ಆಸ್ಪತ್ರೆಯ ಸತ್ಯಾಸತ್ಯತೆ ಬಹಿರಂಗವಾಗದಿದ್ದರೆ ಉಪವಾಸ ಸತ್ಯಾಗ್ರಹದ ಎಚ್ಚರಿಕೆ
ಶಿರಸಿ: ಕಳೆದ ಒಂದು ವರ್ಷದಿಂದ ಶಿರಸಿಯಲ್ಲಿನ ಸರಕಾರಿ ಆಸ್ಪತ್ರೆ ಕೆಲಸ ಸರಿಯಾಗಿ ನಡೆಯುತ್ತಿಲ್ಲ. ಹಣ ಬಿಡುಗಡೆ ಆಗಲಿ ಎಂಬ ಕಾರಣಕ್ಕೆ ಕಾಟಾಚಾರಕ್ಕೆ ಅಲ್ಪಸ್ಪಲ್ಪ ಕೆಲಸವಾದಂತೆ ತೋರಿಸುತ್ತಿದ್ದಾರೆ. ಈಗ ನಿರ್ಮಾಣಗೊಳ್ಳುತ್ತಿರುವ ಶಿರಸಿಯ ಹೈಟೆಕ್ ಆಸ್ಪತ್ರೆ ಅಪಾಯದಲ್ಲಿದೆ. ಈ ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ಹಾಗು ಶಾಸಕ ಭೀಮಣ್ಣ ನಾಯ್ಕ ಮುತುವರ್ಜಿ ವಹಿಸಿ ಆಸ್ಪತ್ರೆಯ ಅಭಿವೃದ್ಧಿ ಕಾಮಗಾರಿ ಕುರಿತಾಗಿ ಸತ್ಯಾಸತ್ಯತೆಯನ್ನು ಇನ್ನು ವಾರದೊಳಗೆ ಜನತೆಯ ಮುಂದಿಡಬೇಕು. ಇಲ್ಲವಾದಲ್ಲಿ ಜ.13 ರಂದು ಎಲ್ಲ ಜನರೊಂದಿಗೆ ಉಪವಾಸ ಧರಣಿ ಕೂರುತ್ತೇವೆ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಹೇಳಿದ್ದಾರೆ.
ಭಾನುವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಹಲವಾರು ಪ್ರತಿಷ್ಠಿತ ಮಾಧ್ಯಮಗಳು ಈಗೊಂದು 20 ದಿನದ ಹಿಂದೆ ವರದಿ ಮಾಡಿವೆ. ಆಸ್ಪತ್ರೆ ಕನಸು ಭಗ್ನ ಎಂಬುದಾಗಿ ಹೇಳಿವೆ. ನಾನು ಕೂಡ ಸುಮಾರು 20 ದಿನದ ಹಿಂದೆ ಪತ್ರಿಕಾಗೋಷ್ಠಿ ನಡೆಸಿ ಆತಂಕ ವ್ಯಕ್ತಪಡಿಸಿ ಮಾನ್ಯ ಶಾಸಕರಿಗೆ ಬೆಂಬಲ ಸೂಚಿಸಿ ನಿಜವಾದ ಸತ್ಯವನ್ನು ಜನತೆಗೆ ತಿಳಿಸಿ ಎಂಬುದಾಗಿ ಕೇಳಿದ್ದಾಗಿದೆ. ಆದರೆ ಇದ್ಯಾವುದಕ್ಕೂ ಶಾಸಕರು, ಸಚಿವರು ಉತ್ತರ ಕೊಡುವ ಗೋಜಿಗೆ ಹೋಗಿಲ್ಲ. ಇದಕ್ಕೆಲ್ಲಾ ಡೋಂಟ್ ಕೇರ್ ಅನ್ನುವ ಮನಸ್ಥಿತಿಯಲ್ಲಿ ಇದ್ದಾರೆ. ಕ್ಷೇತ್ರದ ಜನರ ಸಮಸ್ಯೆಗೆ ಇಷ್ಟೊಂದು ನಿರ್ಲಕ್ಷ ಸಲ್ಲದು. ಜೊತೆಗೆ ಆಯುಷ್ಮಾನ್ ಭಾರತ್ ರೆಫರಲ್ ಲೆಟರ್ ಮತ್ತು ದಿವ್ಯಾಂಗದ ಯುಡಿಐಡಿ ಕಾರ್ಡ್ ಪಡೆಯಲು ರೋಗಿಗಳು ಕಾರವಾರಕ್ಕೆ ಅಲೆಯುವುದನ್ನು ತಪ್ಪಿಸಿ, ಶಿರಸಿಯಲ್ಲಿಯೇ ಆ ವ್ಯವಸ್ಥೆ ಆಗಬೇಕೆಂದು ಅವರು ಆಗ್ರಹಿಸಿದರು.
