Slide
Slide
Slide
previous arrow
next arrow

ದಾಂಡೇಲಿಯ ಜನತಾ ವಿದ್ಯಾಲಯದಲ್ಲಿ 66ನೇ ವಾರ್ಷಿಕ ಸ್ನೇಹ ಸಮ್ಮೇಳನ

300x250 AD

ದಾಂಡೇಲಿ : ನಗರದ ಜನತಾ ವಿದ್ಯಾಲಯ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ 66ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪಾರಿತೋಷಕ ವಿತರಣಾ ಸಮಾರಂಭವು ಶನಿವಾರ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ನಗರಸಭೆಯ ಅಧ್ಯಕ್ಷರಾದ ಅಷ್ಪಾಕ್ ಶೇಖ್, ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದ ಪ್ರಗತಿಗೆ ದಿನಕರ ದೇಸಾಯಿ ಅವರ ಕೊಡುಗೆ ಮಹತ್ವಪೂರ್ಣವಾಗಿದೆ. ದಾಂಡೇಲಿ ನಗರದಲ್ಲಿಯೂ ಶಿಕ್ಷಣ ಕ್ಷೇತ್ರದ ಬಲವರ್ಧನೆಯಲ್ಲಿ ಜನತಾ ವಿದ್ಯಾಲಯ ಶಿಕ್ಷಣ ಸಂಸ್ಥೆಯ ಪಾತ್ರ ಸ್ಮರಣೀಯವಾಗಿದೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಇಂದು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಕೊಡಬೇಕಾಗಿದ್ದು, ಈ ನಿಟ್ಟಿನಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಕೊಡುವ ಮೂಲಕ ಶಿಕ್ಷಣವಂತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಕರೆ ನೀಡಿದರು.

ಕಲಾ ಕುಂಜ ಚಿತ್ರ ಸಂಪುಟವನ್ನು ಬಿಡುಗಡೆಗೊಳಿಸಿ ಮಾತನಾಡಿದ ನಗರಸಭಾ ಸದಸ್ಯೆ ಪದ್ಮಜಾ ಪ್ರವೀಣ ಜನ್ನು ಅವರು ಸಾವಿರಾರು ವಿದ್ಯಾರ್ಥಿಗಳ ಪಾಲಿಗೆ ಜ್ಞಾನದ ಬೆಳಕು ನೀಡುವ ಮೂಲಕ ಜನತಾ ವಿದ್ಯಾಲಯ ಶಿಕ್ಷಣ ಸಂಸ್ಥೆ ಶಿಕ್ಣಣ ಕ್ಷೇತ್ರದಲ್ಲಿ ಮಹತ್ವದ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ. ಸುದೀರ್ಘ 66 ವರ್ಷಗಳ ಶೈಕ್ಷಣಿಕ ಸೇವೆಯ ಮೂಲಕ ಜನತಾ ವಿದ್ಯಾಲಯ ಶಿಕ್ಷಣ ಸಂಸ್ಥೆ ದಾಂಡೇಲಿಯಲ್ಲಿ ತನ್ನದೇ ಆದ ಮೈಲಿಗಲ್ಲನ್ನು ಸ್ಥಾಪಿಸಿಕೊಂಡಿದೆ ಎಂದರು.

