ನಮ್ಮನೆ ಹಬ್ಬ ಉದ್ಘಾಟನೆ, ಕೆಲೆಂಡರ್ ಬಿಡುಗಡೆ: ‘ವಿಶ್ವಾಭಿಗಮನಮ್’ ರೂಪಕ ಲೋಕಾರ್ಪಣೆ
ಶಿರಸಿ:
ಮನುಷ್ಯ ಸಂಘ ಜೀವಿ. ಜೀವನದ ಪ್ರತಿ ಹಂತದಲ್ಲೂ ಸಂಘ, ಸಂಘಟನೆಯ ಜೊತೆ ಜೊತೆಗೆ ಬೆಳೆಯುತ್ತಾ ಹೋಗುತ್ತಾನೆ. ಇಂತಹ ಸ್ವಭಾವ ಇರುವ ಮನುಷ್ಯನ ಮೊದಲ ಸಂಘಟನೆ ಎಂದರೆ ನಮ್ಮ ಮನೆ, ಊರು, ರಾಜ್ಯ, ದೇಶ, ಭಾಷೆ, ಧರ್ಮ, ವಿಶ್ವಮಾನವತೆ. ನಮ್ಮ ಮನೆ, ಭಾಷೆ, ಸಂಸ್ಕೃತಿ. ದೇಶಪ್ರೇಮ ವಿಶ್ವಶಾಂತಿಗೆ ವಿರುದ್ಧವಲ್ಲ, ಇವು ವಿಶ್ವ ಶಾಂತಿಗೆ ಪೂರಕವಾಗಿದೆ ಎಂದು ಪ್ರಸಿದ್ಧ ಚಲನಚಿತ್ರ ತಾರೆ ಪೂಜಾ ಗಾಂಧಿ ಎಂದು ಬಣ್ಣಿಸಿದರು.
ಭಾನುವಾರ ರಾತ್ರಿ ಬೆಟ್ಟ ಗುಡ್ಡಗಳ ನಡುವಿನ ಹಳ್ಳಿ ಬೆಟ್ಟಕೊಪ್ಪದಲ್ಲಿ ವಿಶ್ವ ಶಾಂತಿ ಸೇವಾ ಟ್ರಸ್ಟ್ ಕರ್ನಾಟಕ ಆಯೋಜಿಸಿದ್ದ ೧೩ನೇ ‘ನಮ್ಮನೆ ಹಬ್ಬ’ ಉದ್ಘಾಟಿಸಿ, ಕ್ಯಾಲೆಂಡರ್ ಬಿಡುಗಡೆಗೊಳಿಸಿ ವಿಶ್ವಶಾಂತಿ ಸರಣಿಯ ನೂತನ ಯಕ್ಷರೂಪಕ ‘ವಿಶ್ವಾಭಿಗಮನಮ್’ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಉಳಿದ ಭಾಷೆಗಿಂತ ಕನ್ನಡವೇ ಮೇಲು. ಕನ್ನಡತನ, ಸಂಸ್ಕೃತಿ ಎಂದೂ ನಾವು ಬಿಡಬಾರದು. ನಾನು ಹುಟ್ಟಿದ್ದು ಉತ್ತರ ಪ್ರದೇಶದಲ್ಲಾದರೂ ಕನ್ನಡದ ಮೇಲೆ ತುಂಬಾ ಪ್ರೀತಿಯಿದೆ ಎಂದರು.
ಕರ್ನಾಟಕ ಎಂದರೆ ಕಿಚ್ಚು ಮತ್ತು ಶೌರ್ಯ. ಬನವಾಸಿ ಪುಣ್ಯ ಭೂಮಿಯಿಂದ ಕನ್ನಡವನ್ನು ಮೊದಲ ಬಾರಿಗೆ ಆಡಳಿತ ಭಾಷೆಯನ್ನಾಗಿ ಮಾಡಲಾಯಿತು. ಕದಂಬರು, ಚಾಲುಕ್ಯರು ದೊಡ್ಡ ಸಾಮ್ರಾಜ್ಯ ಕಟ್ಟಿದರು. ಹನ್ನೆರಡನೇ ಶತಮಾನದಲ್ಲಿ ಶರಣ ಸಂಸ್ಕೃತಿ, ಅನ್ನದಾಸೋಹ, ಅಕ್ಷರ ದಾಸೋಹ, ಅರಿವೆ ಗುರು, ಅನುಭವ ಮಂಟಪ, ಮಹಿಳಾ ಸಮಾನತೆ, ಕಾಯಕವೇ ಕೈಲಾಸ ನಮ್ಮ ನಾಡಿನ ಇತಿಹಾಸ. ಹಾಗೇ ಮೈಸೂರು ರಾಜರು ಹಾಗೂ ವಿಶ್ವೇಶ್ವರಯ್ಯನವರ ದೂರದೃಷ್ಟಿ, ಕುವೆಂಪು ಅವರ ವಿಶ್ವಮಾನವತೆ ಸಂದೇಶ ಜತೆಗೆ ನೂರಾರು ಮಠಗಳ ಕೊಡುಗೆ ಅನನ್ಯ. ಕನ್ನಡ ನಾಡಿನ ಇಂತಹ ಶ್ರೀಮಂತ ಸಂಸ್ಕೃತಿ, ಪರಂಪರೆ, ಇತಿಹಾಸದ ಬಗ್ಗೆ ಗೌರವ, ಅಭಿಮಾನ ಆಪ್ತವಾಗಿ ಇಟ್ಟುಕೊಳ್ಳಬೇಕು ಎಂದರು.