ಇದೇ ಜಿಲ್ಲೆಯವರಾದ ರಾಮಕೃಷ್ಣ ಹೆಗಡೆಯವರು ಆರೋಪ ಬಂದ ಕೂಡಲೇ ರಾಜಿನಾಮೆ ಕೊಟ್ಟಿದ್ದು ನೋಡಿದ್ದೇವೆ. ಆದರೆ ಇಂದಿನ ರಾಜಕಾರಣಿಗಳಿಗೆ ಪ್ರತಿಷ್ಠಿತ ಮಾಧ್ಯಮಗಳಲ್ಲಿ ವರದಿ ಬಂದರೂ, ಸಂಘಟನೆಗಳು ಪತ್ರಿಕಾಗೋಷ್ಠಿ ನಡೆಸಿದರು ಉತ್ತರ ಕೊಡುವ ವ್ಯವಧಾನ ಇಲ್ಲ ಎಂದರೆ ಏನು ಹೇಳಬೇಕು ? ಈ ಕೂಡಲೇ ಶಾಸಕ ಭೀಮಣ್ಣ ನಾಯ್ಕರವರು ಆಸ್ಪತ್ರೆ ಕಾಮಗಾರಿ ವಿಚಾರದಲ್ಲಿ ಸತ್ಯವನ್ನು ಜನರೆದುರು ತೆರದಿಡಬೇಕು. ಆಸ್ಪತ್ರೆಯ ಪ್ಲಾಸ್ಟರ್, ಟೈಲ್ಸ್, ಪೇಂಟಿಂಗ್,ಲಿಫ್ಟ್ , ಫರ್ನಿಚರ್, ಎಲೆಕ್ಟಿಕ್, ಪ್ಲಮ್ಬಿಂಗ್ ಅಂತ ಸುಮಾರು ರೂ.40 ಕೋಟಿ ಬೇಕಾಗಬಹುದು. ಅದನ್ನ ತರುವರು ಯಾರು? ಈಗಲೇ ಅಸ್ಪತ್ರೆ ಕಾಂಟ್ರಾಕ್ಟರ್ ಗೆ ಹಣ ಪೂರ್ತಿ ಬಿಡುಗಡೆ ಆಗಿಲ್ಲ. ಇನ್ನು ಆಸ್ಪತ್ರೆ ಮಷಿನರಿಗಳಿಗೆ ಮೊದಲು ರೂ. 60 ಕೋಟಿ ಅಂತ ಇತ್ತು. ಕೊನೆಗೆ ಅದು ರೂ. 36 ಕೋಟಿ ಆಯಿತು. ಈಗ ನೋಡಿದರೆ ರೂ. 6 ಕೋಟಿ ಕೊಡುತ್ತೇವೆ ಅನ್ನುತ್ತೆ ಸರ್ಕಾರ ಆಸ್ಪತ್ರೆಯನ್ನು ಸರಕಾರ ಸಾಯಿಸಲು ಹೊರಟಿದೆಯಾ ಎಂಬ ಆತಂಕ ಜನರಲ್ಲಿ ಮೂಡತೊಡಗಿದೆ.
