ಶಿರಸಿ: ವಿಧವಿಧದ ತಿಂಡಿ ತಿನಿಸು, ಬಾಯಲ್ಲಿ ನೀರೂರಿಸುವ ಉತ್ತರ ಕರ್ನಾಟಕದ ರೊಟ್ಟಿ ಪಲ್ಯದಿಂದ ಹಿಡಿದು ಮಲೆನಾಡಿನ ಮನೆ ಅಡುಗೆಗಳ ಸ್ವಾದದ ಬಗೆ ಬಗೆಯ ಪದಾರ್ಥಗಳನ್ನು ಮಾರಾಟ ಮಾಡಿ ಸಂಭ್ರಮಪಟ್ಟ ಕಾಲೇಜು ವಿದ್ಯಾರ್ಥಿಗಳು. ಇಂತಹ ಖಾದ್ಯಗಳ ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದು ಎಂಎಂ ಕಾಲೇಜಿನಲ್ಲಿ ಜರುಗಿದ್ದು ಆಹಾರ ಮೇಳದಲ್ಲಿ.
ಶಿರಸಿಯ ಎಂಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಕಾಲೇಜಿನ ಭೂಮಿಕಾ ಕ್ಲಬ್, ವಿದ್ಯಾರ್ಥಿ ಕಲ್ಯಾಣ ವಿಭಾಗ ಮತ್ತು ವಿದ್ಯಾರ್ಥಿ ಪ್ರತಿನಿಧಿಗಳ ಸಹಯೋಗದೊಂದಿಗೆ ನಡೆದ ‘ಆಹಾರ ಮೇಳವನ್ನು ಎಂ.ಇ.ಎಸ್ ಅಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಕಾಲೇಜು ಉಪಸಮಿತಿ ಅಧ್ಯಕ್ಷ ಎಸ್.ಕೆ. ಭಾಗವತ್ ಹಾಗೂ ಪದಾಧಿಕಾರಿಗಳು, ಪ್ರಾಚಾರ್ಯ ಪ್ರೋ.ಜಿ.ಟಿ. ಭಟ್ ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿಗಳು ಬಗೆ ಬಗೆಯ ತಿಂಡಿ ತಿನಿಸುಗಳನ್ನು ಮಾರಾಟ ಮಾಡಿ ಸಂಭ್ರಮಪಟ್ಟರು. ಸಮೋಸ, ವಡಾಪಾವ್, ಪಾಪಡ್ ಮಸಾಲಾ, ಫ್ರೂಟ್ ಕಬಾಬ್, ಮಸಾಲಾ ಮಜ್ಜಿಗೆ,ಪಾನಿಪುರಿ, ಮಸಾಲಾ ಮಜ್ಜಿಗೆ, ಸೇವ್ ಪುರಿ,ಚುರುಮುರಿ, ಕುರ್ ಕುರೆ ಮಸಾಲಾ, ಮಸಾಲಾ ಮಂಡಕ್ಕಿ, ಗಿಣ್ಣು,ಪಲಾವ್, ಫ್ರೈಡ್ ರೈಸ್ ಹೀಗೆ ತರಹೇವಾರಿ ತಿಂಡಿ ತಿನಿಸುಗಳನ್ನು ತಾವೇ ತಯಾರಿಸಿ, ವೃತ್ತಿಪರ ವ್ಯಾಪಾರಿಗಳಂತೆ ಮಾರಾಟ ಮಾಡಿ ಹರ್ಷಪಟ್ಟರು.
ವಿದ್ಯಾರ್ಥಿಗಳಲ್ಲಿ ವ್ಯಾಪಾರ ವಹಿವಾಟು,ಲಾಭದ ಕುರಿತು ಅರಿವು ಮೂಡಿಸಲು ಮಹಾವಿದ್ಯಾಲಯವು ಇಂತಹ ಉತ್ತಮ ಕಾರ್ಯಕ್ರಮವನ್ನು ಜರುಗಿಸಿತ್ತು. ಅದರಂತೆ ವಿದ್ಯಾರ್ಥಿಗಳೂ ಕೂಡ ಅತ್ಯಂತ ಹುಮ್ಮಸ್ಸಿನಿಂದ ವಿಭಿನ್ನ ಬಗೆಯ ಆಹಾರ ತಯಾರಿಸಿ ಕಾಲೇಜಿನ ಆವರಣದಲ್ಲಿ ತಾತ್ಕಾಲಿಕವಾಗಿ ತೆರೆದಿದ್ದ ಮಳಿಗೆಗಳಲ್ಲಿ ಮಾರಾಟ ಮಾಡಿದರು. ಒಟ್ಟು ಹದಿನಾಲ್ಕು ಮಳಿಗೆಗಳಲ್ಲಿ ವ್ಯಾಪಾರ ಮಾಡಲಾಯಿತು. ಬೆಳಿಗ್ಗೆ 10 ಗಂಟೆಗೆ ಶುರುವಾದ ಆಹಾರ ಮೇಳ ಮಧ್ಯಾಹ್ನ 1ಗಂಟೆಗೆ ಮುಕ್ತಾಯವಾಯಿತು. ಇದರಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸೇರಿದಂತೆ ಅಧ್ಯಾಪಕರು, ಸಿಬ್ಬಂದಿಗಳು, ಪೋಷಕರು ಕೂಡಾ ತಿನಿಸುಗಳನ್ನು ಖರೀದಿಸಿ ಸವಿದರು.