ಸಿದ್ದಾಪುರ: ಇತ್ತೀಚಿಗೆ ಹೆಚ್ಚು ಅಂಕಗಳಿಕೆ ಒಂದೇ ಮಾನದಂಡವೆಂದು ಪರಿಣಿಸಿದಂತಿರುವ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳ ಮಾನಸಿಕ ಒತ್ತಡ ಅರಿಯದೇ ಕಲಿಕೆಗೆ ಸೂಕ್ತ ವಾತಾವರಣವಿಲ್ಲದಿರುವುದರಿಂದ ಪ್ರೌಢಶಾಲಾ ಸಹ ಶಿಕ್ಷಕರು ಅತಿ ಹೆಚ್ಚಿನ ಕಾರ್ಯದೊತ್ತಡಕ್ಕೆ ಬಲಿಯಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಶಾಲೆಗಳಲ್ಲಿ ಬಿಡುವಿಲ್ಲದ ಸರಣಿ ಪರೀಕ್ಷೆಗಳು, ದಾಖಲೆಗಳು, ಮರುಸಿಂಚನ, ಎಫ್.ಎಲ್.ಎನ್. ಆನ್ಲೈನ್ ಕೆಲಸಗಳು, ಪ್ರತಿಬಿಂಬ, ಮೊಟ್ಟೆ, ಚಿಕ್ಕಿ ಹಂಚಿಕೆಯನ್ನು ಸ್ವಸಹಾಯ ಸಂಘಗಳಿಗೆ ನೀಡುವ ಬದಲಿಗೆ ಶಿಕ್ಷಕರ ನಿರ್ವಹಣೆ,ಪರೀಕ್ಷಾ ಸಮಯದಲ್ಲಿ ತರಬೇತಿಗೆ ನಿಯೋಜನೆ ಇತ್ಯಾದಿ ದಿನಕ್ಕೊಂದು ಕಾರ್ಯಕ್ರಮಗಳಲ್ಲದೆ ಅನಗತ್ಯ ದಾಖಲಿಕರಣದಿಂದಾಗಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಕಲಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಇದಕ್ಕಾಗಿ ಶಾಲಾ ಶಿಕ್ಷಣ ಇಲಾಖೆಯು ರಾಜ್ಯಾದ್ಯಂತ ಸರಳೀಕೃತ ಕಾರ್ಯಕ್ರಮ ರೂಪಿಸಿ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಮಾನಸಿಕ ಒತ್ತಡ ಕಡಿಮೆ ಮಾಡಿ ಶೈಕ್ಷಣಿಕ ಪ್ರಗತಿ ಹೆಚ್ಚಿಸುವಂತೆ ತಾಲ್ಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಕೆ. ನಾಯ್ಕ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.
ಇದಲ್ಲದೆ ಶಿಕ್ಷಕರ ಬಹುದಿನಗಳ ಬೇಡಿಕೆಗಳಾದ ಬಡ್ತಿ ಶಿಕ್ಷಕರಿಗೆ ಕಾಲಮಿತಿ ವೇತನ, ವೃಂದ ಮತ್ತು ನೇಮಕಾತಿಗೆ ತಿದ್ದುಪಡಿ, ಪಿ.ಯು. ಕಾಲೇಜಿಗೆ ನಿಯಮಿತವಾಗಿ ಬಡ್ತಿ ನೀಡುವುದು.ಒ.ಪಿ.ಎಸ್ ಜಾರಿ, ಅನುದಾನಿತ ಪ್ರೌಢಶಾಲೆಗಳ ಖಾಲಿ ಹುದ್ದೆ ಭರ್ತಿ, ಎಸ್ ಎಸ್ ಎಲ್ ಸಿ ಮೌಲ್ಯಮಾಪನ ನಿಗದಿತ ಅವಧಿಯೊಳಗೆ ಪೂರ್ಣ, ರಜಾ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದ ಶಿಕ್ಷಕರಿಗೆ ಗಳಿಕೆ ರಜೆ ನೀಡುವುದು ಇತ್ಯಾದಿ ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿದ ಕ್ಷೇತ್ರಶಿಕ್ಷಣಾಧಿಕಾರಿ ಎಮ್.ಎಚ್. ನಾಯ್ಕ ಸಕಾರಾತ್ಮಕವಾಗಿ ಸ್ಪಂದಿಸಿ ಮೇಲಾಧಿಕಾರಿಗಳಿಗೆ ಕಳಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಚಂದ್ರಶೇಖರ ನಾಯ್ಕ, ರಾಜ್ಯ ಪ್ರತಿನಿಧಿ ಗೋಪಾಲ ನಾಯ್ಕ ಭಾಶಿ, ಖಜಾಂಚಿ ಮಾರುತಿ ಮಡಗಾಂವಕರ, ಜಿಲ್ಲಾ ಪ್ರತಿನಿಧಿ ವಿ.ಡಿ. ನಾಯ್ಕ, ಪದಾಧಿಕಾರಿಗಳಾದ ಚಂದ್ರಶೇಖರ ಎ. ನಾಯ್ಕ, ಶಿಕ್ಷಕರಾದ ಹರೀಶ ಬಿಳಗಿ,ಜಿ.ಟಿ.ಭಟ್ಟ, ಗಣೇಶ ಭಟ್ಟ ಹಳ್ಳಿಬೈಲ್, ದೈಹಿಕ ಶಿಕ್ಷಣ ಶಿಕ್ಷಕ ಗೋಪಾಲ ನಾಯ್ಕ ಬಾಲಿಕೊಪ್ಪ, ಮುಖ್ಯಾಧ್ಯಾಪಕ ಲೋಕೇಶ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.