ಭೀಮಣ್ಣ ನಾಯ್ಕರು ತಾವು ಜನರ ಸೂಪರ್ವೈಸರ್ ಅಂತ ಹೇಳಿದ್ದೀರಿ. ತಾವು ಜನತೆಗೆ ಸರ್ಕಾರದ ಹಣ ತರುವ ಜವಾಬ್ದಾರಿ ತೆಗೆದುಕೊಳ್ಳಬೇಕು. ನಾವು ತಮಗೆ ಒಂದು ವಾರದ ಗಡುವು ಕೊಡುತ್ತಿದ್ದೇನೆ, ಶಿರಸಿ ಸರಕಾರಿ ಆಸ್ಪತ್ರೆಗೆ ಸಂಬಂಧಿಸಿ ಸತ್ಯವನ್ನು ಬಹಿರಂಗ ಪಡಿಸಬೇಕು. ಇಲ್ಲವಾದಲ್ಲಿ ಜ.13 ರಿಂದ ಆಸ್ಪತ್ರೆಯ ಉಳಿವಿಗೆಗಾಗಿ ಜನರೊಂದಿಗೆ ಬೀದಿಗಿಳಿದು ಹೋರಾಡುವುದರ ಜೊತೆಗೆ ತಮ್ಮ ಕಛೇರಿ ಮುಂದೆ ಉಪವಾಸದ ಧರಣಿ ಕೂರಬೇಕಾಗುತ್ತದೆ ಎಂದು ಈ ಮೂಲಕ ಸರಕಾರಕ್ಕೆ, ಶಾಸಕರಿಗೆ ಎಚ್ಚರಿಕೆಯನ್ನು ನೀಡುತ್ತಿದ್ದೇನೆ ಎಂದರು.
ಮಾಜಿ ಜಿಪಂ ಸದಸ್ಯೆ ಉಷಾ ಹೆಗಡೆ ಮಾತನಾಡಿ, ಶಿರಸಿ ಆಸ್ಪತ್ರೆಗೆ ಪ್ರತಿನಿತ್ಯ ಹಾವೇರಿ, ಹಾನಗಲ್, ಸೊರಬ ಕಡೆಯಿಂದ ಸಾಕಷ್ಟು ಜನ ಬರುತ್ತಾರೆ. ಈ ಭಾಗದಲ್ಲಿ ಉತ್ತಮ ಆಸ್ಪತ್ರೆಯ ಅವಶ್ಯಕತೆ ತುರ್ತು ಇದ್ದು, ಶಾಸಕರು ಈ ಬಗ್ಗೆ ಹೆಚ್ಚಿನ ಗಮನ ನೀಡಬೇಕೆಂದರು.
ಮಾಜಿ ಜಿಪಂ ಸದಸ್ಯ ಹಾಲಪ್ಪ ಜಕ್ಕಣ್ಣನವರ ಮಾತನಾಡಿ, ಅಧಿಕಾರದ ಖುರ್ಚಿ ಯಾರಿಗೂ ಶಾಶ್ವತವಲ್ಲ. ಅಧಿಕಾರವಿದ್ದಾಗ ಜನತೆಗೆ ಅನುಕೂಲ ಮಾಡಿಕೊಡಿ, ಆಗ ಭಗವಂತ ಮೆಚ್ಚುತ್ತಾನೆ ಎಂದರು.
ಜಯಶೀಲ ಗೌಡ ಬನವಾಸಿ ಮಾತನಾಡಿ, ಬಡವರು ಹೆಚ್ಚಾಗಿ ಸರಕಾರಿ ಆಸ್ಪತ್ರೆಗೆ ಬರುತ್ತಾರೆ. ಈಗ ಸರಕಾರಿ ಆಸ್ಪತ್ರೆಗೆ ಸರಕಾರ ನಿರ್ಲಕ್ಷ್ಯ ತೋರುವುದು ಸರಿಯಲ್ಲ ಎಂದು ಹೇಳಿದರು.
