ಹಳಿಯಾಳ : ನಗರದ ರೈತರ ಸೇವಾ ಸಹಕಾರಿ ಸಂಘದ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಬೆಂಬಲಿತ ಅಭ್ಯರ್ಥಿಗಳು ವಿಜಯಪತಾಕೆ ಹಾರಿಸಿದರು.
ಸಂಘದ ಆಡಳಿತ ಮಂಡಳಿಗೆ ನಡೆದ ಈ ಚುನಾವಣೆಯಲ್ಲಿ 12 ಸ್ಥಾನಗಳ ಪೈಕಿ ಹಳಿಯಾಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಸುನೀಲ್ ಹೆಗಡೆ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀಕಾಂತ ಘೋಟ್ನೇಕರ ಮಾರ್ಗದರ್ಶನದಲ್ಲಿ ಸ್ಪರ್ಧಿಸಿದ್ದ ಭಾರತೀಯ ಜನತಾ ಪಾರ್ಟಿ ಬೆಂಬಲಿತದ 11 ಅಭ್ಯರ್ಥಿಗಳನ್ನು ರೈತ ಮತದಾರ ಬಾಂಧವರು ಆಯ್ಕೆ ಮಾಡಿದ್ದಾರೆ.
ಸಾಮಾನ್ಯ ವರ್ಗಕ್ಕೆ ಎಸ್.ಎಲ್. ಘೋಟ್ನೇಕರ, ಮಲ್ಲೇಶಿ ಉಪ್ಪಿನ, ಪರಶುರಾಮ ಪವಾರ, ಪರಶುರಾಮ ಹಣಬರ, ಎಸ್.ಸಿ ವರ್ಗಕ್ಕೆ ಯಲ್ಲಪ್ಪ ಕಲಭಾವಿ, ಎಸ್.ಟಿ ವರ್ಗಕ್ಕೆ ಬಸವರಾಜ ಮಡ್ಡಿ, ಹಿಂದುಳಿದ ‘ಅ’ ವರ್ಗಕ್ಕೆ ಲತೀಪಶಾ ಲತೀಫನವರ, ಹವಗಿ ಸಾಮಾನ್ಯ ವರ್ಗಕ್ಕೆ ಮನೋಹರ ಅಂಗ್ರೋಳ್ಳಿ, ತುಳಸಾ ಟೋಸುರ, ಕರ್ಲಕಟ್ಟಾ ಸಾಮಾನ್ಯ ವರ್ಗಕ್ಕೆ ರುಕ್ಮಾ ಭಾಗ್ವತಕರ ಆಯ್ಕೆಯಾದರೆ ಚುನಾವಣೆಗೂ ಮುನ್ನ ಸಾಲಗಾರರಲ್ಲದ ಕ್ಷೇತ್ರಕ್ಕೆ ಉದಯ ನಾರಾಯಣ ಜಾಧವ ಅವಿರೋಧವಾಗಿ ಆಯ್ಕೆಯಾದರು.
ಮತ ಎಣಿಕೆ ಕಾರ್ಯ ಮುಗಿದ ಬೆನ್ನಲ್ಲೇ ಮಾಜಿ ಶಾಸಕರಾದ ಸುನೀಲ್ ಹೆಗಡೆ ಹಾಗೂ ಮಾಜಿ ವಿ.ಪ ಸದಸ್ಯರಾದ ಶ್ರೀಕಾಂತ ಘೋಟ್ನೇಕರ ನೂತನವಾಗಿ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಅಭಿನಂದಿಸಿ, ಹಾರೈಸಿದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು ಗುಲಾಲ ಎರಚಿ, ಪಟಾಕಿ ಸಿಡಿಸಿ, ಜಯಘೋಷ ಹಾಕುವುದರ ಮೂಲಕ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಿವಾಜಿ ನರಸಾನಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ ಘಟಕಾಂಬಳೆ, ನಗರ ಘಟಕ ಅಧ್ಯಕ್ಷರಾದ ತಾನಾಜಿ ಪಟ್ಟೇಕರ, ಬಿಜೆಪಿ ಯುವ ಮುಖಂಡರಾದ ಶ್ರೀನಿವಾಸ ಘೋಟ್ನೇಕರ, ಪುರಸಭೆ ಸದಸ್ಯರು, ಪ್ರಮುಖರು, ಕಾರ್ಯಕರ್ತರು, ಮೊದಲಾದವರು ಉಪಸ್ಥಿತರಿದ್ದರು.