ಹೊನ್ನಾವರ: ನಮ್ಮ ಪೂರ್ವಜರು ಶಿಕ್ಷಣದ ಬಗ್ಗೆ ಇರುವ ಮಹತ್ವವನ್ನು ಅರಿತು ಅಂದು ಪ್ರತಿ ಹಳ್ಳಿಯಲ್ಲಿಯೂ ಶಾಲೆಗಳನ್ನು ನಿರ್ಮಿಸಿದ್ದರು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆರೆಕೋಣ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರಿ ಶಾಲೆಗಳು ಶಿಕ್ಷಣದ ಜೊತೆ ಜೀವನ ನಿರ್ವಹಣೆಯ ಪಾಠವನ್ನು ಕಲಿಸುತ್ತದೆ. ಕೆರೆಕೋಣ ಸುತ್ತಮುತ್ತಲಿನ ಭಾಗದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳ ಸಮೂಹವಿದೆ. ಈ ಭಾಗದವರು ಸರ್ಕಾರಿ ಶಾಲೆಯಲ್ಲಿ ಅಧ್ಯಯನ ಮಾಡಿ ದೇಶ ವಿದೇಶದಲ್ಲಿಯೂ ಉನ್ನತ ಸ್ಥಾನದಲ್ಲಿದ್ದಾರೆ. ಇಂದು ಆ ಸ್ಥಾನಕ್ಕೆ ತಲುಪಲು ಪ್ರಾಥಮಿಕವಾಗಿ ಶಿಕ್ಷಣ ನೀಡಿದ ಸರ್ಕಾರಿ ಶಾಲೆಗಳ ಪಾತ್ರ ಬಹುಮುಖ್ಯವಾಗಿದೆ ಎಂದರು. ನನ್ನ ಶಾಸಕತ್ವ ಅವಧಿಯಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡುತ್ತಾ ಬಂದಿದ್ದು, ಕುಮಟಾದಲ್ಲಿ ಅತ್ಯುತ್ತಮ ಪದವಿಪೂರ್ವ ಕಾಲೇಜು, ಹೊನ್ನಾವರದಲ್ಲಿ ಸರ್ಕಾರಿ ಪದವಿ ಕಾಲೇಜು ನನ್ನ ಅವಧಿಯಲ್ಲಿ ಆಗಿದೆ. ಕುಮಟಾದಲ್ಲಿ ಐಟಿಐ ಕಾಲೇಜು ನಿರ್ಮಾಣ ಸೇರಿದಂತೆ ಕಳೆದ ಅವಧಿಯಲ್ಲಿ ಸರ್ಕಾರಿ ಶಾಲೆಗಳಿಗೆ ವಿವೇಕ ಯೋಜನೆಯಡಿ ಕಟ್ಟಡ ನಿರ್ಮಾಣ ಮಾಡುವ ಶೈಕ್ಷಣಿಕ ಕೊಡುಗೆ ನೀಡುವ ಕಾರ್ಯ ಮಾಡಿದ್ದೇನೆ. ನನ್ನ ಕ್ಷೇತ್ರದ ಹಲವು ಗ್ರಾ.ಪಂ. ಬರುತ್ತಿದ್ದು, ಅದರಲ್ಲಿ ಸಾಲ್ಕೋಡ್ ಗ್ರಾ.ಪಂ. ಹೆಚ್ಚಿನ ಅನುದಾನ ನೀಡಿದ್ದೇನೆ. ಈ ಭಾಗದ ಐದು ಸೇತುವೆ ರಸ್ತೆ ನಿರ್ಮಾಣವೇ ಸಾಕ್ಷಿಯಾಗಿದೆ ಎಂದರು.
