ಹೊನ್ನಾವರ : ಮನೆಯ ಹಿರಿಯರಿಂದ ಬರುವ ಸಂಸ್ಕಾರವು ಬಹು ಮುಖ್ಯವಾದದ್ದು. ಉತ್ತಮ ನಡತೆ, ಅಧ್ಯಯನ ಪ್ರವೃತ್ತಿ ಇವನ್ನೆಲ್ಲ ಬಾಲ್ಯದಿಂದಲೇ ರೂಢಿಸಿಕೊಳ್ಳಬೇಕು. ಅಂದಾಗ ಮಾತ್ರ ಕಾಲೇಜು ದಿನಗಳಲ್ಲಿ ಸಾಧನೆಗೆ ಮುನ್ನುಡಿ ಬರೆಯಲು ಸಾಧ್ಯ ಎಂದು ಚಂದ್ರಕಾಂತ ಕೊಚರೇಕರ ಹೇಳಿದರು.
ಅವರು ಅಳ್ಳಂಕಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕ ಪ್ರತಿಭಾ ಪುರಸ್ಕಾರ ಉದ್ಘಾಟಿಸಿ ಮಾತನಾಡಿದರು.
ಅತಿಥಿ ಗಜಾನನ ಹೆಗಡೆ ಮಾತನಾಡಿ ಮೂಡ್ಕಣಿ ನಾರಾಯಣ ಹೆಗಡೆಯವರ ಸ್ಮರಣಾರ್ಥ ನೀಡುವ ಪ್ರಶಸ್ತಿಯನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಉಪನ್ಯಾಸಕಿ ಗುಲ್ನಾರ್ ಬಷೀರ್ ಸಾಬ್ ಇವರಿಗೆ ನೀಡಿ, ಸಾಹಿತ್ಯ, ಕಲೆ, ಶಿಕ್ಷಣ ಈ ಕ್ಷೇತ್ರಗಳ ಸಾಧನೆಯು ರಾಷ್ಟ್ರೀಯ ಭಾವೈಕ್ಯವನ್ನು ಬೆಳೆಸುವುದಾಗಿದೆ. ಕುದ್ರಗಿಯಂಥ ಗ್ರಾಮೀಣ ಭಾಗದಲ್ಲಿ ಹುಟ್ಟಿ ,ಶಿಕ್ಷಣ ಪಡೆದು ಕೊನೆಗೆ ಧಾರವಾಡ ವಿಶ್ವವಿದ್ಯಾನಿಲಯವೇ ಮೆಚ್ಚುವಂತೆ ಎಂ.ಎ, ಬಿ.ಎಡ್., ಹಾಗೂ ಎಂ.ಎಡ್ ಗಳಲ್ಲಿ ಬಂಗಾರ ಪದಕಗಳೊಂದಿಗೆ ಸಾಧನೆ ಮಾಡಿದ ಗುಲ್ನಾರ್ ಇಂದಿನ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ ಎಂದರು.
ಇನ್ನೋರ್ವ ಅತಿಥಿ ಪ್ರಮೊದ ನಾಯ್ಕ ಅವರು ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣವೆಂಬ ಸಂಪತ್ತನ್ನು ಗಳಿಸಿಕೊಂಡರೆ ವಿಶ್ವದ ಯಾವುದೇ ಮೂಲೆಯಲ್ಲಾದರೂ ಬದುಕಬಹುದು, ಮನ್ನಣೆಗೆ ಪಾತ್ರರಾಗಬಹುದು ಎಂದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯ ಗಣೇಶ ಹಳ್ಳೇರ ಮಾತನಾಡಿದರು. ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನೀಡುತ್ತಿರುವ ಹನುಮಂತ ನಾಯ್ಕ ಮಹಿಮೆ ಮತ್ತು ಅಂಗ ವೈಕಲ್ಯದಿಂದ ಕೂಡಿದ್ದ ವಿಶೇಷ ಚೇತನ ಮಗನಿಗೆ ಓದಿಸಿ, ಶಸ್ತ್ರ ಚಿಕಿತ್ಸೆಯನ್ನೂ ಮಾಡಿಸಿ ಮಗನಿಗೆ ಹೊಸ ಬಾಳು ಕಲ್ಪಿಸಿದ ಗುಡ್ಡೆಕರೆ ಬಾಲಚಂದ್ರ ನಾಯ್ಕ ಮತ್ತು ಮುಕ್ತಾ ದಂಪತಿಗಳನ್ನು ಉತ್ತಮ ಪಾಲಕರು ಹಾಗೂ ಈ ವರ್ಷ ಪ್ರಶಸ್ತಿ ವಿಜೇತ ಉಪನ್ಯಾಸಕ ಕಿಶೊರ ನಾಯ್ಕ ಮತ್ತು ಪ್ರಾಚಾರ್ಯ ಜಿ. ಎಸ್. ಹೆಗಡೆಯವರನ್ನು ಸನ್ಮಾನಿಸಿ, ಕ್ರೀಡೆ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಪ್ರಾಚಾರ್ಯ ಡಾ. ಜಿ ಎಸ್ ಹೆಗಡೆ ಸ್ವಾಗತಿಸಿದರು. ಕಿಶೋರ್ ನಾಯ್ಕ ವಂದಿಸಿದರು. ಮಹೇಶ ಹೆಗಡೆ ನಿರೂಪಿಸಿದರು. ಅನಂತರ ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು.