ಯಲ್ಲಾಪುರ : ನಿಮ್ಮ ಸಾಧನೆಯಲ್ಲಿ ಸಂಸ್ಥೆಯ ಯಶಸ್ಸಿದೆ ಎಂಬ ಭಾವನೆ ವಿದ್ಯಾರ್ಥಿಗಳು ಮೂಡಿಸಿಕೊಂಡು ಸಾಧಕರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಕಾಯ್ದಿರಿಸಿ. ಶಿಕ್ಷಣ ಚೆನ್ನಾಗಿ ಅಭ್ಯಾಸ ಮಾಡಿ. ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ನೀವು ದೇಶ ಮೊದಲು ಎಂಬ ಭಾವನೆ ಮೂಡಿಸಿಕೊಳ್ಳಿ. ಯಾರಲ್ಲೂ ಶಕ್ತಿಯ ಕೊರತೆ ಇಲ್ಲ ಅದು ಪ್ರಕಟಗೊಳ್ಳುವ ರೀತಿಯಲ್ಲಿ ಅವಕಾಶ ಕಲ್ಪಿಸಿಕೊಳ್ಳಿ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪಟ್ಟಣದ ವೈ.ಟಿ.ಎಸ್.ಎಸ್. ಶಿಕ್ಷಣ ಸಂಸ್ಥೆಯ ವಾರ್ಷಿಕ ಸ್ನೇಹ ಸಮ್ಮೇಳನ, ಪುರಸ್ಕಾರ, ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ದೇಶದ ಸಮಸ್ಯೆಗಳಿಗೆ ನಾವೇ ಉತ್ತರಕೊಡಲು ಸಾಧ್ಯವಾಗುವುದು ದೇಶ ಮೊದಲು ಎಂಬ ಭಾವನೆಯಿಂದ ಜಾತಿ, ಧರ್ಮ, ಭಾಷೆ ನೀರು, ಪ್ರದೇಶದ ಹೆಸರಿನಲ್ಲಿ ಮನಸ್ಸುಗಳನ್ನು ಒಡೆಯುವ ಕೆಲಸ ವಿದ್ರೋಹಿ ಮನಸ್ಥಿತಿಯವರು ಮಾಡುತ್ತಾರೆ. ನಮ್ಮಲ್ಲಿ ಶಿಸ್ತು. ಬದ್ಧತೆಯ ಪರಿಶ್ರಮದ ಭಾವನೆ ಬೆಳೆಸಿಕೊಳ್ಳದೇ ಹೋದರೆ ಉಚಿತವಾಗಿ ಯಾರು ಏನು ನೀಡುತ್ತಾರೆ ಎಂದು ನೋಡುವ ಹಾಗಾಗುತ್ತದೆ. ಸಂಸ್ಕಾರಭರಿತ ಜೀವನ ಸಾಗಿಸುವ ಮೂಲಕ ದೇಶ ವಿಶ್ವಗುರುವಾಗುವಲ್ಲಿ ಯುವ ಸಮುದಾಯ ಶ್ರಮಿಸಬೇಕು ಎಂದರು.
