ, ಹಿಟಾಚಿಗಳನ್ನು ಮಾರುವ ಪರಿಸ್ಥಿತಿ ಹಲವರದ್ದಾಗಿದ್ದು , ಹಲವಾರು ಜನ ಮಾರಿಕೊಂಡಿದ್ದಾರೆ ,ಇನ್ನು ಗುತ್ತಿಗೆದಾರರ ಕಿಡ್ನಿ ಮಾರುವುದೊಂದು ಬಾಕಿ ಇರುವಂತೆ ಕಾಣುತ್ತದೆ. ಅಂತಹ ಹದಗೆಟ್ಟ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ನಿರ್ಮಾಣ ಮಾಡಿದೆ.
ಇದರ ಜೊತೆಗೆ ನಮ್ಮ ಜಿಲ್ಲೆಯಲ್ಲಿ ಈಗಾಗಲೇ ರಾಜ್ಯ ಹೆದ್ದಾರಿ, ಜಿಲ್ಲಾ ರಸ್ತೆಗಳ ಹೊಂಡ ಮುಚ್ಚಿರುವ ಹಣವನ್ನೂ ಸಹ ಕಳೆದೊಂದು ವರ್ಷದಿಂದ ಸರಕಾರ ಬಿಡುಗಡೆ ಮಾಡಿಲ್ಲ. ಹಿಂದಿನ ನಿಯಮಾವಳಿ ಪ್ರಕಾರ ಕೆಲಸ ಮುಗಿದ ಎರಡು ತಿಂಗಳೊಳಗಾಗಿ ಹಣವನ್ನು ಗುತ್ತಿಗೆದಾರರಿಗೆ ನೀಡಬೇಕಿತ್ತು. ಆದರೆ ಒಂದು ವರ್ಷ ಕಳೆದರೂ ಸರಕಾರಕ್ಕೆ ಇದರ ನೆನಪೇ ಇಲ್ಲವಾಗಿದೆ. ಹೀಗಾದರೆ ಬಡ ಗುತ್ತಿಗೆದಾರರು ಏನು ಮಾಡಬೇಕು. ಇದು ಹೀಗೆಯೇ ಮುಂದುವರೆದರೆ ಮುಂದೆ ಗುತ್ತಿಗೆ ಕೆಲಸ ಮಾಡುವವರೇ ಇಲ್ಲದಂತಾಗುವುದು ನಿಶ್ಚಿತ ಎಂದರು.
ಲೋಕೋಪಯೋಗಿ ಇಲಾಖೆಯು ನೀಡಿದ ಮಾಹಿತಿಯಂತೆ ನಮ್ಮ ಜಿಲ್ಲೆಯಲ್ಲಿ 2024-25 ನೇ ಸಾಲಿನ ಅಂದರೆ ಕಳೆದ ಒಂದು ವರ್ಷಕ್ಕೂ ಅಧಿಕ ಸಮಯದಿಂದ ರಾಜ್ಯ ಹೆದ್ದಾರಿ ನಿರ್ವಹಣೆ ಮತ್ತು ಜಿಲ್ಲಾ ಮುಖ್ಯ ರಸ್ತೆ ಸುಧಾರಣೆಗೆ ಅಂದರೆ ರಸ್ತೆ ಹೊಂಡ ಮುಚ್ಚಿದ್ದರ ಸಂಬಂಧಿಸಿ ಸುಮಾರು 50 ಕ್ಕೂ ಅಧಿಕ ಗುತ್ತಿಗೆದಾರರಿಗೆ ಸರಕಾರದಿಂದ ₹ 11 ಕೋಟಿ 38 ಲಕ್ಷ ಗಳಷ್ಟು ಹಣ ಬರತಕ್ಕದ್ದು ಬಾಕಿ ಇದೆ. ಹೀಗೆ ಒಂದು, ಕಳೆದ ವರ್ಷ ರಸ್ತೆಯ ಹೊಂಡ ಮುಚ್ಚಿರುವ ಹಣವನ್ನೂ ಸರಕಾರಕ್ಕೆ ನೀಡಲಾಗಲಿಲ್ಲ ಎಂದಾದರೆ ಯಾವ ರೀತಿ ಆಡಳಿತ ನಡೆಸುತ್ತಿದೆ ಎಂಬುದನ್ನು ಜನತೆ ಪರಾಮರ್ಶಿಸಬೇಕಿದೆ. ಇದರ ಜೊತೆಗೆ ಹೆಚ್ಚಿನ ಕಮಿಷನ್ ನೀಡುವ ಗುತ್ತಿಗೆದಾರರಿಗೆ ಮಾತ್ರ ಸರಕಾರದಿಂದ ಹಣ ಬಿಡುಗಡೆ ಭಾಗ್ಯ ದೊರೆಯುತ್ತಿದೆ ಎಂಬ ಆರೋಪವೂ ಪ್ರಮುಖವಾಗಿ ಕೇಳಿ ಬಂದಿದೆ. ಅಲ್ಲದೇ ರಾಜ್ಯ ಗುತ್ತಿಗೆದಾರರ ಸಂಘದ ಪ್ರಮುಖರಾಗಿರುವ ಕೆಂಪಣ್ಣನವರು ರಾಜ್ಯ ಸರಕಾರದ ವಿರುದ್ಧ 70% ಕಮಿಷನ್ ಆರೋಪವನ್ನೂ ಮಾಡಿರುವುದು ಈಗಾಗಲೇ ಸಾರ್ವಜನಿಕವಾಗಿದೆ. ಈ ನಿಟ್ಟಿನಲ್ಲಿ ಸರಕಾರ ಕೂಡಲೇ ಹಣ ಬಿಡುಗಡೆಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಗುತ್ತಿಗೆದಾರರ ಪರ ಹೋರಾಟ ಅನಿವಾರ್ಯ:
ಜಿಲ್ಲೆಯಲ್ಲಿ ಸರಕಾರದ ಪ್ರಮುಖ ಭಾಗವಾಗಿರುವ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ, ಉಸ್ತುವಾರಿ ಸಚಿವ ವೈದ್ಯ, ಹಿರಿಯ ಶಾಸಕ ದೇಶಪಾಂಡೆ ಒಳಗೊಂಡು ಕಾಂಗ್ರೆಸಿನ ಶಾಸಕರು ಈ ಕೂಡಲೇ ಗುತ್ತಿಗೆದಾರರ ಪರವಾಗಿ ಧ್ವನಿ ಎತ್ತುವುದರ ಜೊತೆಗೆ ಆದಷ್ಟು ಶೀಘ್ರವಾಗಿ ಹಣವನ್ನು ಬಿಡುಗಡೆಗೊಳಿಸುವಂತಾಗಬೇಕು,ಇಲ್ಲವಾದರೆ ಹೋರಾಟ ಅನಿವಾರ್ಯ ಎಂದರು.