ಕುಮಟಾ: ಸ್ಥಳೀಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯ ಹಾಗೂ ಆಂತರಿಕ ಗುಣಮಟ್ಟದ ಭರವಸೆ ಕೋಶ ಮತ್ತು ಆದಿತ್ಯ ಪ್ರಕಾಶನ ಹೆಗಡೆ ಇವುಗಳ ಸಂಯುಕ್ತ ಆಶ್ರಯದಲ್ಲಿ ನಿವೃತ್ತ ಇಂಗ್ಲೀಷ್ ಪ್ರಾಧ್ಯಾಪಕರಾದ ಪ್ರೊ. ಟಿ.ಜಿ ಭಟ್ ಹಾಸಣಗಿ ರಚಿಸಿದ ‘ಬಾಡದ ಕಡಲು’ ಕೃತಿ ಲೋಕಾರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಹೊನ್ನಾವರದ ನಾಗರಿಕ ಸಾಪ್ತಾಹಿಕ ಪತ್ರಿಕೆಯ ಸಂಪಾದಕರಾದ ಕೃಷ್ಣಮೂರ್ತಿ ಹೆಬ್ಬಾರ ಪುಸ್ತಕ ಲೋಕಾರ್ಪಣೆಗೊಳಿಸಿ ಕಳೆದ ಐದು ದಶಕಗಳಿಂದ ಹಿರಿಯ ಕವಿಗಳಾದ ಟಿ.ಜಿ.ಭಟ್ ಹಾಸಣಗಿ ಸಾಹಿತ್ಯ ಕೃಷಿ ನಡೆಸುತ್ತಾ ಬಂದಿರುತ್ತಾರೆ. ಈ 70ರ ವಯಸ್ಸಿನಲ್ಲಿಯೂ ಹೊಸ ಹೊಸ ಕಾವ್ಯ ರಚಿಸುತ್ತಿರುವುದು ಅಭಿನಂದನಾರ್ಹ ಸಂಗತಿ ಎಂದು ಹೇಳಿದರು. ‘ಬಾಡದ ಕಡಲು’ ಕವನ ಸಂಕಲನವನ್ನು ಹೊನ್ನಾವರ ಎಸ್ ಡಿ. ಎಮ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ನಾಗರಾಜ ಹೆಗಡೆ ಅಪಗಾಲ ಈ ಕೃತಿಯು ವೈವಿಧ್ಯಮಯವಾದ ಕವನಗಳನ್ನು ಹೊಂದಿದೆ. ಕಡಲು ಯಾವತ್ತು ಆಕರ್ಷಣೆಯನ್ನು ಹೊಂದಿರುತ್ತದೆ. ಹಾಗೆಯೇ ಮನುಷ್ಯನ ಅಹಂಕಾರವನ್ನು ನಿರಶನ ಮಾಡುತ್ತದೆ. ಸಾಹಿತ್ಯ ಭಾಷಾ ಶಿಕ್ಷಕರಿಗೆ ಮಾತ್ರ ಸಂಬಂಧಿಸಿದ್ದಲ್ಲ. ಮಾನವನಿಗೆ ಸಂಬಂಧಿಸಿದ್ದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉತ್ತರಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷರಾದ ರೋಹಿದಾಸ ನಾಯಕರವರು ಪ್ರತಿಯೊಬ್ಬ ಮನುಷ್ಯನಲ್ಲೂ ಒಬ್ಬ ಕವಿ ಇದ್ದಾನೆ. ಓದುಗರ ವರ್ಗ ಹೆಚ್ಚುತ್ತಾ ಹೋದಂತೆ ಕವಿಗಳಿಗೂ ಕವನ ರಚಿಸಲು ಪ್ರೇರಣೆ ಸಿಗುತ್ತದೆ. ಸಾಹಿತ್ಯದ ಓದಿನಿಂದ ಮನುಷ್ಯನ ವ್ಯಕ್ತಿತ್ವ ವಿಕಾಸವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಪ್ರೀತಿ ಪಿ. ಭಂಡಾರಕರ ಅವರು ಸಾಹಿತ್ಯ ಓದುವವರ ಸಂಖ್ಯೆ ಕಡಿಮೆಯಾಗಿದೆ. ನಮ್ಮ ಶಿಕ್ಷಕ ವಿದ್ಯಾರ್ಥಿಗಳಿಗೆ ಈ ಕೃತಿ ಲೋಕಾರ್ಪಣೆ ಮತ್ತು ಓದು ನಿಮಗೆ ಕವನ ರಚಿಸಲು ಸ್ಪೂರ್ತಿ ನೀಡಲಿ ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಕೃತಿಯಲ್ಲಿನ ಕವನವನ್ನು ಸಂದೀಪ ಮರಾಠೆ, ಉಷಾ ಗೌಡ ಮತ್ತು ಸಮೀಕ್ಷಾ ಜೋಶಿ ಸುಶ್ರಾವ್ಯವಾಗಿ ಹಾಡಿದರು. ಶ್ರೀಕಾಂತ ಭಟ್ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಉಪನ್ಯಾಸಕಿ ಶ್ರೀಮತಿ ರಾಧಾ ನಾಯ್ಕ ಕೃತಿಕಾರರನ್ನು ಸಭೆಗೆ ಪರಿಚಯಿಸಿದರು. ಜಯಶ್ರೀ ಡಿ ವಂದಿಸಿದರು. ನಾಗಶ್ರೀ ಮತ್ತು ಸಂದೀಪ ಮರಾಠೆ ಕಾರ್ಯಕ್ರಮ ನಿರೂಪಿಸಿದರು.