ಹೊನ್ನಾವರ: ವಿದ್ಯಾರ್ಥಿಗಳ ಯಶಸ್ಸಿಗೆ ಪಾಲಕರು ಆಧಾರ ಸ್ಥಂಭವಾಗಿರಬೇಕು. ವಿದ್ಯಾರ್ಥಿಗಳು ಶಾಲಾ ವಿದ್ಯೆಯೊಂದಿಗೆ ಸಂಗೀತ, ಯಕ್ಷಗಾನ, ನಾಟಕ, ಕ್ರೀಡೆ ಇತ್ಯಾದಿಗಳನ್ನು ಮೈಗೂಡಿಸಿಕೊಂಡರೆ ವಿದ್ಯಾರ್ಥಿಯ ಸರ್ವತೋಮುಖ ವಿಕಾಸ ಸಾಧ್ಯ ಎಂದು ನಿವೃತ್ತ ಸೂಪರಿನ್ಟೆಂಡೆಂಟ್ ಎಂಜಿನಿಯರ್ ಡಾ.ನರಸಿಂಹ ಪಂಡಿತ್ ನುಡಿದರು.
ಇವರು ತಾಲೂಕಿನ ಕವಲಕ್ಕಿಯ ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಲ್ಟ್ರಾಟೆಕ್ ಸಿಮೆಂಟ್ ಕಂಪೆನಿಯ ಸೀನಿಯರ್ ಮ್ಯಾನೇಜರ್ ಸುಬ್ರಹ್ಮಣ್ಯ ಹೆಗಡೆ ಮಾತನಾಡಿ ವಿದ್ಯಾರ್ಥಿಗಳು ವಿನಯವಂತರಾಗಬೇಕು, ಗುರುಹಿರಿಯರನ್ನು ಗೌರವಿಸಬೇಕು, ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಯಶಸ್ಸು ಗಳಿಸಲು ಸಾಧ್ಯ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಉಮೇಶ್ ಹೆಗಡೆ ಮಾತನಾಡಿ ಹಳ್ಳಿಯ ಜನರು ಸುಸಂಸ್ಕೃತರು, ಬುದ್ದಿವಂತರು, ಗ್ರಾಮೀಣ ಭಾಗದಲ್ಲಿರುವ ನಮ್ಮ ಶಾಲೆಯು ನಗರ ಶಾಲೆಗಳಿಗಿಂತ ಕಡಿಮೆ ಏನೂ ಇಲ್ಲ. ವಿದ್ಯಾರ್ಥಿಗಳ ಸರ್ವತೋಮುಖ ವಿಕಾಸವು ನಮ್ಮ ಗುರಿಯಾಗಿದೆ ಇದಕ್ಕೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯವಾಗಿದೆ ಎಂದರು.
ಸಂಸ್ಥೆಯ ಗೌರವಾಧ್ಯಕ್ಷರಾದ ವಿ.ಜಿ. ಹೆಗಡೆ ಗುಡ್ಗೆ, ಕಾರ್ಯದರ್ಶಿ ಮೋಹನ ಹೆಗಡೆ ಮಾತನಾಡಿದರು. ಆಡಳಿತಾಧಿಕಾರಿ ಎಂ.ಎಸ್. ಹೆಗಡೆ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ವೈಲೆಟ್ ಫೆರ್ನಾಂಡಿಸ್ ವಂದಿಸಿದರು. ಶಿಕ್ಷಕಿ ಸಂಗೀತ ಮತ್ತು ಪ್ರತಿಮಾ ನಿರ್ವಹಿಸಿದರು.