ಬನವಾಸಿ: ಪೋಷಕರು ಮಕ್ಕಳಿಗೆ ಆಸ್ತಿ ಮಾಡುವುದು ಬೇಡ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂಬಂತೆ ಸಂಸ್ಕಾರಯುತ ಶಿಕ್ಷಣ ಕಲಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಶ್ರೀ ಜಯಂತಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗಣೇಶ ಸಣ್ಣಲಿಂಗಣ್ಣನ್ನವರ ಹೇಳಿದರು.
ಅವರು ಮಂಗಳವಾರ ಇಲ್ಲಿನ ಶ್ರೀ ಜಯಂತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿ, ಮಕ್ಕಳು ಸಾಧಕರ ಸಾಧನೆಗಳನ್ನು ಮೈಗೊಡಿಸಿಕೊಂಡು ಉತ್ತಮ ಗುಣಮಟ್ಟದ ಶಿಕ್ಷಣ ಕಲಿಯಬೇಕು ಎಂದರು.
ಶ್ರೀ ಜಯಂತಿ ವಿದ್ಯಾವರ್ಧಕ ಸಂಘದ ನಿರ್ದೇಶಕ ಗಜಾನನ ಗೌಡ ಮಾತನಾಡಿ, ಪ್ರತಿ ಮಗುವೂ ಒಂದಲ್ಲ ಒಂದು ಪ್ರತಿಭೆಗಳನ್ನು ಪಡೆದುಕೊಂಡು ಈ ಜಗತ್ತಿಗೆ ಬಂದಿರುತ್ತದೆ. ಅಂತಹ ಮಕ್ಕಳ ಪ್ರತಿಭೆಗಳನ್ನು ಗುರುತಿಸಲು ವಾರ್ಷಿಕೋತ್ಸವಗಳು ವೇದಿಕೆಯಾಗಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರ,ಶಿಕ್ಷಣ ನೀಡಿದರೆ ಅವರು ಬುದ್ದಿ ಶಕ್ತಿ, ಜ್ಞಾನ,ವಿವೇಕದಿಂದ ನಡೆದು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಶ್ರೀ ಜಯಂತಿ ವಿದ್ಯಾವರ್ಧಕ ಸಂಘದ ನಿರ್ದೇಶಕಿ ಸೀಮಾವತಿ ಕೆರೊಡಿ ಮಾತನಾಡಿ, ಪೋಷಕರು ಮಕ್ಕಳ ಅಭಿರುಚಿಗೆ ತಕ್ಕಂತೆ ಶಿಕ್ಷಣ ಕೊಡಿಸಿದರೆ ಆ ಮಕ್ಕಳು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಲು ಸಾಧ್ಯವಾಗುತ್ತದೆ ಎಂದರು.
ಶ್ರೀ ಜಯಂತಿ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶಿವಯೋಗಿ ಉಳ್ಳಾಗಡ್ಡಿ, ನಿರ್ದೇಶಕರಾದ ರಾಜಶೇಖರ ಗೌಡ, ಮೃತ್ಯುಂಜಯ ಚೌದರಿ, ಎನ್.ಜಿ.ರಾಯ್ಸದ್, ಇಂದುಧರ ಗೌಡ, ಕೆ.ಪಿ ಕಾನಳ್ಳಿ, ವೇದಿಕೆಯಲ್ಲಿದ್ದರು.
ಮಕ್ಕಳು ಸಮಾಜಕ್ಕೆ ಮಾದರಿಯಾಗುವಂತಹ ನೃತ್ಯ, ನಾಟಕ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮನ ರಂಜಿಸಿದರು. ಶ್ರೀ ಜಯಂತಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ರೇಷ್ಮಾ ವರದಿವಾಚನ ಮಾಡಿದರು. ಕಾರ್ಯಕ್ರಮವನ್ನು ಶಿಕ್ಷಕರಾದ ಅಶ್ವಿನಿ ನಿರೂಪಿಸಿದರು. ಶಶಿರೇಖಾ ಸ್ವಾಗತಿಸಿದರು. ತನುಜಾ ವಂದಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಇದ್ದರು.