ದಾಂಡೇಲಿ : ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಜನಸಾಮಾನ್ಯರನ್ನು ಬಾಧಿಸುವ ದಿನನಿತ್ಯದ ಹಾಗೂ ದೀರ್ಘಾವಧಿಯ ಹಲವಾರು ಸಮಸ್ಯೆಗಳ ಪರಿಹಾರಕ್ಕಾಗಿ, ಮಾನವ ಸಂಪನ್ಮೂಲ, ನೆಲ, ಜಲ, ಅರಣ್ಯ ನೈಸರ್ಗಿಕ ಸಂಪತ್ತು ಬಳಸಿಕೊಂಡು, ಪ್ರತಿಯೊಬ್ಬರಿಗೂ ಮನೆ,ಪ್ರತಿಮನೆಗೂ ನೀರು, ಬೆಳಕು, ಆಹಾರ, ಆರೋಗ್ಯ, ಶಿಕ್ಷಣ ತಲುಪಲು, ಪರಿಸರ ಪೂರಕವಾಗಿ ಉದ್ಯೋಗಾವಕಾಶ ಮತ್ತು ಪ್ರವಾಸೋದ್ಯಮ ವ್ಯವಸ್ಥಿತವಾಗಿ ನಿರ್ವಹಿಸಲು, ಮಹಿಳೆಯರು. ಆದಿವಾಸಿಗಳು ಹಾಗೂ ಅಲ್ಪಸಂಖ್ಯಾತರನ್ನು ಒಳಗೊಳಿಸುವ ಮೂಲಕ ಉತ್ತರ ಕನ್ನಡ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಯಲ್ಲಿಟ್ಟುಕೊಂಡು ಬೆಳಗಾವಿ ಅಧಿವೇಶದಲ್ಲಿ ವಿಶೇಷ ಅನುದಾನ ಘೋಷಣೆ ಮಾಡಬೇಕೆಂದು ಉ.ಕ.ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ನಾವು ನೀವು ಸಮಿತಿಯ ಅಧ್ಯಕ್ಷೆ ಯಮುನಾ ಗಾಂವಕರ ಸರಕಾರವನ್ನು ಆಗ್ರಹಿಸಿದ್ದಾರೆ.
“ಉತ್ತರ ಕನ್ನಡ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ನಾವು ನೀವು” ಸಮಾವೇಶದಲ್ಲಿ ಅಂಗೀಕರಿಸಿದ ಜನತೆಯ ಪರ್ಯಾಯ ಕಣ್ಣೋಟದ ಎಲ್ಲ ಹಕ್ಕೊತ್ತಾಯಗಳನ್ನು ಈಡೇರಿಸಲು ಸರ್ಕಾರ ಮುಂದಾಗಬೇಕು. ಜಿಲ್ಲೆಯ ಅನುಕೂಲಸ್ಥ ಸ್ಥಳದಲ್ಲಿ ರಾಜ್ಯ ಸರ್ಕಾರದ ಬಹುಸುಸಜ್ಜಿತ ಆಸ್ಪತ್ರೆ ನಿರ್ಮಿಸಬೇಕು ಹಾಗೂ ಕೇಂದ್ರ ಸರ್ಕಾರದಿಂದ ಇಎಸ್‌ಬಿಸಿ ಉನ್ನತ ಆಸ್ಪತ್ರೆ ಮತ್ತು ಆಯ್ದ ಪ್ರದೇಶದಲ್ಲಿ ಇರುವ ಡಿಸ್ಪೆನ್ಸರಿಗಳನ್ನು ಗುಣಮಟ್ಟದ ಆಸ್ಪತ್ರೆಗಳಾಗಿಸುವುದು. ಜಿಲ್ಲೆಯ ಅಭಿವೃದ್ಧಿಗೆ ಕೊಡುಗೆ ದಾಖಲಿಸಿದ ಅರಣ್ಯವಾಸಿಗಳ ಬೇಡಿಕೆ ಈಡೇರಿಸಬೇಕಿದೆ. ಅನುಸೂಚಿತ ಬುಡಕಟ್ಟುಗಳ ಮತ್ತು ಇತರ ಪಾರಂಪರಿಕ ಅರಣ್ಯವಾಸಿಗಳ (ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡುವ) ಅಧಿನಿಯಮ, 2006 (ಮತ್ತು ನಿಯಮ 2008 ತಿದ್ದುಪಡಿ 2012 ರಲ್ಲಿ ಮುಂದುವರಿದ ದೋಷ) ರ ಕಲಂ 2 (ಒ) ಕ್ಕೆ ತಿದ್ದುಪಡಿ ತಂದು ‘ಮೂರು ತಲೆಮಾರು’ ಎಂಬ ಶಬ್ದ ತೆಗೆಯಬೇಕು. ಅರಣ್ಯ ಇಲಾಖೆಯ ಮುಖ್ಯ ಜವಾಬ್ದಾರಿ ಒಕ್ಕೂಟ ಸರ್ಕಾರದ ಕೈಲಿರುವುದರಿಂದ ರೈತರಿಗೆ ಭೂಮಿಯನ್ನು ಹಂಚಲು ಕೇಂದ್ರ ಸರ್ಕಾರವು ಅನುಮತಿ ನೀಡಬೇಕು. ಜೀವನೋಪಾಯಕ್ಕಾಗಿ ಮಾಡಿದ ಯಾವುದೇ ಅರಣ್ಯಭೂಮಿ ಸಾಗುವಳಿದಾರರಿಗೆ ಕಿರುಕುಳ, ತೊಂದರೆ ಕೊಟ್ಟು ಜಬರದಸ್ತಿಯಿಂದ ದೌರ್ಜನ್ಯದಿಂದ ಒಕ್ಕಲೆಬ್ಬಿಸಿ ಅತಂತ್ರ ಮಾಡಬಾರದು. ಎಲ್ಲರಿಗೂ ಭೂಮಿಯ ಹಕ್ಕು ನೀಡಬೇಕು. ತಕ್ಷಣದಲ್ಲಿ ಉಳವಿ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಬೇಕು, ವಚನ ಅಧ್ಯಯನ ಕೇಂದ್ರ ನಿರ್ಮಿಸಿ, ಜೋಯಿಡಾ-ದಾಂಡೇಲಿಗೆ ಮೂಲಸೌಕರ್ಯಕ್ಕಾಗಿ ಹಣಕಾಸು ಬಿಡುಗಡೆಯಾಗಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಸಂಘಟನಾ ಕಾರ್ಯದರ್ಶಿ ಡಿ.ಸ್ಯಾಮಸನ್ ಅವರು ಉಪಸ್ಥಿತರಿದ್ದರು.