ಹಳಿಯಾಳ : ರಾಜ್ಯ ಕಾಂಗ್ರೆಸ್ ಸರ್ಕಾರ ಬಸ್ ಪ್ರಯಾಣ ದರವನ್ನು ಏರಿಕೆ ಮಾಡಿರುವುದರ ವಿರುದ್ಧ, ಬಾಣಂತಿಯರ ಸಾವು ಹಾಗೂ ಗುತ್ತಿಗೆದಾರರ ಆತ್ಮಹತ್ಯೆಯನ್ನು ಖಂಡಿಸಿ ಬಿಜೆಪಿ ಪಕ್ಷದ ವತಿಯಿಂದ ಪಟ್ಟಣದ ವನಶ್ರೀ ವೃತ್ತದಲ್ಲಿ ಶನಿವಾರ ಪ್ರತಿಭಟನೆಯನ್ನು ನಡೆಸಲಾಯಿತು.
ಈ ವೇಳೆ ಮಾತನಾಡಿದ ಮಾಜಿ ಶಾಸಕರಾದ ಸುನೀಲ್ ಹೆಗಡೆ, ಹೊಸ ವರ್ಷದ ಸಂಭ್ರಮದಲ್ಲಿರುವ ರಾಜ್ಯದ ಜನರ ಮೇಲೆ ಸಿದ್ದರಾಮಯ್ಯ ಸರ್ಕಾರದ ವಕ್ರದೃಷ್ಟಿ ಬಿದ್ದಿದೆ. ಕಾಂಗ್ರೆಸ್ ಸರ್ಕಾರದ ಅವೈಜ್ಞಾನಿಕ ಗ್ಯಾರಂಟಿಗಳು ಬಕಾಸುರನಂತೆ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡುತ್ತಿದ್ದು, ಬೆಲೆ ಏರಿಕೆ ಎಂಬ ಅಸ್ತ್ರವನ್ನು ಪದೇ ಪದೇ ಜನಸಾಮಾನ್ಯರ ಮೇಲೆ ಪ್ರಯೋಗಿಸಲಾಗುತ್ತಿದೆ. ಈಗ ಬಸ್ ದರವನ್ನು ಶೇ.15% ರಷ್ಟು ಏರಿಸಿದೆ. ಮಹಿಳೆಯರಿಗೆ ಫ್ರೀ ಬಸ್ ಘೋಷಿಸಿ ಅದರ ನಷ್ಟವನ್ನು, ಪುರುಷ ಪ್ರಯಾಣಿಕರಿಂದ ವಸೂಲಿ ಮಾಡಲು ರಾಜ್ಯ ಕಾಂಗ್ರೆಸ್ ಸರ್ಕಾರ ಇಳಿದಿರುವುದು ನಾಚಿಕೆಗೇಡು ಎಂದರು. ಇದೇ ರೀತಿ ರಾಜ್ಯದಲ್ಲಿ ಸಾಲು ಸಾಲಾಗಿ ಬಾಣಂತಿಯರ ಸಾವು ಹಾಗೂ ಗುತ್ತಿಗೆದಾರರ ಆತ್ಮಹತ್ಯೆಗೆ ರಾಜ್ಯದ ಕಾಂಗ್ರೆಸ್ ಸರ್ಕಾರವೇ ಕಾರಣವಾಗಿದ್ದು, ಶೀಘ್ರವೇ ಮೃತರ ಕುಟುಂಬಗಳಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ಸಚಿವ ಪ್ರಿಯಾಂಕ ಖರ್ಗೆ ಹಾಗೂ ದಿನೇಶ್ ಗುಂಡೂರಾವ್ ಅವರ ರಾಜಿನಾಮೆಗೆ ಒತ್ತಾಯಿಸಿದರು.
ಮಾಜಿ ವಿ.ಪ. ಸದಸ್ಯರಾದ ಶ್ರೀಕಾಂತ ಘೋಟ್ನೇಕರ ಅವರು ಮಾತನಾಡಿ ವಿದ್ಯುತ್, ನೀರು, ಮುದ್ರಾಂಕ ಶುಲ್ಕ, ಆಸ್ತಿ ಮಾರ್ಗಸೂಚಿ ದರ, ಇನ್ನಿತರ ಬೆಲೆಗಳ ಏರಿಕೆಗೆ ಸಮಾಧಾನವಾಗದೇ ಡಿಸೇಲ್, ಪೆಟ್ರೋಲ್ ದರ ಹೆಚ್ಚಿಸಿತು. ಇದೀಗ ಬಸ್ ದರ ಕೂಡ ಹೆಚ್ಚಿಸಿ ಜನರಿಗೆ ಟೋಪಿ ಹಾಕಿದೆ ಎಂದು ರಾಜ್ಯ ಸರಕಾರದ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷರಾದ ವಿಠ್ಠಲ ಸಿದ್ಧನ್ನವರ, ಪಕ್ಷದ ಪ್ರಮುಖರುಗಳಾದ ಸಂತೋಷ ಘಟಕಾಂಬಳೆ, ತಾನಾಜಿ ಪಟ್ಟೇಕರ, ಹನುಮಂತ ಚಿನಗಿನಕೊಪ್ಪ, ಉದಯ ಹೂಲಿ, ಯಲ್ಲಪ್ಪ ಹೊನ್ನೋಜಿ, ಯಲ್ಲಪ್ಪ ಹೆಳವರ, ಮೋಹನ ಬೆಳಗಾಂವಕರ, ಚೂಡಪ್ಪ ಬೋಬಾಟಿ, ಪಾಂಡು ಪಾಟೀಲ್, ಇಲಿಯಾಸ್ ಬಳಗಾರ, ಪ್ರಮೋದ ಹುಣ್ಸವಾಡಕರ, ಜ್ಞಾನೇಶ ಮಾನಗೆ, ಹನುಮಂತ ಚಲವಾದಿ, ಪ್ರಕಾಶ ಬೋಬಾಟಿ, ರವಿ ಚಿಬ್ಬುಲಕರ, ಜಯಲಕ್ಷ್ಮೀ ಚವ್ಹಾಣ, ಮಾಲಾ ಹುಂಡೇಕರ, ರಂಜನಾ ನಡಹಟ್ಟಿ, ಸಂಜನಾ ಮೋರೆ, ವೀಣಾ ಕುಂಬಾರ, ಮೊದಲಾದ ಪದಾಧಿಕಾರಿಗಳು, ಕಾರ್ಯಕರ್ತರು ಮೊದಲಾದವರು ಉಪಸ್ಥಿತರಿದ್ದರು.