ಶಾಲಾ ಪೂರ್ವ ವಿದ್ಯಾರ್ಥಿಗಳಾದ ಬೈಜುಸ್ ಕಂಪನಿ ತಾಂತ್ರಿಕ ವ್ಯವಸ್ಥಾಪಕ ಗಣೇಶ ಶಾಸ್ತ್ರಿ, ಲುಸೋ ಎಲೆಕ್ಟ್ರಾನಿಕ್ ಪೊಡೆಕ್ಟ ಲಿಮಿಟೆಡ್ ಪ್ರಧಾನ ವ್ಯವಸ್ಥಾಪಕರಾದ ಗೀರಿಶ ಶಾಸ್ತ್ರಿ, ಇವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಶೈಕ್ಷಣಿಕ, ಕ್ರೀಡೆ, ಸಹಪಠ್ಯ ವಿಭಾಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತು.
ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಎಂ.ಜಿ.ನಾಯ್ಕ ಮಾತನಾಡಿ ಕನ್ನಡ ಶಾಲೆಯಲ್ಲಿ ಕಲಿತ ಮಕ್ಕಳು ಯಾವ ಮಟ್ಟಕ್ಕೆ ಹೋಗಬಹುದು ಅದರ ಶಕ್ತಿ ಏನು ಎನ್ನುವುದಕ್ಕೆ ಇಂದು ಸನ್ಮಾನ ಸ್ವೀಕರಿಸಿದ ಶಾಲಾ ಇರ್ವರು ಪೂರ್ವ ವಿದ್ಯಾರ್ಥಿಗಳೆ ಸಾಕ್ಷಿಯಾಗಿದ್ದಾರೆ. ಖಾಸಗಿ ಶಾಲೆ, ಆಂಗ್ಲ ಮಾಧ್ಯಮದ ಹಿಂದೆ ಓಡುವ ಸಮಯದಲ್ಲಿ ಇರ್ವರು ಪ್ರತಿಭಾವಂತರನ್ನು ಸನ್ಮಾನಿಸುವ ಮೂಲಕ ಕನ್ನಡ ಶಾಲೆಯ ಶಿಕ್ಷಣದ ಮಹತ್ವ, ಗಟ್ಟಿತನದ ಸಂದೇಶ ಸಾರಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾ.ಪಂ.ಅಧ್ಯಕ್ಷೆ ಯಮುನಾ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಗ್ರಾ.ಪಂ. ಸದಸ್ಯರಾದ ಗಣಪತಿ ಭಟ್, ಸಚೀನ ನಾಯ್ಕ, ಶಿಕ್ಷಕ ಸಂಘದ ಗೌರವಾಧ್ಯಕ್ಷ ಸುಧೀಶ ನಾಯ್ಕ, ಶಿಕ್ಷಣ ಇಲಾಖೆಯ ಸಂಯೋಜಕರಾದ ಪ್ರಮೋದ ನಾಯ್ಕ, ಲಯನ್ಸ ಅಧ್ಯಕ್ಷ ಉದಯ ನಾಯ್ಕ, ಮಾಜಿ ಗ್ರಾ.ಪಂ. ಅಧ್ಯಕ್ಷ ಕೇಶವ ಶೆಟ್ಟಿ, ಎಸ್.ಡಿ.ಎಂ.ಸಿ ಅಧ್ಯಕ್ಷ ರಾಮ ಭಂಡಾರಿ, ಸ್ಪಂದನ ಶಾಲಾ ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹೇಶ ಭಂಡಾರಿ ಮತ್ತಿತರರಿದ್ದರು
ಶಾಲಾ ಮುಖ್ಯಧ್ಯಾಪಕರಾದ ಗಣೇಶ ಭಾಗ್ವತ ಸ್ವಾಗತಿಸಿ, ಶಿಕ್ಷಕಿ ಮಾಲಿನಿ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿದ ಮನೋರಂಜನಾ ಕಾರ್ಯಕ್ರಮ ಪೂರ್ವ ವಿದ್ಯಾರ್ಥಿಗಳಿಂದ ನಾಟಕ ಎಲ್ಲರ ಗಮನ ಸೆಳೆಯಿತು.