ಸಿದ್ದಾಪುರ: ತಾಲೂಕಿನ ಕಾವಂಚೂರಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಅಂತರಾಷ್ಟೀಯ ಮಟ್ಟದಲ್ಲಿ ಸಂವಹನ ಮಾಡುವಂತಹ ಹ್ಯಾಮ್ ಸ್ಟೇಷನ್ ಅನ್ನು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಹ್ಯಾಮ್‌ನ ಡಾ.ಸತ್ಯಪಾಲ ಅವರ ತಂಡ ಸ್ಥಾಪನೆ ಮಾಡಿದೆ.
ಶಾಲೆಯ ವಿಜ್ಞಾನ ಶಿಕ್ಷಕ ಸತ್ಯನಾರಾಯಣ ವರ್ಣೇಕರ, 9ನೇ ತರಗತಿ ವಿದ್ಯಾರ್ಥಿನಿ ಅರ್ಚನಾ ಭಾಸ್ಕರ ನಾಯ್ಕ ಹ್ಯಾಮ್ ಲೈಸೆನ್ಸ್ ಪಡೆದಿರುತ್ತಾರೆ. ತುರ್ತು ಸಂದರ್ಭಗಳಲ್ಲಿ ಹಾಗೂ ಪರಿಸರದಲ್ಲಿ ಆಗುವ ಅನಾಹುತ ಸಂದರ್ಭಗಳಲ್ಲಿ ಸಂದೇಶ ರವಾನಿಸಲು ಉಪಯುಕ್ತವಾದ ಸಂವಹನ ಇದಾಗಿದೆ. ಅಲ್ಲದೆ ಮೊಬೈಲ್ ಅಂತರ್ಜಾಲ ಸಂಪರ್ಕ ನಿಂತಾಗ ಅಪಾಯಗಳಿಂದ ತಪ್ಪಿಸಿಕೊಳ್ಳಲು ಹ್ಯಾಮ್ ರೇಡಿಯೋ ಬಳಸಿಕೊಳ್ಳಬಹುದಾಗಿದೆ. ಹ್ಯಾಮ್ ಶಾಲಾ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಬೆಳವಣೆಗೆಗೆ ಅತ್ಯುತ್ತಮ ಸಾಧನವೆಂದು ಪರಿಗಣಿಸಲಾಗಿದ್ದು ಈ ಸೌಲಭ್ಯವನ್ನು ಅಳವಡಿಸಿಕೊಂಡ ಜಿಲ್ಲೆಯ ಪ್ರಪ್ರಥಮ ಶಾಲೆ ಕಿತ್ತೂರ ರಾಣಿ ಚೆನ್ನಮ್ಮ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಹ್ಯಾಮ್ ಅಳವಡಿಕೆ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ವೀರಣ್ಣ ನೂರಂದನವರ, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.