ಯಲ್ಲಾಪುರ: ದೇವಾಲಯಗಳು ಸೇವಾ ಕೇಂದ್ರಗಳಾಗಬೇಕು. ಇನ್ನಷ್ಟು ಹೆಚ್ಚು ಒಳ್ಳೆಯ ಕೆಲಸ ಆಗಬೇಕು. ಅದನ್ನು ಗುರುತಿಸುವ ಕೆಲಸ ಆಗಬೇಕು ಎಂದು ತುಮಕೂರು ಸ್ವಾಮಿ ವಿವೇಕಾನಂದ ಮಠದ ಶ್ರೀ ವೀರೇಶಾನಂದ ಸ್ವಾಮೀಜಿ ನುಡಿದರು.
ಅವರು ಆನಗೋಡಿನ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸಾಮಾಜಿಕ ಮುಂದಾಳು ಗಣಪತಿ ಮಾನಿಗದ್ದೆಯವರ ಷಷ್ಠಿಪೂರ್ತಿ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ದಿವ್ಯ ಸಾನ್ನಿದ್ಯ ವಹಿಸಿ ವಿಶೇಷ ಉಪನ್ಯಾಸ ನೀಡಿದರು. ಮಕ್ಕಳನ್ನು ವಿಚಾರವಮತರಾಗಿ ಚಿಂತನಶೀಲರನ್ನಾಗಿ ಮಾಡದಿದ್ದರೆ ನಾವು ನಮ್ಮತನವನ್ನು ಕೊಂದುಕೊಳ್ಳುತ್ತೇವೆ. ನಮ್ಮ ಶ್ರಮದ ಫಲ ಯಾರೋ ಉಣ್ಣುತ್ತಾರೆ. ನಮ್ಮನ್ನಾಳುವವರು ಪರಮಸುಖಿಗಳು ಆದರೆ ನಮ್ಮನ್ನು ದುಖಿಗಳನ್ನಾಗಿಸುತ್ತಾರೆ. ಭಾರತೀಯರು ಧರ್ಮದ ನಂಬಿಕೆಯುಳ್ಳವರು.
ಧರ್ಮದ ಬೆಳಕಿನಲ್ಲಿಯೇ ನಮ್ಮ ನಡೆ ಇರಬೇಕು.ಈ ಮೂಲಕ ನಡೆದು ಭಾರತವನ್ನು ಮುನ್ನೆಡಸಬೇಕಾಗಿದೆ.
ಪ್ರಪಂಚದ ಉಳಿವು ಭಾರತವನ್ನು ಅವಲಂಬಿಸಿದೆ ಎಂದು ಅಂದು ವಿವೇಕಾನಂದರು ಹೇಳಿದ್ದರು ಎನ್ನುವುದು. ತಿಪ್ಪೆನೊಣಗಳಾಗದೇ ಜೇನ್ನೊಣಗಳಾಗಬೇಕು ಎಂದರು.
ತುಮಕೂರು ಮತ್ತು ರಾಮನಗರ ವಿವೇಕಾನಂದ ಮಠದ ಉಸ್ತುವಾರಿ ಪರಮಾನಂದ ಸ್ವಾಮೀಜಿ ಮಾತನಾಡಿ ಬದುಕಿನ ಸಾರ್ಥಕತೆ ಇರುವುದು ನಾವು ಮಾಡುವ ಉತ್ತಮ ಸೇವೆಯಿಂದ.ಭಗವಂತನ ದಿವ್ಯತೆಯನ್ನು ಪಡೆದು ಸಮಾಜಕ್ಕೆ ಕೊಡುವ ವ್ಯಕ್ತಿಗಳು ನಾವಾಗೋಣ. ಇತರರಿಗಾಗಿ ಬದುಕುವ ಜೀವನವೂ ನಮ್ಮದಾಗಬೇಕು ಎಂದರು.
