ಕೌಶಲ್ಯಾಭಿವೃದ್ಧಿ ಇಲಾಖೆಯ ಡೇ ನಲ್ಮ್ ಯೋಜನೆಯಡಿ ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ (ಪಿಎಂ ಸ್ವನಿಧಿ )ಯೋಜನೆಯಡಿ ಉತ್ತರ ಕನ್ನಡ ಜಿಲ್ಲೆಯಲ್ಲಿನ ನಗರಸ್ಥಳೀಯ ಸಂಸ್ಥೆಗಳಲ್ಲಿ 6694 ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಲಾಗಿದ್ದು, ಅದರಲ್ಲಿ 5895 ವ್ಯಾಪಾರಿಗಳಿಗೆ ಇದುವರೆಗೆ 16.16 ಕೋಟಿ ರೂ.ಗಳ ಸಾಲ ವಿತರಿಸಿದ್ದು, ಇದರಿಂದ ಅವರ ವ್ಯಾಪಾರದ ಅಭಿವೃದ್ಧಿಗೆ ನೆರವು ದೊರೆತಿದ್ದು, ಇದು ಈ ಶ್ರಮಜೀವಿಗಳ ಅರ್ಥಿಕ ಬೆಳವಣಿಗೆಗೆ ಮಹತ್ತರವಾದ ಸಹಾಯ ನೀಡಿದೆ.
ಪಿಎಂ ಸ್ವನಿಧಿ ಯೋಜನೆಯಡಿ ಜಿಲ್ಲೆಯ ಕಾರವಾರ ನಗರಸಭೆ ವ್ಯಾಪ್ತಿಯಲ್ಲಿ 1450, ಶಿರಸಿಯಲ್ಲಿ 1320, ದಾಂಡೇಲಿಯಲ್ಲಿ 1100, ಭಟ್ಕಳದಲ್ಲಿ 670, ಕುಮಟಾದಲ್ಲಿ 600, ಅಂಕೋಲಾದಲ್ಲಿ 438, ಹಳಿಯಾಳದಲ್ಲಿ 489, ಹೊನ್ನಾವರದಲ್ಲಿ 400, ಸಿದ್ದಾಪುರದಲ್ಲಿ 350, ಯಲ್ಲಾಪುರದಲ್ಲಿ 413,ಮುಂಡಗೋಡದಲ್ಲಿ 390, ಮಂಕಿಯಲ್ಲಿ 191 ಸೇರಿದಂತೆ ಒಟ್ಟು 7,811 ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಿ ಯೋಜನೆಯ ಸೌಲಭ್ಯಗಳನ್ನು ಒದಗಿಸಲು ಗುರಿ ನೀಡಲಾಗಿದ್ದು, ಜಿಲ್ಲೆಯಲ್ಲಿ ಪ್ರಸ್ತುತ 6694 ಮಂದಿ ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಲಾಗಿದೆ.
ಜಿಲ್ಲೆಯಲ್ಲಿ ಗುರುತಿಸಲಾಗಿರುವ ಬೀದಿ ಬದಿ ವ್ಯಾಪಾರಿಗಳಲ್ಲಿ 5,895 ಮಂದಿಗೆ ಪ್ರಾರಂಭಿಕ ಹಂತದಲ್ಲಿ ರೂ.10,000 ದಂತೆ 5.89 ಕೋಟಿ ರೂ ಸಾಲ ವಿತರಿಸಿದ್ದು, ಈ ಸಾಲವನ್ನು ಪೂರ್ಣವಾಗಿ ಮರುಪಾವತಿ ಮಾಡಿದ ನಂತರ ರೂ.20,000 ಗಳ ಸಾಲಕ್ಕೆ ಅರ್ಜಿ ಸಲ್ಲಿಸಿದ್ದ 2,672 ಮಂದಿಗೆ ಒಟ್ಟು 5.34 ಕೋಟಿ ರೂ ಸಾಲ ವಿತರಿಸಲಾಗಿದೆ. ಈ ಸಾಲವನ್ನು ಪೂರ್ಣವಾಗಿ ಮರುಪಾವತಿ ಮಾಡಿದ ನಂತರ ರೂ.50,000 ಗಳ ಸಾಲಕ್ಕೆ ಅರ್ಜಿ ಸಲ್ಲಿಸಿದ್ದ 985 ಮಂದಿಗೆ ಒಟ್ಟು 4.92 ಕೋಟಿ ರೂ ಸಾಲ ವಿತರಿಸಲಾಗಿದ್ದು , ಇದುವರೆಗೆ ಪಿಎಂ ಸ್ವನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗಾಗಿ ಒಟ್ಟು 16,16,40,000 ರೂ ಗಳ ಸಾಲವನ್ನು ವಿತರಿಸಲಾಗಿದೆ.
ಪಿಎಂ ಸ್ವನಿಧಿ ಯೋಜನೆಯಡಿ ಸಾಲ ಪಡೆದ ಬೀದಿ ಬದಿ ವ್ಯಾಪಾರಿಗಳ ಕುಟುಂಬಕ್ಕೆ ಅನುಕೂಲವಾಗುವಂತೆ ಸರ್ಕಾರದ ವಿವಿಧ ಯೋಜನೆಗಳಾದ ಪಿಎಂ ಸುರಕ್ಷಾ ಭಿಮಾ ಯೋಜನೆ, ಜೀವನ್ ಜ್ಯೋತಿ ಭಿಮಾ ಯೋಜನೆ, ಶ್ರಮ ಯೋಗಿ ಮಾನ್‌ಧನ್ ಯೋಜನೆ, ಜನಧನ್ ಯೋಜನೆ, ಮಾತೃ ವಂದನಾ ಯೋಜನೆ, ಜನ ಸುರಕ್ಷಾ ಯೋಜನಾ, ಒಂದು ದೇಶ ಒಂದು ಪಡಿತರ ಚೀಟಿ ಯೋಜನೆಗಳ ಸೌಲಭ್ಯಗಳಿಗೂ ಕೂಡಾ ಅವರನ್ನು ನೋಂದಣಿ ಮಾಡುವ ಮೂಲಕ ಈ ಯೋಜನೆಗಳ ಎಲ್ಲಾ ಸವಲತ್ತುಗಳು ದೊರೆಯುವಂತೆ ಮಾಡಿದ್ದು ಬೀದಿ ವ್ಯಾಪಾರಿಗಳ ಒಟ್ಟು 10,171 ಕುಟುಂಬ ಸದಸ್ಯರನ್ನು ಈ ಯೋಜನೆಗಳ ವ್ಯಾಪ್ತಿಗೆ ಒಳಪಡಿಸಲಾಗಿದೆ.
