ಹೊನ್ನಾವರ : ತಾಲೂಕಿನ ಗುಂಡಬಾಳ ಮುಟ್ಟಾದ ಶ್ರೀ ದುರ್ಗಾಂಬಾ ದೇವಾಲಯ ಸಭಾಭವನದಲ್ಲಿ ಸಂಧ್ಯಾ ಸಂಗೀತ ಕಾರ್ಯಕ್ರಮ ಕಳೆದ ರವಿವಾರ ನಡೆಯಿತು.
ಕುಮಾರ ಪ್ರಥಮ ಭಟ್ಟ, ಭಾಗ್ಯಲಕ್ಷ್ಮೀ ಭಟ್ಟ ರಾಗ ದುರ್ಗಾ ಹಾಗೂ ಮಧುಕಂಸ ಪ್ರಸ್ತುತ ಪಡಿಸಿ ಭಜನ್‌ಗಳನ್ನು ಪ್ರಸ್ತುತ ಪಡಿಸಿದರು. ನಂತರದಲ್ಲಿ ಶ್ರೀಮತಿ ಸರೋಜಾ ಭಟ್ಟ ಖರ್ವಾ ತಮ್ಮ ಗಾಯನವನ್ನು ಸಾದರ ಪಡಿಸಿದರು. ಇವರಿಗೆ ವಿನಾಯಕ ಭಟ್ಟ ಹರಡಸೆ, ಮಂಜುನಾಥ ಭಟ್ಟ, ಮನೋಜ ಕುಮಾರ ತಬಲಾ, ಹಾರ್ಮೋನಿಯಂ ಸಾಥ್ ನೀಡಿದರು.
ವಿ.ಆರ್.ಭಟ್ಟ ಹಡಿನಬಾಳ ಹಾಗೂ ಶಂಭುಲಿಂಗೇಶ್ವರ ದೇವಾಲಯ ಹಡಿನಬಾಳ ಇದರ ಮಾತೆಯರಿಂದ ಭಜನೆ ಕಾರ್ಯಕ್ರಮ ನಡೆಯಿತು. ಖ್ಯಾತ ಹಿಂದೂಸ್ತಾನಿ ಗಾಯಕ ವಿದ್ವಾನ್ ಶಿವಾನಂದ ಭಟ್ಟ ಹಡಿನಬಾಳ ಅವರು ರಾಗ ಯಮನನೊಂದಿಗೆ ಕಾರ್ಯಕ್ರಮ ಆರಂಭಿಸಿ ನಂತರದಲ್ಲಿ ದೇವರ ನಾಮಗಳನ್ನು ಪ್ರಸ್ತುತಪಡಿಸಿ ಸೇರಿದ ಶೋತೃಗಳನ್ನು ಭಕ್ತಿ ಪರವಶವಾಗುವಂತೆ ಮಾಡಿದರು. ಇವರಿಗೆ ವಿದ್ವಾನ್ ಎನ್.ಜಿ.ಹೆಗಡೆ ಕಪ್ಪೆಕೇರಿ ತಬಲಾ ಸಾಥ್‌ನ್ನು ಹಾಗೂ ಹರಿಶ್ಚಂದ್ರ ನಾಯ್ಕ ಸಂವಾದಿನಿ ಸಾಥ್ ನೀಡಿ ಕಾರ್ಯಕ್ರಮಕ್ಕೆ ಮೆರಗು ತಂದರು. ತಾಳದಲ್ಲಿ ಪ್ರಥಮ ಭಟ್ಟ ಸಹಕರಿಸಿದರು.
ಊರಿನ ಗಣ್ಯರಾದ ಎಸ್.ಆರ್.ಹೆಗಡೆ, ಕೆ.ವಿ. ಹೆಗಡೆ. ಎಲ್.ಎಂ.ಹೆಗಡೆ ಕೆರಮನೆ, ಟಿ.ವಿ.ಹೆಗಡೆ, ವಿ.ಜಿ.ಭಟ್ಟ ಕಲಾವಿದರನ್ನು ಗೌರವಿಸಿದರು. ಗಣಪತಿ ಹೆಗಡೆ ಸ್ವಾಗತಿಸಿ ವಂದಿಸಿದರು.