ಸಾಧಕರಿಬ್ಬರಿಗೆ ನಮ್ಮನೆ ಪ್ರಶಸ್ತಿ ಹಾಗೂ ಯುವ ಗಾಯಕಿಗೆ ನಮ್ಮನೆ ಪುರಸ್ಕಾರ ಪ್ರದಾನ ಮಾಡಿದ ಪ್ರಸಿದ್ಧ ನಿರ್ದೇಶಕ, ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ ಮಾತನಾಡಿ, ಹಳ್ಳಿಯಲ್ಲಿ ಕೃಷಿ ಸೇರಿದಂತೆ ಸಾಕಷ್ಟು ಕ್ಷೇತ್ರದಲ್ಲಿ ಸಮಸ್ಯೆಗಳಿದೆ. ಹಳ್ಳಿಯ ಯುವಕರು ದೇಶ, ವಿದೇಶಗಳಿಗೆ ವಲಸೆ ಹೋಗುತ್ತಿದ್ದು ವೃದ್ಧಾಶ್ರಮಗಳಾಗುತ್ತಿವೆ. ನಾವು ಜಗತ್ತನ್ನು ಸುತ್ತಬೇಕು. ಅಲ್ಲಿನ ಉತ್ಕೃಷ್ಟತೆಯನ್ನು ಗ್ರಹಿಸಿ ನಮ್ಮ ಬೇರಿಗೆ ನೀಡಬೇಕು. ಆದರೆ ಇಲ್ಲಿಂದ ಹೋದವರು ನಮ್ಮ ಮೂಲ ಬೇರನ್ನು ಮರೆಯಬಾರದು. ಮನುಷ್ಯನ ಬದುಕು ರೆಕ್ಕೆ ಬೇರುಗಳ ಸಮನ್ವಯ ಆಗಬೇಕು. ಹಳ್ಳಿಗಳು ಸಾಂಸ್ಕೃತಿಕ ಕೇಂದ್ರಗಳಾಗಬೇಕು. ಹಳ್ಳಿಗರು ಆಶಾವಾದಿಗಳಾಗಬೇಕು ಎಂದರು.
ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ ಮಾತನಾಡಿ, ವಿಜ್ಞಾನದಲ್ಲಿ ಕೃತಕ ಬುದ್ಧಿಮತ್ತೆ ಮೆರೆಯುತ್ತಿರುವ ಕಾಲವಿದು. ಯಕ್ಷಗಾನವನ್ನು ಈ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅದ್ಭುತವಾಗಿ ಪ್ರಸ್ತುಪಡಿಸಬಹುದು. ಆದರೆ ಬೌದ್ಧಿಕ, ಜಾಣ್ಮೆ ಮೈಗೂಡಿಸಿಕೊಳ್ಳುವ ಈ ಪ್ರಭೆಯಿಂದ ಸಾತ್ವಿಕ ಅಭಿನಯ ಸಾಧ್ಯವಿಲ್ಲ ಎಂದರು.
ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಮಾತನಾಡಿ, ವಿಶ್ವದಲ್ಲಿ ಮನೆ ಮನಗಳಲ್ಲಿ ಅಶಾಂತಿ ನೆಲೆಸಿದೆ. ನಮಗೆ ಶಾಂತಿ ಬೇಕಾಗಿದ್ದು ಅರಸುತ್ತಿದ್ದೇವೆ. ಶಾಂತಿಯ ಉಪಾಯ ಅನ್ವೇಷಣೆ ಮಾಡುತ್ತಿದ್ದೇವೆ. ಶಾಂತಿಗೆ ಮನಸ್ಸನ್ನು ಕಟ್ಟುವ ಕೆಲಸ ಮಾಡಬೇಕು ಎಂದರು.
ನಮ್ಮನೆ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ಚಲನಚಿತ್ರ ಕಲಾವಿದ ನೀರ್ನಳ್ಳಿ ರಾಮಕೃಷ್ಣ ಮಾತನಾಡಿ, ಜಗತ್ತಿನ ವಿಧೆಡೆ ಭಾರತೀಯರ ಮೇಲೆ ದಾಳಿ ನಡೆಯುತ್ತಿದೆ. ಆದರೆ ನಾಡಿನ ಬೆಟ್ಟಕೊಪ್ಪದಂತಹ ಹಳ್ಳಿಯಿಂದ ವಿಶ್ವಶಾಂತಿಯ ಪ್ರಸಾರ ಮಾಡುತ್ತಿದ್ದೇವೆ. ನಾಡು, ದೇಶದ ಸಮೃದ್ಧಿಯಾಗಲಿ, ಶಾಂತಿ, ನೆಮ್ಮದಿಯಿಂದ ಜನ ಬದುಕುವಂತಾಗಲಿ ಎಂದರು.
