ಶಿರಸಿ: ವಿಶ್ವಶಾಂತಿ ಸರಣಿಯ ಯಕ್ಷ ರೂಪಕಗಳ ದಶಮಾನೋತ್ಸವದ ಹಿನ್ನೆಲೆಯಲ್ಲಿ ಲೋಕಾರ್ಪಣೆ ಕಂಡ ‘ವಿಶ್ವಾಭಿಗಮನಮ್’ ಯಕ್ಷ ರೂಪಕವು ಭಾವದಲೆಯಲ್ಲಿಯಲ್ಲಿ ತೇಲಿಸಿ ಪ್ರೇಕ್ಷಕರಲ್ಲಿ ಕಣ್ಣೀರ ಹನಿ ಹಾಕಿಸಿತು.
ಕಬ್ಬಿನಾಲೆ ವಸಂತ ಭಾರದ್ವಾಜ ಅವರು ರಚಿಸಿದ ಸಾಹಿತ್ಯದ ಈ ರೂಪಕ ಕೃಷ್ಣನ ಬಾಲ ಲೀಲೆಗಳು, ಮಾತೆ ಯಶೋದೆಯ ತುಮುಲ, ಆಕೆ ಮಗನಲ್ಲಿ ಕಂಡ ವಿಶ್ವ ರೂಪ ದರ್ಶನ, ತಾಯಿ ಭಗವಂತನಲ್ಲಿ ಬೇಡಿಕೊಂಡ ಪರಿ, ವೃಂದಾವನ, ರಾಧೆ, ಪ್ರೇಮ, ವಿರಹ, ವಿಶ್ವದ ಅಭಿಗಮನವಾಗಿ ಹೊರಟ ಕೃಷ್ಣನ ಸುತ್ತ ತೆರೆದುಕೊಳ್ಳುತ್ತ ಪ್ರೇಕ್ಷಕರ ಮನದಲ್ಲಿ ಹಿಡಿದಿಟ್ಟುಕೊಂಡಿತು.
ಪ್ರಸಿದ್ಧ ಭಾಗವತ ಕೇಶವ ಹೆಗಡೆ ಕೊಳಗಿ ಧ್ವನಿಯಲ್ಲಿ ಅರಳಿದ ಈ ರೂಪಕಕ್ಕೆ ಹಿಮ್ಮೇಳದ ಮದ್ದಲೆಯಲ್ಲಿ ಶಂಕರ ಭಾಗವತ, ಚಂಡೆಯಲ್ಲಿ ವಿಘ್ನೇಶ್ವರ ಗೌಡ ಕೆಸ್ರಕೊಪ್ಪ ಸಹಕಾರ ನೀಡಿದರು. ಪ್ರಸಾದನದಲ್ಲಿ ಸಂಜಯಕುಮಾರ ಬಿಳಿಯೂರ ನೆರವಾದರು.
ಈ ರೂಪಕವನ್ನು ವಿ.ಉಮಾಕಾಂತ ಭಟ್ಟ ನಿರ್ದೇಶಿಸಿದ್ದರು. ಹಿನ್ನೆಲೆ ಧ್ವನಿಯನ್ನು ಶ್ರೀಪಾದ ಭಟ್ಟ ಒದಗಿಸಿದ್ದರು. ಮೂಲ ಕಲ್ಪನೆಯನ್ನು ರಮೇಶ ಹಳೆಕಾನಗೋಡ ಹಾಗೂ ಗಾಯತ್ರಿ ರಾಘವೇಂದ್ರ ನೀಡಿದರೆ, ನೃತ್ಯ ಸಲಹೆ ಕಲಗದ್ದೆ ವಿನಾಯಕ ಹೆಗಡೆ, ತಾಳಾಭ್ಯಾಸ ಎಸ್.ಜಿ.ಭಟ್ಟ ಒದಗಿಸಿದ್ದರೆ ಗಾಯತ್ರಿ ರಾಘವೇಂದ್ರ ನಿರ್ವಹಿಸಿದರು. ಉದಯ ಪೂಜಾರಿ ಧ್ವನಿ ಗ್ರಹಣ ನೀಡಿದ್ದರು.
