ಸಿದ್ದಾಪುರ: ತಾಲೂಕಿನ ಹಾಳದಕಟ್ಟಾ ನಾಗರಕಟ್ಟಾ ವಿಭಾಗದ ಶ್ರೀ ಕ್ಷೇತ್ರಪಾಲ, ಶ್ರೀ ನಾಗದೇವತಾ ಹಾಗೂ ಶ್ರೀ ಚೌಡೇಶ್ವರಿ ದೇವರ 15ನೇಯ ವಾರ್ಷಿಕ ವರ್ಧಂತಿ ಉತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸಾಯಂಕಾಲ ಸುಬ್ರಹ್ಮಣ್ಯ ಷಷ್ಠಿ ನಿಮಿತ್ತ ಕಾರ್ತಿಕ ದೀಪೋತ್ಸವ ಕಾರ್ಯಕ್ರಮಗಳು ಅತಿ ವಿಜೃಂಭಣೆಯಿಂದ ಸಂಪನ್ನಗೊಂಡಿತು.
ಗಣಹೋಮ ಪೂಜಾ ಕಾರ್ಯಕ್ರಮವನ್ನು ಶ್ರೀಮತಿ ರಾಧಾ, ವಾಸುದೇವ್ ಎಸ್.ರಾಯ್ಕರ್ ದಂಪತಿಗಳು ನೆರವೇರಿಸಿದರು. ಶ್ರೀ ಸತ್ಯನಾರಾಯಣ ವ್ರತ ಪೂಜಾ ಕಾರ್ಯಕ್ರಮವನ್ನು ಶ್ರೀಮತಿ ಅನುಷಾ, ಕಿರಣ್ ಗೋಖಲೆ ದಂಪತಿಗಳು ನೆರವೇರಿಸಿದರು.ನಂತರ ಉಡಿಸೇವೆ,ಮಹಾಮಂಗಳಾರತಿ ಪ್ರಸಾದ,ಅನ್ನ ಸಂತರ್ಪಣೆ ಜರುಗಿತು.ಸಾಯಂಕಾಲ ಸುಬ್ರಹ್ಮಣ್ಯ ಷಷ್ಠಿ ನಿಮಿತ್ತ ಕಾರ್ತಿಕ ದೀಪೋತ್ಸವಕ್ಕೆ ವಾಸುಕಿ ನಾಗದೇವತಾ ಮಂಡಳಿಯಿಂದ ಚಾಲನೆ, ನಂತರ ಲಲಿತ ಸಹಸ್ರನಾಮ ಪಠಣ,ಭಜನೆ,ದೇವರಿಗೆ ಅರ್ಪಿಸಿದ ಶಾಲು,ಸೀರೆಯ ಹರಾಜು,ಅಷ್ಟಾವಧಾನ ಸೇವೆ ನಡೆಯಿತು.ಈ ಸಂದರ್ಭದಲ್ಲಿ ಭರತನಾಟ್ಯ ಸೇವೆ ಸಲ್ಲಿಸಿದ ಶಿರಸಿಯ ಕುಮಾರಿ ಪೂಜಾ ನಾಯಕ ಇವರನ್ನು ಹಾಗೂ ಧಾರ್ಮಿಕ ಕಾರ್ಯಕ್ರಮವನ್ನು ನೆರವೇರಿಸಿದ ವೇದಮೂರ್ತಿ ಮೋಹನಕುಮಾರ ಜೈನ ಬಿದರೂರು ಕಾರ್ಗಲ್, ವೇದಮೂರ್ತಿ ದಿನೇಶ ಭಟ್ಟ ಬೇಡ್ಕಣಿ,ಪದ್ಮರಾಜ ಜೈನ ಕಾರ್ಗಲ, ವೇದಮೂರ್ತಿ ದಿನೇಶ ಭಟ್ಟ ಕೊನಳ್ಳಿ ಹಾಗೂ ವೇದಮೂರ್ತಿ ಗೋಪಾಲ ಹೆಗಡೆ ಖಂಡಿಕಾ ರವರನ್ನು ನಾಗದೇವತಾ ಮಂಡಳಿಯಿಂದ ಸನ್ಮಾನಿಸಲಾಯಿತು. ಮೋಹನ ಕುಮಾರ ಜೈನ ಶ್ರೀವಾಸುಕಿ ನಾಗದೇವತಾ ಮಹಿಮೆಯನ್ನು ವಿವರಿಸುತ್ತ, ಈ ದೇವಾಲಯ ಮುಂದಿನ ದಿನದಲ್ಲಿ ದೊಡ್ಡ ಕ್ಷೇತ್ರ ವಾಗಲಿದೆ ಎಂದರು.ನಂತರ ಮಹಾಮಂಗಳಾರತಿ ಪ್ರಸಾದ ವಿತರಣೆ ನಡೆಯಿತು.