ದಾಂಡೇಲಿ : ನಾವು ನಮ್ಮ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸಿಕೊಂಡು ಬಂದಿದ್ದೇವೆ. ಆಟೋ, ಟ್ಯಾಕ್ಸಿ ಚಾಲಕರ ಸೇವೆಯನ್ನು ಗುರುತಿಸಿ ಸೇಂಟ್ ಮೈಕಲ್ ಕಾನ್ವೆಂಟ್ ಆಂಗ್ಲ ಮಾಧ್ಯಮ ಶಾಲೆ ಪ್ರತಿ ವರ್ಷವೂ ನಮ್ಮನ್ನು ಗೌರವಿಸುತ್ತಾ ಬಂದಿರುವುದು, ನಮ್ಮ ಪ್ರಾಮಾಣಿಕ ಕರ್ತವ್ಯ ಬದ್ಧತೆಗೆ ದೊರೆತ ಬಹುದೊಡ್ಡ ಶಕ್ತಿಯಾಗಿದೆ ಎಂದು ದಾಂಡೇಲಿಯ ಆಟೋ ಚಾಲಕರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷರಾದ ದಾಸ್ ಯಾಕುಬ್ ವಿನಿಕೊಂಡ ಹೇಳಿದರು.
ಅವರು ನಗರದ ಸೇಂಟ್ ಮೈಕಲ್ ಕಾನ್ವೆಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲೆಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರುವ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಪ್ರತಿವರ್ಷದಂತೆ ಈ ವರ್ಷವೂ ಗೌರವಿಸಿ, ಅಭಿನಂದಿಸುವ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಕೃತಜ್ಞತೆಯನ್ನು ಸಲ್ಲಿಸಿ ಮಾತನಾಡುತ್ತಿದ್ದರು. ಮಕ್ಕಳು ದೇವರಿಗೆ ಸಮಾನ. ಮಕ್ಕಳು ತೋರುವ ಪ್ರೀತಿ, ವಿನಯತೆ, ವಿಧೇಯತೆ ನಮ್ಮ ಸೇವೆಗೆ ಅಮೂಲ್ಯ ಪ್ರೇರಣೆಯಾಗಿದೆ ಎಂದರು.
ಸೇಂಟ್ ಮೈಕಲ್ ಕಾನ್ವೆಂಟ್ ಶಾಲೆಯ ಮುಖ್ಯೋಪಾಧ್ಯಾಯನಿ ಸಿಸ್ಟರ್ ಕ್ಲಾರೆಟ್ ನಾವು ಮಾಡುವ ಕೆಲಸವನ್ನು ಅತ್ಯಂತ ಬದ್ಧತೆಯಿಂದ ಗೌರವಯುತವಾಗಿ ಮಾಡಿದಾಗ ಅದಕ್ಕೆ ಫಲ ಕಟ್ಟಿಟ್ಟ ಬುತ್ತಿ. ಆಟೋ ಚಾಲಕರು ಮತ್ತು ಟ್ಯಾಕ್ಸಿ ಚಾಲಕರು ನಮ್ಮ ಶಾಲೆಯ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಅತ್ಯಂತ ಪ್ರೀತಿಯಿಂದ ಕರೆದುಕೊಂಡು ಹೋಗುವುದನ್ನು ಬರುವುದನ್ನು ನಾವು ನೋಡುತ್ತಿದ್ದೇವೆ. ಅವರ ಸೇವೆಯನ್ನು ಗುರುತಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ತಮ್ಮನ್ನು ಗುರುತಿಸಿ ಗೌರವಿಸಿದ ಸೇಂಟ್ ಮೈಕಲ್ ಕಾನ್ವೆಂಟ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಕ್ಲಾರೆಟ್ ಅವರನ್ನು ಆಟೋ ಚಾಲಕರ ಪರವಾಗಿ ಆಟೋ ಚಾಲಕರಾದ ದಾಸ್ ಯಾಕುಬ್ ವಿನಿಕೊಂಡ, ಸಮೀರ್ ಅಂಕೋಲೆಕರ, ಶಬ್ಬೀರ್ ಅಹಮ್ಮದ್ ಮುಲ್ಲಾ, ರಾಜೇಸಾಬ್, ವಿಜಯ್ ಕೊಣ್ಣೂರು, ಇಕ್ಬಾಲ್ ಧಾರವಾಡ, ಅಬ್ರಾಹಂ ಜಾನ್ ದಾರ್ಲ, ಸಿಕಂದರ್ ಮೊದಲಾದವರು ಸನ್ಮಾನಿಸಿ, ಗೌರವಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು, ಬೋಧಕೇತರ ಸಿಬ್ಬಂದಿಗಳು ಹಾಗೂ ಆಟೋ ಮತ್ತು ಟ್ಯಾಕ್ಸಿ ಚಾಲಕರು ಉಪಸ್ಥಿತರಿದ್ದರು.