ರಮೇಶ ನಾಯ್ಕ ಕುಪ್ಪಳ್ಳಿ ಮಾತನಾಡಿ, ಕಾಗೇರಿಯವರು ಶಾಸಕರಿದ್ದಾಗ ಆಸ್ಪತ್ರೆಗೆ ಅನುದಾನ ತಂದಿದ್ದರು. ಹಾಲಿ ಶಾಸಕರು ಇದಕ್ಕೆ ಹೆಚ್ಚಿನ ಮುತುವರ್ಜಿ ವಹಿಸಿ ಆಸ್ಪತ್ರೆಯ ಕೆಲಸ ಪೂರ್ಣಗೊಳಿಸಬೇಕೆಂದರು.
ಸುದ್ದಿಗೋಷ್ಟಿಯಲ್ಲಿ ಶಿವಾನಂದ ದೇಶಳ್ಳಿ, ರಮಾನಂದ ಐನಕೈ, ಜಿ.ಎಸ್ ಹೆಗಡೆ ಇದ್ದರು.
ಆಯುಷ್ಮಾನ್ ರೆಫರಲ್ ಲೆಟರ್ಗಾಗಿ ಕಾರವಾರಕ್ಕೆ ಓಡಾಟ :
ಕೆಲವೊಮ್ಮೆ ಆಯುಷ್ಮಾನ್ ಭಾರತ್ ಯೋಜನೆಗೆ ತಾಲೂಕು / ಜಿಲ್ಲಾಸ್ಪತ್ರೆಯಿಂದ ರೆಫರಲ್ ಲೆಟರ್ ಅವಶ್ಯಕತೆ ಇರುತ್ತದೆ. ನಮ್ಮ ಜಿಲ್ಲೆಯಲ್ಲಿ ಬಹುತೇಕರಿಗೆ ಕಾರವಾರಕ್ಕೆ ಆಯುಷ್ಮಾನ್ ರೆಫರಲ್ ಲೆಟರ್ ಸಲುವಾಗಿ ಹೋಗುವಂತಹ ಪರಿಸ್ಥಿತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಾರವಾರಕ್ಕೆ ಹೋದರೂ ಸುಲಭವಾಗಿ ಸಿಗಲಾರದು. ಕೆಲವೊಮ್ಮೆ ಶಿರಸಿ ಜನ ಕಾರವಾರಕ್ಕೆ ಹೋದಾಗ ಡಾಕ್ಟರ್ ಗಳೇ ಇರುವುದಿಲ್ಲ. ಜನರು ಕಷ್ಟ ಪಟ್ಟು ಬೆಳಿಗ್ಗೆ ಬೇಗ ಕಾರವಾರಕ್ಕೆ ಹೋದರೆ ಡಾಕ್ಟರ್ ಇಲ್ಲಾ ಅಂದ್ರೆ ಇವರ ಪಾಡೇನು ? ಹಾಗೆ ಅಲ್ಲಿನ ಕೆಲವು ಸಿಬ್ಬಂದಿಗಳು ಅಮಾನವೀಯವಾಗಿ ನಡೆದು ಕೊಳ್ಳುವುದು ಇದೆ ಎಂಬ ಆರೋಪವೂ ಇದೆ. ರೋಗಿಗೆ ತುರ್ತಾಗಿ ಟ್ರೀಟ್ಮೆಂಟ್ ಮಾಡಿಸಬೇಕಾ ಅಥವಾ ಕಾಗದಪತ್ರಕ್ಕಾಗಿ ವಾರಗಟ್ಟಲೇ ಅಧಿಕಾರಿಗಳ ಟೇಬಲ್ ಸುತ್ತಬೇಕಾ ಎಂಬುದು ಜಿಲ್ಲೆಯ ಬಹುತೇಕ ಜನರ ಬಹುದೊಡ್ಡ ಸಮಸ್ಯೆಯಾಗಿದೆ.
