ದಾಂಡೇಲಿ : ನಗರದ ಹಳೆ ನಗರಸಭೆಯ ಆವರಣದಲ್ಲಿ ಕರ್ನಾಟಕ ರಾಜ್ಯ ಮಾನವ ಜನಪರ ಮಿಷನ್ ಆಶ್ರಯದಡಿ ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಮಾನವನ ಬೆಳವಣಿಗೆ ಎಂಬ ಚಿಂತನ ಮಂಥನ ಕಾರ್ಯಕ್ರಮವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದೆಹಲಿಯ ಅಖಿಲ ಭಾರತ ಮಾನವ ಹಕ್ಕುಗಳ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸದಾನಂದ ಗೌಡ ಪಾಟೀಲ್ ನಾಗರಿಕ ಸಮಾಜದ ಹಕ್ಕು ಬಾಧ್ಯತೆಗಳ ಬಗ್ಗೆ ಸಂವಿಧಾನವೂ ಸಂರಕ್ಷಣೆ ಮಾಡುತ್ತಾ ಬಂದಿದೆ. ಆದರೂ ಕೆಲವೊಮ್ಮೆ, ಹಿಂಸೆ, ಕ್ರೂರತೆ ಹಾಗೂ ಮನುಷ್ಯ ವಿರೋಧಿ ಚಟುವಟಿಕಗಳ ಮೂಲಕ ಇಂದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿವೆ. ಈ ಬಗ್ಗೆ ನ್ಯಾಯಾಂಗವೂ ಶಿಸ್ತು ಕ್ರಮ ಜರಗಿಸುತ್ತಾ ಬಂದಿದೆ. ಆದರೆ ಸಂರಕ್ಷಣೆ ಎಂಬುದು ಕೇವಲ ವ್ಯವಸ್ಥೆ ಅಷ್ಟೇ ಮಾಡಬೇಕು ಎಂದೆನಿಲ್ಲ, ವಯಕ್ತಿಕವಾಗಿ ನಾವು ಪರರ ಸ್ವಾತಂತ್ರ್ಯವನ್ನು ಕೂಡ ಗೌರವಿಸಬೇಕಿದೆ. ಈ ಮೂಲಕ ಮಾನವ ಹಕ್ಕುಗಳಿಗೆ ವೈಯಕ್ತಿಕ ಬೆಂಬಲ ಕೂಡ ಅತ್ಯಗತ್ಯ. ಈ ನಿಟ್ಟಿನಲ್ಲಿ ಮಾನವ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಾ.ಅಜನಾಳ ಭೀಮಾಶಂಕರ ಅವರು ಮನುಷ್ಯ ತನ್ನ ಬದುಕನ್ನು ಅರ್ಥಪೂರ್ಣವಾಗಿ ಮತ್ತು ತೃಪ್ತಿದಾಯಕವಾಗಿ ಜೀವಿಸಲು ಇರುಬೇಕಾಗಿರುವಂತಹದ್ದೇ ಮಾನವ ಹಕ್ಕಾಗಿದೆ. ಪ್ರಸ್ತುತ ಮನುಷ್ಯ ತನ್ನ ವಿವೇಚನೆಯನ್ನು ಕಳೆದುಕೊಳ್ಳುತ್ತಿದ್ದು, ಕಲುಷಿತ ಸಮಾಜದಲ್ಲಿ ಬದುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಪ್ರತಿಯೊಬ್ಬರು ತಮಗೆ ನೀಡಲಾಗಿರುವ ಹಕ್ಕುಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಬೇಕು ಎಂದು ಕರೆ ನೀಡಿದರು. ಪ್ರಜಾಪ್ರಭುತ್ವದ ಜೀವಂತಿಕೆ ಇರುವುದೇ ನಾಗರಿಕ ಸಮಾಜದ ಸ್ವತಂತ್ರ ಬದುಕಿನಿಂದ. ಹಾಗಾಗಿ ಸಂವಿಧಾನ ಹಾಗೂ ಕಾನೂನು ನೀಡಿರುವ ಮಾನವ ಹಕ್ಕುಗಳನ್ನು ಬೆಂಬಲಿಸಿ, ಬಾಳಬೇಕಿದೆ ಎಂದು ಕರೆ ನೀಡಿದರು.
ನ್ಯಾಯವಾದಿ ಮೇಘರಾಜ ಮೇತ್ರಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಮಾನವ ಹಕ್ಕುಗಳ ರಕ್ಷಣೆ ಮತ್ತು ಪ್ರಚಾರಕ್ಕಾಗಿ ಮಾನವ ಹಕ್ಕುಗಳ ದಿನವನ್ನು ಘೋಷಿಸಲಾಯಿತು. ವ್ಯಕ್ತಿಯ ಜೀವನ, ಸ್ವಾತಂತ್ರ್ಯ, ಸಮಾನತೆ ಮತ್ತು ಘನತೆಗೆ ಸಂಬಂಧಿಸಿದ ಹಕ್ಕುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುವುದೇ ಮಾನವ ಹಕ್ಕುಗಳ ದಿನಾಚರಣೆಯ ಮುಖ್ಯ ಆಶಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸಂಘಟನೆಯ ರಾಜ್ಯ ನಿರ್ದೇಶಕರಾದ ಹಾಜಿ ಫಿರೋಜ್ ಪಿರ್ಜಾದೆ ಅವರು ಮಾನವ ಹಕ್ಕುಗಳ ರಕ್ಷಣೆಯ ನಿಟ್ಟಿನಲ್ಲಿ ಹಾಗೂ ಈ ಬಗ್ಗೆ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಂಘಟನೆ ತನ್ನದೇ ಆದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಮಾನವ ಹಕ್ಕು ಕಾಯ್ದೆ ಅಡಿಯಲ್ಲಿ ಪ್ರತಿಯೊಬ್ಬರು ಸಮಾಜದಲ್ಲಿ ಸಮಾನತೆ, ಸ್ವತಂತ್ರ್ಯ ಮತ್ತು ಗೌರವಪೂರ್ಣವಾಗಿ ಬದುಕುವ, ಸಂರಕ್ಷಣೆಯಿಂದ ಇರುವ ಸ್ವಾತಂತ್ರ್ಯ ಹೊಂದಲಾಗಿದೆ. ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡುವವರಿಗೆ ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆಯನ್ನೂ ವಿಧಿಸಲಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಮಾನವ ಅದಿಕಾರ ಸಂಘಟನೆಯ ರಾಜ್ಯ ಕಾರ್ಯನಿರ್ವಾಹಕ ನಿರ್ದೇಶಕರಾದ ಅಕ್ಬರ್ ಖೋಜಾ, ನಗರಸಭೆ ಸದಸ್ಯರಾದ ಮಜೀದ್ ಸನದಿ ಉಪಸ್ಥಿತರಿದ್ದರು.
ಮಾನವ ಹಕ್ಕುಗಳ ಆಯೋಗ ಸಂಘಟನೆಯ ಜಿಲ್ಲಾ ನಿರ್ದೇಶಕರಾದ ಶ್ರೀಕಾಂತ ಆಸೋದೆ ನಿರೂಪಿಸಿ, ಸ್ವಾಗತಿಸಿದರು. ಮಾನವ ಹಕ್ಕುಗಳ ಆಯೋಗ ಸಂಘಟನೆಯ ರಾಜ್ಯ ಸಹಾಯಕ ನಿರ್ದೇಶಕರಾದ ರವಿ ಸುತಾರ್ ವಂದಿಸಿದರು.