ಈ ಸಂದರ್ಭದಲ್ಲಿ ಶ್ರೀ ಗಣಪತಿ ಮಾನಿಗದ್ದೆ ಅಭಿನಂದನಾ ಸಮಿತಿಯಿಂದ ಗಣಪತಿ ಮಾನಿಗದ್ದೆ ದಂಪತಿಯರಿಗೆ ನಾಗರೀಕ ಸಂಮಾನ ನೆರವೇರಿಸಲಾಯಿತು. ತುಮಕೂರು ಮತ್ತು ರಾಮನಗರ ವಿವೇಕಾನಂದ ಮಠದ ಪರಮಾನಂದ ಸ್ವಾಮೀಜಿ,ಅಭಿನಂದನಾ ಸಮಿತಿಯ ಸಹಸಂಚಾಲಕ ನರಸಿಂಹ ವಡಗಿರಿಪಾಲ್,ಸದಸ್ಯರುಗಳಾದ ಗಿರೀಶ ಭಟ್ಟ ಅಗ್ಗಾಶಿಮನೆ,ಶ್ರೀಕೃಷ್ಣ ಪಾಟೀಲ್,ವೇ.ವಿಘ್ನೇಶ್ವರ ಭಟ್ ಬಿಸಗೋಡ,ವೇ.ಗಣಪತಿ ಭಟ್ ಕೊರಗಿ, ಕೆ.ಎಸ್.ಭಟ್ಟ ಆನಗೋಡ ಹಾಗೂ ಗಣಪತಿ ಮಾನಿಗದ್ದೆ ಧರ್ಮಪತ್ನಿ ಕಮಲಾಕ್ಷಿ,ಮತ್ತು ಕುಟುಂಬದವರು ಉಪಸ್ಥಿತರಿದ್ದರು. ಸಮಿತಿಯ ಗೌರವಾಧ್ಯಕ್ಷ ಅಣ್ಣಯ್ಯ ಭಟ್ಟ ಗುಡೇಪಾಲ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ವಿಶ್ವದರ್ಶನ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಅಭಿನಂದನಾ ನುಡಿಗಳನ್ನಾಡಿದರು. ಅಭಿನಂದನಾ ಸಮಿತಿಯ ಸದಸ್ಯ ಗಣೇಶ ನೆರ್ಲೆಮನೆ ಗಣೇಶ ಸ್ತುತಿಗೈದರು. ಸಮಿತಿಯ ಸಂಚಾಲಕ ನರಸಿಂಹ ಸಾತೊಡ್ಡಿ ಸ್ವಾಗತಿಸಿ ಪ್ರಾಸ್ತಾವಿಕಗೈದರು.ಸಮಿತಿಯ ಸದಸ್ಯೆ ಡಾ. ಚಂದ್ರಪ್ರಭಾ ಪ್ರಟಗಾರ ಸನ್ಮಾನಪತ್ರ ವಾಚಿಸಿದರು. ಅರ್ಥಧಾರಿ ಎಂ.ಎನ್.ಹೆಗಡೆ ಹಲವಳ್ಳಿ ಪರಿಚಯಿಸಿದರು. ಅಧ್ಯಕ್ಷ ಸತೀಶ ಯಲ್ಲಾಪುರ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಗೋಪಾಲಕೃಷ್ಣ ಸನ್ನಿಧಿಯಲ್ಲಿ ಇದಕ್ಕೂ ಪೂರ್ವದಲ್ಲಿ ಮದ್ಯಾಹ್ನ ಷಷ್ಠಿಪೂರ್ತಿಯ ಅಂಗವಾಗಿ ವೈದಿಕ ಕರ್ಮಾಂಗ,ಉಗ್ರರಥ ಶಾಂತಿ ನಡೆಯಿತು. ಮಹಿಳೆಯರು ಭಗವದ್ಗೀತಾ ಪಠಣ ನಡೆಸಿಕೊಟ್ಟರು. ರಾತ್ರಿ ಜಿಲ್ಲೆಯ ಪ್ರಸಿಧ್ದ ಕಲಾವಿದರಿಂದ ರಾಮಾಂಜನೇಯ ಯಕ್ಷಗಾನ ಪ್ರದರ್ಶನಗೊಂಡಿತು.