ಮುಖ್ಯ ಅತಿಥಿಗಳಾಗಿ ಜನತಾ ವಿದ್ಯಾಲಯ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೀಟಾ ಡಯಾಸ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ನವೀನ್ ಕಾಮತ್, ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ವಾಸದೇವ ಪ್ರಭು ಅವರು ಭಾಗವಹಿಸಿ, ಕಾರ್ಯಕ್ರಮದ ಬಗ್ಗೆ ಹಾಗೂ ಜನತಾ ವಿದ್ಯಾಲಯ ಶಿಕ್ಷಣ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಜನತಾ ವಿದ್ಯಾಲಯ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಅಮೃತ ಬಿ.ರಾಮರಥ ಮಾತನಾಡಿ ಮಹೋನ್ನತ ಸಂಕಲ್ಪದೊಂದಿಗೆ ದಿನಕರ ದೇಸಾಯಿ ಅವರು ಆರಂಭಿಸಿದ ಜನತಾ ವಿದ್ಯಾಲಯ ಶಿಕ್ಷಣ ಸಂಸ್ಥೆ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದ ಪುರೋ ಅಭಿವೃದ್ಧಿಯಲ್ಲಿ ತನ್ನನ್ನು ತಾನು ಪ್ರಾಮಾಣಿಕವಾಗಿ ತೊಡಗಿಸಿಕೊಂಡಿದೆ. ಪ್ರತಿಯೊಬ್ಬರ ಬದುಕಿನಲ್ಲಿಯೂ ವಿದ್ಯಾರ್ಥಿ ಜೀವನ ಅತೀ ಮುಖ್ಯವಾದ ಹಾಗೂ ಭದ್ರ ಭವಿಷ್ಯ ನಿರ್ಮಾಣಕ್ಕೆ ನಾಂದಿ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸತತ ಅಧ್ಯಯನಶೀಲರಾಗಿ ಶೈಕ್ಷಣಿಕ ಸಾಧನೆಯ ಸಾಧಕರಾಗಬೇಕೆಂದು ಶುಭ ಹಾರೈಸಿದರು.

300x250 AD

ವೇದಿಕೆಯಲ್ಲಿ ಹಿರಿಯ ಉಪನ್ಯಾಸಕರಾದ ಎಂ.ಎಸ್. ಇಟಗಿ, ಉಪೇಂದ್ರ ಘೋರ್ಪಡೆ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಬಿ.ಅರವಳ್ಳಿ, ಕೆನರಾ ವೆಲ್ಫೇರ್ ಟ್ರಸ್ಟ್ ಬಿಎಡ್ ಕಾಲೇಜಿನ ಪ್ರಾಚಾರ್ಯರಾದ ನೀಲಕಂಠ ಜಿ.ನಾಯ್ಕ, ಪ್ರೌಢಶಾಲಾ ಶಿಕ್ಷಕ ಕಿಶೋರ ಕಿಂದಲ್ಕರ್, ಇಎಂಎಸ್ ಶಾಲೆಯ ಮುಖ್ಯೋಪಾಧ್ಯಾಯರಾದ ನಾರಾಯಣ ನಾಯ್ಕ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕ್ರೀಡೆ ಸಾಂಸ್ಕೃತಿಕ ಹೀಗೆ ಇನ್ನಿತರ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ, ತಾಲೂಕು ಮಟ್ಟ, ಜಿಲ್ಲಾ ಮಟ್ಟ, ರಾಜ್ಯ ಮಟ್ಟ, ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಪಾರಿತೋಷಕ ವಿತರಿಸಿ ಸನ್ಮಾನಿಸಲಾಯಿತು.

ಜನತಾ ವಿದ್ಯಾಲಯ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಬಿ.ಅರವಳ್ಳಿ ಸ್ವಾಗತಿಸಿದರು. ಪ್ರಾಚಾರ್ಯರಾದ ಅಮೃತ ಬಿ.ರಾಮರಥ ಅವರು ವಾರ್ಷಿಕ ವರದಿಯನ್ನು ವಾಚಿಸಿದರು. ಹಿರಿಯ ಉಪನ್ಯಾಸಕರಾದ ಯು.ಆರ್. ಘೋರ್ಪಡೆ ವಂದಿಸಿದರು. ಉಪನ್ಯಾಸಕಿ ನಿರೂಪಮಾ.ವಿ.ನಾಯಕ ಮತ್ತು ಶಿಕ್ಷಕರಾದ ಜಯದೇವಕುಮಾರ್ ಸಿರಿಗೇರಿ ಅವರು ನಿರೂಪಿಸಿದರು.

Share This
300x250 AD
300x250 AD
300x250 AD
Back to top