ಯಲ್ಲಾಪುರ: ಯಲ್ಲಾಪುರ ಕ್ರಿಕೆಟ್ ಅಸೋಸಿಯೇಷನ್ ಅಡಿಯಲ್ಲಿ ಕಾಳಮ್ಮನಗರದ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ವಾಯ್.ಪಿ.ಎಲ್. 4 ನೇ ಆವೃತ್ತಿಯಲ್ಲಿ ಎಂ.ಎನ್.ಎಸ್ ಬುಲ್ಸ್ ತಂಡ ಗೆಲುವು ಸಾಧಿಸಿದೆ.
ನಾಗರಾಜ ಕವಡಿಕೆರೆ ನೇತೃತ್ವದ ಎಂ.ಎನ್.ಎಸ್. ಬುಲ್ಸ್ ತಂಡ ಅಂತಿಮ ಪಂದ್ಯದಲ್ಲಿ ರಾಘು ಜಡ್ಡಿಪಾಲ ನೇತೃತ್ವದ ಆರ್.ಬಿ.ಟೈಗರ್ಸ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟಕ್ಕೆ ಏರಿತು. ಪಂದ್ಯಾವಳಿಯಲ್ಲಿ ಉತ್ತಮ ಬೌಲರ್ ಆಗಿ ಎಂ.ಎನ್.ಎಸ್. ಬುಲ್ಸ್ ಮಣಿಕಂಠ ಪಟಗಾರ, ಉತ್ತಮ ಬ್ಯಾಟ್ಸ್‌ಮನ್ ಆಗಿ ಆರ್.ಬಿ.ಟೈಗರ್ ನಾಗರಾಜ ರಾಯ್ಕರ್, ಉತ್ತಮ ಕ್ಷೇತ್ರರಕ್ಷಕರಾಗಿ ಎಂ.ಎನ್.ಎಸ್. ಬುಲ್ಸ್ ತಂಡದ ಚೇತು ಕಂಡೆಕರ್, ಉತ್ತಮ ಕೀಪರ್ ಆಗಿ ಆರ್.ಬಿ. ಟೈಗರ್ಸ್ ತಂಡದ ಗುರು ಆಯ್ಕೆಯಾಗಿ ಪ್ರಶಸ್ತಿ ಪಡೆದರು. ಉತ್ತಮ ಕ್ಯಾಚ್ ಗಾಗಿ ಎಸ್.ಜೆ.ರಾಕರ್ಸ್ ಪ್ರಸಾದ ವಿಶೇಷ ಬಹುಮಾನ ಪಡೆದರು. ಸರಣಿ ಪುರುಷೋತ್ತಮನಾಗಿ ಎಂ.ಎನ್.ಎಸ್. ಬುಲ್ಸ್ ನ ಶ್ರೀಷ ನಾಯಕ ಆಯ್ಕೆಯಾದರು.
ಪಂದ್ಯದ ನಂತರ ಪ್ರಶಸ್ತಿ ವಿತರಿಸಿದ ಉದ್ಯಮಿ ಬಾಲಕೃಷ್ಣ ನಾಯಕ, ಯಲ್ಲಾಪುರದ ಹಲವು ಕ್ರೀಡಾಪಟುಗಳ ಪ್ರತಿಭೆಗೆ ಯಲ್ಲಾಪುರ ಪ್ರೀಮಿಯರ್ ಲೀಗ್ ಉತ್ತಮ ವೇದಿಕೆಯಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಯಲ್ಲಾಪುರ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಸತೀಶ ನಾಯ್ಕ ಮಾತನಾಡಿ, ವೈಪಿಎಲ್ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗುತ್ತಿದೆ. ರಾಜ್ಯಮಟ್ಟದಲ್ಲಿ ಆಡುವಂತಹ ಕ್ರೀಡಾಪಟುಗಳು ಯಲ್ಲಾಪುರದಲ್ಲಿ ಸಿದ್ಧರಾಗಬೇಕೆಂಬ ಆಶಯ ನಮ್ಮದು. ಒಂದೆರಡು ವರ್ಷಗಳಲ್ಲಿ ಆ ಕನಸು ಈಡೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉದ್ಯಮಿಗಳಾದ ವಿಶಾಲ ಶಾನಭಾಗ, ನಂದನ ಬಾಳಗಿ ವಿಜೇತರಿಗೆ ಬಹುಮಾನ ವಿತರಿಸಿದರು. ಪಂದ್ಯಾವಳಿಗೆ ಸಹಕರಿಸಿದವರನ್ನು ಗೌರವಿಸಲಾಯಿತು. ನಿವೃತ್ತ ಶಿಕ್ಷಕ ಸಂತೋಷ ಕೊಳಗೇರಿ, ವೀಕ್ಷಕ ವಿವರಣೆಗಾರ ಇಬ್ರಾಹಿಂ, ಪತ್ರಕರ್ತರಾದ ನಾಗರಾಜ ಮದ್ಗುಣಿ, ಶ್ರೀಧರ ಅಣಲಗಾರ ಇತರರಿದ್ದರು. ಮಾರುತಿ ನಾಯ್ಕ ಸ್ವಾಗತಿಸಿದರು. ಶಿಕ್ಷಕ ಚಂದ್ರಹಾಸ ನಾಯ್ಕ ನಿರ್ವಹಿಸಿದರು.