ನಾನು ಫ್ಯಾನ್ಸಿ ವಸ್ತುಗಳ ವ್ಯಾಪಾರ ಮಾಡುತ್ತಿದ್ದು, ವ್ಯಾಪಾರವನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಪಿಎಂ ಸ್ವನಿಧಿ ಯೋಜನೆಯಡಿ ಮೊದಲು 10,000 ಸಾಲ ಪಡೆದಿದ್ದು, ಇದನ್ನು ಸಕಾಲದಲ್ಲಿ ಮರುಪಾವತಿ ಮಾಡಿದ ನಂತರ 20,000 ಪಡೆದು, ಅದನ್ನು ಮರು ಪಾವತಿ ಬಳಿಕ ಪ್ರಸ್ತುತ 50,000 ದ ಸಾಲ ಪಡೆದಿದ್ದೇನೆ. ಯೋಜನೆಯಿಂದ ಬ್ಯಾಂಕ್‌ನಲ್ಲಿ ಯಾವುದೇ ಜಾಮೀನು, ಅಡಮಾನ ನೀಡದೇ ಅತ್ಯಂತ ಸುಲಭದಲ್ಲಿ ಸಾಲ ದೊರೆತಿದ್ದು, ಈ ಮೊತ್ತದಿಂದ ವ್ಯಾಪಾರಕ್ಕೆ ಅಗತ್ಯವಿದ್ದ ವಸ್ತುಗಳನ್ನು ಖರೀದಿಸಿದ್ದೇನೆ. ಇದರಿಂದ ನನಗೆ ವ್ಯಾಪಾರದಲ್ಲಿ ಅಭಿವೃದ್ಧಿ ಹೊಂದಲು ಮತ್ತು ಆರ್ಥಿಕವಾಗಿ ಲಾಭ ಪಡೆಯಲು ಸಾಧ್ಯವಾಗಿದ್ದು, ನನ್ನ ಕುಟುಂಬವು ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಾಗಿದೆ : ಶ್ರೀಮತಿ.ದುರ್ಗಾ ಮಂಜುನಾಥ ಮಧರ‍್ಕರ್, ಬೀದಿ ಬದಿ ವ್ಯಾಪಾರಿ, ಕಾರವಾರ.
ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಸಮುದಾಯ ಸಂಘಟನಾಧಿಕಾರಿಗಳು, ಸಮುದಾಯ ಸಂಘಟಕರು ಹಾಗೂ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಸಹಕಾರದಿಂದ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಗರಿಷ್ಠ ಸಂಖ್ಯೆಯಲ್ಲಿ ಪಿಎಂ ಸ್ವನಿಧಿ ಯೋಜನೆಯಡಿ ಸಾಲ ವಿತರಿಸಲಾಗಿದೆ. ಪ್ರಸ್ತುತ ಬ್ಯಾಂಕ್‌ಗಳಿಂದ ತಿರಸ್ಕೃತಗೊಂಡಿರುವ ಫಲಾನುಭವಿಗಳ ಅರ್ಜಿಗಳಲ್ಲಿನ ಲೋಪದೋಷಗಳನ್ನು ಸರಿಪಡಿಸಿ ಸಾಲ ಮಂಜೂರಾತಿಗಾಗಿ ಮತ್ತೊಮ್ಮೆ ಅರ್ಜಿಗಳನ್ನು ಸಲ್ಲಿಸಲಾಗುತ್ತಿದ್ದು, ಜಿಲ್ಲೆಯ ಅರ್ಹ ಯಾವುದೇ ಫಲಾನುಭವಿ ಈ ಯೋಜನೆಯಿಂದ ವಂಚಿತರಾಗದಂತೆ ಎಚ್ಚರವಹಿಸಲಾಗಿದೆ. ಪಿಎಂ ಸ್ವನಿಧಿ ಯೋಜನೆಯಡಿ ಉತ್ತಮ ಪ್ರಗತಿ ಸಾಧಿಸಿದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದಿಂದ ನೀಡುವ ಬೆಸ್ಟ್ ಫರ್ ಫಾರ್ಮಿಂಗ್ ಯುಎಲ್‌ಬಿ ಇನ್ ಲೋನ್ ಫರ್‌ಮರ‍್ಮನ್ಸ್ ರಾಜ್ಯ ಪ್ರಶಸ್ತಿಯೂ ಕೂಡಾ ಕಾರವಾರ ನಗರಸಭೆಗೆ ದೊರೆತಿದೆ. : ಡಿ.ಟಿ ನಾಯ್ಕ್,, ಜಿಲ್ಲಾ ಕೌಶಲ್ಯಾಭಿವೃಧ್ದಿ ಅಧಿಕಾರಿ. ಉತ್ತರ ಕನ್ನಡ ಜಿಲ್ಲೆ.