ಹೊನ್ನಾವರ: ತಾಲೂಕಿನ ಸಾಲ್ಕೋಡ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ನಡೆದ ಜೆಜೆಎಮ್ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ವಿನಾಯಕ ಆಚಾರಿ ಆರೋಪಿಸಿದರು.
ಅವರು ಪಟ್ಟಣದ ಖಾಸಗಿ ಹೊಟೇಲ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಾಲ್ಕೋಡ ಭಾಗದಲ್ಲಿ ಜೆಜೆಎಮ್ ಕಾಮಗಾರಿ ಅಪೂರ್ಣಗೊಳಿಸಿ ಬಿಲ್ ಮಾಡಿರುವ ಬಗ್ಗೆ ಸ್ಥಳೀಯರಿಂದ ಸಂಘಟನೆಗೆ ದೂರು ಬಂದಿತ್ತು. ಈ ಬಗ್ಗೆ ನಾವು ಜೆಜೆಎಮ್ ಆ್ಯಪ್ ನಲ್ಲಿ ಹೆಚ್ಚಿನ ಮಾಹಿತಿ ಕಲೆಹಾಕಿದಾಗ ಗೊಲ್ ಮಾಲ್ ನಡೆದಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದರೆ ಅಲ್ಲಿ ಕೆಲವನ್ನು ಪೂರ್ಣಗೊಳಿಸದೆ ಬಿಲ್ ಪಾವತಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಈ ಬಗ್ಗೆ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ, ಎಡಿಜಿಪಿಯವರಿಗೆ, ಮುಖ್ಯಮಂತ್ರಿಯವರಿಗೆ, ಲೋಕಾಯುಕ್ತಕ್ಕೆ ಮನವಿ ನೀಡುತ್ತೇವೆ ಎಂದರು. ಇದರಲ್ಲಿ ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳು ಶಾಮೀಲಾಗಿದ್ದಾರೆ. ಸಾಲ್ಕೋಡ ಗ್ರಾಮ ಪಂಚಾಯತ್ ಸದಸ್ಯರೊಬ್ಬರಿಗೆ ಈ ಬಗ್ಗೆ ಕರೆ ಮಾಡಿದಾಗ ಇದರಲ್ಲಿ ಏನು ಅವ್ಯವಹಾರ ಆಗಿಲ್ಲ ಎಂದು ಸಬೂಬು ಹೇಳಿದ್ದಾರೆ ಎಂದರು.
ಸಂಘಟನೆಯ ಜಿಲ್ಲಾ ವಕ್ತಾರ ಶ್ರೀರಾಮ ಹೊನ್ನಾವರ ಮಾತನಾಡಿ, ಜೆಜೆಎಮ್ ಕಾಮಗಾರಿ ಮುಗಿದಿದ್ದಲ್ಲಿ ಎಲ್ಲೆಲ್ಲಿ ಟ್ಯಾಪ್ ಕುಳ್ಳಿಸಿದ್ದಾರೆ ಎನ್ನುವುದನ್ನು ಗುತ್ತಿಗೆಪಡೆದ ಕಂಪನಿಯವರು ಬಹಿರಂಗಪಡಿಸಬೇಕು. ಸುಳ್ಳು ದಾಖಲೆ ಸೃಷ್ಠಿಸಿ ಕಾಮಗಾರಿ ನಡೆಸಿದ್ದಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ದಾಖಲೆ ಸಮೇತ ಬಹಿರಂಗಪಡಿಸಿ ಜಿಲ್ಲಾದ್ಯಂತ ಹೋರಾಟ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕಾ ಉಪಾಧ್ಯಕ್ಷ ಸಂದೇಶ ನಾಯ್ಕ, ಸಾಮಾಜಿಕ ಜಾಲತಾಣದ ಶ್ರೀನಿವಾಸ ನಾಯ್ಕ,ನಿತೀಶ ನಾಯ್ಕ, ಆಕಾಶ ಮಡಿವಾಳ,ರೋಹಿತ್ ಹಳ್ಳೇರ,ಭಾಸ್ಕರ ಹಳ್ಳೇರ ಉಪಸ್ಥಿತರಿದ್ದರು.