ವ್ಯಕ್ತಿತ್ವ ವಿಕಸನ ಉಪನ್ಯಾಸಕ ವಿ.ಎಂ.ಭಟ್ಟ ಮಾತನಾಡಿ, ವಿದ್ಯಾರ್ಥಿ ಜೀವನ ಗೋಲ್ಡನ್ ಲೈಫ್ ಎಂದು ಕರೆದಿದ್ದಾರೆ. ಅದೇ ರೀತಿ ಗೋಲ್ಡನ್ ಲೈಫ್ ಡೇಂಜರಸ್ ಲೈಫ್ ಕೂಡ ಹೌದು. ಎಲ್ಲಿ ಗೋಲ್ಡ್ ಇದೆ ಅಲ್ಲಿ ಅಪಾಯವೂ ಇದೆ. ಸ್ವಲ್ಪ ಕಾಲು ಜಾರಿದರೂ ಜೀವನವೇ ನಾಶವಾಗುತ್ತದೆ. ಹೀಗಾಗಿ ವಿದ್ಯಾರ್ಥಿ ಜೀವನವನ್ನು ಎಚ್ಚರಿಕೆಯಿಂದ ಕಳೆಯಿರಿ. ಆಸಕ್ತಿ, ಸಾಮರ್ಥ್ಯ, ಅವಕಾಶ ಪರಿಶ್ರಮ ಇವುಗಳು ಇಲ್ಲದಿದ್ದರೆ ಸಾಧನೆ ಸಾಧ್ಯವಿಲ್ಲ. ಜವಾಬ್ದಾರಿಗೆ ಹೆಗಲು ನೀಡಿ ಜಗತ್ತಿನ ಶ್ರೇಷ್ಠ ಸಂಪತ್ತು ಮನುಷ್ಯನ ವ್ಯಕ್ತಿತ್ವದಲ್ಲಿದೆ ಅದನ್ನು ಬಳಸಿಕೊಂಡು ಸಾಧನೆ ಮಾಡಿ ಎಂದರು.
ಸಾಧನೆ ಮಾಡಿದ ಸಂಸ್ಥೆಯ ಮಾಜಿ ವಿದ್ಯಾರ್ಥಿಗಳಾದ ಬಾಲಕೃಷ್ಣ ನಾಯಕ, ಶೃತಿ ಬೋಡೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಿತರ ಪರವಾಗಿ ಬಾಲಕೃಷ್ಣ ನಾಯಕ ಮಾತನಾಡಿದರು.
ಸನ್ಮಾನಿತ ಸಂಸ್ಥೆಯ ಮಾಜಿ ವಿದ್ಯಾರ್ಥಿನಿ ಶ್ರತಿ ಬೋಡೆ ಮಾತನಾಡಿ, ನಾವೆಲ್ಲ ಹಣತೆಯೊಳಗಿನ ಬತ್ತಿಗಳು. ಬತ್ತಿಗೆ ಹಚ್ಚಿದ ದೀಪ ಎಷ್ಟು ಬೆಳಕು ನೀಡುತ್ತೇವೆಯೋ ಅಷ್ಟು ಕತ್ತಲು ಕಳೆಯುತ್ತದೆ. ಹಾಗೆಯೇ ನಾವು ಉತ್ತಮ ಶಿಕ್ಷಣ ಪಡೆದು ಉತ್ತಮ ನಾಗರೀಕರಾಗಿ ಸಮಾಜವನ್ನು ಬೆಳಗುವ ದೀಪವಾಗಬೇಕು ಎಂದರು.
ಆದರ್ಶ ವಿದ್ಯಾರ್ಥಿ, ಸಾಧಕ ವಿದ್ಯಾರ್ಥಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ರವಿಕುಮಾರ ಶಾನಭಾಗ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉದ್ಯಮಿ ಆನಂದ ಭಟ್ಟ, ಸಂಸ್ಥೆಯ ಕಾರ್ಯದರ್ಶಿ ರಾಜೇಂದ್ರ ಪ್ರಸಾದ ಭಟ್ಟ, ನಿರ್ದೇಶಕರಾದ ಕೃಷ್ಣಾನಂದ ದೇವನಳ್ಳಿ, ತಹಶೀಲ್ದಾರ ಯಲ್ಲಪ್ಪ ಗೋಣೆನ್ನವರ್ ವೇದಿಕೆಯಲ್ಲಿದ್ದರು. ಶ್ರೀರಕ್ಷಾ ಸಂಗಡಿಗರು ಪ್ರಾರ್ಥನೆ ಹಾಡಿದರು. ಪ್ರಾಂಶುಪಾಲ ಆನಂದ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನ್ನಾಡಿದರು. ಶಿಕ್ಷಕ ವಿನೋದ ಭಟ್ಟ ನಿರೂಪಿಸಿದರು. ಮುಖ್ಯಾದ್ಯಾಪಕ ಎನ್.ಎಸ್.ಭಟ್ಟ ವಂದಿಸಿದರು.