ರವಿಗೀತೆ!: ಇದಕ್ಕೂ ಮುನ್ನ ನಡೆದ ಪ್ರಸಿದ್ಧ ಗಾಯಕ, ಬಿಗ್ಭಾಸ ಖ್ಯಾತಿಯ ರವಿ ಮುರೂರು ಪ್ರೀತಿ ಪ್ರೇಮ ವಿರಹ ಗೀತೆ ಹಾಡುವ ಮೂಲಕ ಭಾವ ಲೋಕದಲ್ಲಿ ಸಂಚಲನ ಸೃಷ್ಟಿಸಿದರು. ಲೋಕದ ಕಣ್ಣಿಗೆ ರಾಧೆ…., ಮಾತು ಕೊಟ್ಟ ರಾಧೆಗೆ ಪ್ರೀತಿ ಕೊಟ್ಟ …. ಸೇರಿದಂತೆ ಹತ್ತಾರು ಹಾಡುಗಳನ್ನುಬಒಂದು ಗಂಟೆಗೂ ಅಧಿಕ ಕಾಲ ಹಾಡಿದರು. ಗಣೇಶ ಗುಂಡ್ಕಲ್, ಸತೀಶ ಹೆಗ್ಗಾರ ಹಾರ್ಮೋನಿಯಂ ಸಹಕಾರ ನೀಡಿದ್ದರು.
ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರ ನೀಡಿತ್ತು
ತುಳಸಿಯ ನೃತ್ಯ, ಅಭಿನಯ ನೋಡಿದರೆ ಮಾತೇ ಬರುತ್ತಿಲ್ಲ. ಅಪರೂಪದ ಅನುಭವ ಕಟ್ಟಿಕೊಟ್ಟಿತು. ರೂಪಕವು ಕಣ್ಣಂಚು ಒದ್ದೆಯಾಗಿಸಿತು.
- ಪೂಜಾ ಗಾಂಧಿ, ಪ್ರಸಿದ್ಧ ಚಲನಚಿತ್ರ ತಾರೆ
ಶರೀರ ಹಾಗೂ ಮಾನಸಿಕ ಸ್ಥಿತಿ ಎರಡೂ ಮಿಳಿತವಾದರೆ ಮಾತ್ರ ನರ್ತನದ ಸೊಗಸು. ಈ ಪ್ರತಿಭೆ ಅಚ್ಚರಿ ಮೂಡಿಸಿದೆ.
-ನಾಗತಿಹಳ್ಳಿ ಚಂದ್ರಶೇಖರ್, ಪ್ರಸಿದ್ಧ ನಿರ್ದೇಶಕರು, ಸಾಹಿತಿಗಳು
ಶಿಲ್ಪ, ಚಿತ್ರ, ನೃತ್ಯ, ಗೀತ, ಸಾಹಿತ್ಯ ಹೀಗೆ ಎಲ್ಲ ಪ್ರಾಚೀನ ಭಾರತೀಯ ಶಾಸ್ತ್ರ ಪರಂಪರೆಗಳು ಒಂದಕ್ಕೊಂದು ಬೆಸೆದುಕೊಂಡಿವೆ. ಈ ಎಲ್ಲವನ್ನೂ ಒಳಗೊಂಡ ಅಪರೂಪದ ಕಲೆ ಯಕ್ಷಗಾನ. ಆಹಾರ್ಯ, ಆಂಗೀಕ, ವಾಚಕ, ಸಾತ್ವಿಕ ಹೀಗೆ ನಾಲ್ಕು ಅಭಿನಯ ಮೇಳೈಸಿದ ಅಪೂರ್ವ ಕಲಾಪ್ರಕಾರ ಯಕ್ಷಗಾನದಲ್ಲಿ ಸಾತ್ವಿಕ ಅಭಿನಯ ಕ್ಲೀಷ್ಟ. ಆದರೆ ಕಲಾವಿದೆ ತುಳಸಿ ಇದನ್ನು ಪ್ರಬುದ್ಧವಾಗಿ ಅಭಿನಯಿಸಿದ್ದಾಳೆ. ಕವಿಯ ನಿರೀಕ್ಷೆಯೂ ಮೀರಿ ಮೂಡಿ ಬಂದಿದೆ
- ಡಾ.ಕಬ್ಬಿನಾಲೆ ವಸಂತ ಭಾರದ್ವಾಜ, ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ, ರೂಪಕದ ಕವಿ