ದಿವ್ಯಾಂಗರಿಗೂ ತಪ್ಪಿದ್ದಲ್ಲ ಇಲಾಖೆ ಅಲೆದಾಟ:
ಹಾಗೆಯೇ ದಿವ್ಯಾಂಗರಿಗೆ ಅನುಕೂಲವಾಗಲಿ ಎಂದು UDID ಮಾಡಿಕೊಡುತ್ತಾರೆ. ಯುನಿಕ್ ಡಿಸೆಬಿಲಿಟಿ ಐಡಿ (UD ID). ಅದನ್ನ ಮಾಡಿಸಲು ಕಾರವಾರಕ್ಕೆ ಹೋಗಲೇಬೇಕು. UDID ಕಾರ್ಡ್ ಹೋದ ತಕ್ಷಣವೇ ಅವರು ಮಾಡಿಕೊಡುವುದಿಲ್ಲ, ಅಲ್ಲಿ ಹೋಗಬೇಕು ಇಲ್ಲಿ ಹೋಗಬೇಕು ಎಂತು ತಿರುಗಿಸುತ್ತಾರೆ. ಕೆಲವೊಮ್ಮೆ ಸ್ಕ್ಯಾನ್ ಅಥವಾ ಎಕ್ಸರೇ ಮಾಡಬೇಕು ಅಂತಾ ಹೇಳಿ ಅಲ್ಲಿಯೇ ಪೂರ್ಣ ದಿನ ಕಳೆಯುವಂತಾಗುತ್ತದೆ. ಅಮಾಯಕರಾದ ಜನರ ಹತ್ತಿರ ಅದನ್ನೆಲ್ಲಾ ಮಾಡಿಸ್ತಾರೆ ಅಲ್ಲಿಯವರೆಗೆ ಸಂಜೆ 4-30 ಆಗತ್ತೆ ಆಮೇಲೆ ಡಾಕ್ಟರ್ ಡ್ಯೂಟಿ ಮುಗಿತು. ಮತ್ತೆ ಹೇಳೋದು ನಾಳೆ ಬಾ ಅಂತಾರೆ ಅಥವಾ ಒಂದು ವಿಕ್ ಬಿಟ್ಟು ಬಾ, ಮುಂದಿನ ವಾರ ಡ್ಯೂಟಿ ಇದೆ ಅಂತಾರಂತೆ. ಹೀಗಾದರೆ ನಿಜವಾಗಿ ಅನಿವಾರ್ಯತೆ ಇದ್ದವರಿಗೆ ಅನುಕೂಲ ದೊರೆಯುವುದು ಹೇಗೆಂಬುದು ಯಕ್ಷಪ್ರಶ್ನೆಯಾಗಿದೆ. UD ID ಕಾರ್ಡ್ ಬಡವರಿಗೆ, ಮಧ್ಯಮ ವರ್ಗದವರಿಗೆ ಸರಿಯಾಗಿ ಮುತುವರ್ಜಿಯಿಂದ ಈ ಕಾರ್ಡ್ ಸಮಯಕ್ಕೆ ಸರಿಯಾಗಿ ದೊರೆಯುತ್ತಿಲ್ಲ. ಈ ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು, ಕ್ಷೇತ್ರದ ಶಾಸಕರು ಹಾಗು ಜಿಲ್ಲಾಡಳಿತ ಕೂಡಲೇ ಗಮನವಹಿಸಿ ಸಮಸ್ಯೆಗೆ ಇತಿಶ್ರೀ ಹಾಡಬೇಕಿದೆ.
ಉಸ್ತುವಾರಿ ಸಚಿವ ಹಾಗು ಶಾಸಕ ಬೀಮಣ್ಣ ಅವರಿಗೆ ಒಂದು ವಾರಗಳ ಕಾಲ ಸಮಯ ನೀಡುತ್ತೇನೆ ಜನರೆದುರು ಸತ್ಯ ಹೇಳಬೇಕು. ಇಲ್ಲವಾದಲ್ಲಿ ಜ.13 ರಂದು ಎಲ್ಲ ಜನತೆಯ ಸಹಕಾರದೊಂದಿಗೆ ಉಪವಾಸ ಧರಣಿ ಕೂರುತ್ತೇನೆ.
– ಅನಂತಮೂರ್ತಿ ಹೆಗಡೆ, ಸಾಮಾಜಿಕ ಹೋರಾಟಗಾರ