ಪ್ರಶಸ್ತಿ ಪುರಸ್ಕೃತ ಅವಿನಾಶಿ ಸಂಸ್ಥೆ ಸ್ಥಾಪಕ ಅಣ್ಣಾರಾಯ ತಳವಾರ, ನಮ್ಮನೆ ಹಬ್ಬ ನಾಡು, ರಾಷ್ಟ್ರಮಟ್ಟದಲ್ಲಿ ಇನ್ನಷ್ಟು ಬೆಳಗಲಿ ಎಂದರು.
ಯುವ ಪುರಸ್ಕಾರಕ್ಕೆ ಭಜನರಾದ ಯುವ ಗಾಯಕಿ ಐಶ್ವರ್ಯ ದೇಸಾಯಿ ಧಾರವಾಡ ಮಾತನಾಡಿದರು.
ವಿಶ್ವಶಾಂತಿ ಸೇವಾ ಟ್ರಸ್ಟ್ ಅಧ್ಯಕ್ಷ, ಹಿರಿಯ ಪರ್ತಕರ್ತ ರವೀಂದ್ರ ಭಟ್ಟ ಅಧ್ಯಕ್ಷತೆ ವಹಿಸಿ ನಮ್ಮನೆ ಹಬ್ಬ ಆಚರಣೆ, ಅದರ ಹಿಂದಿನ ಆಶಯ ವಿವರಿಸಿ, ಎಲ್ಲರೂ ನಮ್ಮವರು ಎಂಬ ಉದಾತ್ತ ಚಿಂತನೆಯ ಹಬ್ಬ ಎಂದರು.
ರಾಘವೇಂದ್ರ ಸಕಲಾತಿ ಪ್ರಾರ್ಥಿಸಿದರು. ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ ಸ್ವಾಗತಿಸಿದರು. ತುಳಸಿ ಹೆಗಡೆ, ವಿನಾಯಕ ಕೋಡ್ಸರ, ವಿನಯ ಹೊಸ್ತೋಟ ಸನ್ಮಾನ ಪತ್ರ ವಾಚಿಸಿದರು. ನಾರಾಯಣ ಭಾಗ್ವತ, ಕಾರ್ಯದರ್ಶಿ ಗಾಯತ್ರೀ ರಾಘವೇಂದ್ರ ನಿರೂಪಿಸಿದರು. ಉಪಾಧ್ಯಕ್ಷ ರಮೇಶ ಹಳೆಕಾನಗೋಡ ವಂದಿಸಿದರು. ಇದೇ ವೇದಿಕೆಯಲ್ಲಿ ಶಾಸಕ ಭೀಮಣ್ಣ ನಾಯ್ಕ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕೇಶವ ಹೆಗಡೆ ಕೊಳಗಿ ಅವರನ್ನು ಗ್ರಾಮಸ್ಥರ ಪರವಾಗಿ ಗೌರವಿಸಲಾಯಿತು.
ಜಿಲ್ಲೆಯ ತಲೆಮಾರಿನಲ್ಲಿ ಸಾಕಷ್ಟು ಚಳುವಳಿಗಳು ನಡೆದಿವೆ. ಚಳುವಳಿಗಳು ಆದರ್ಶಗಳು. ಈ ಆದರ್ಶಗಳಿಗೆ ಯಾವಾಗಲೂ ಸೋಲಿಲ್ಲ.
-ನಾಗತಿಹಳ್ಳಿ ಚಂದ್ರಶೇಖರ, ಪ್ರಸಿದ್ದ ನಿರ್ದೇಶಕರು
ಒಂದು ಕಾರಿನ ಕಥೆ….
ಸಮಾರಂಭದಲ್ಲಿ ಕಾರೊಂದನ್ನು ಖರೀದಿಸಿದ ಹಳೆಯ ಕಥೆಯನ್ನು ನಟ ನೀರ್ನಳ್ಳಿ ರಾಮಕೃಷ್ಣ ಬಿಚ್ಚಿಟ್ಟರು. ಪ್ಲೇ ಬಾಯ್ ಎಂಬ ಹೆಸರಿದ್ದ ನಾನು ಕನ್ನಡ ಚಲನಚಿತ್ರ ನಟರಲ್ಲೇ ಮೊದಲ ಬಾರಿಗೆ ೭೩ಸಾವಿರ ರೂ. ನೀಡಿ ಕಾರೊಂದನ್ನು ಖರೀದಿಸಿದ್ದೆ. ಅಂಬರೀಷ, ಶಂಕರನಾಗ್, ವಿಷ್ಣುವರ್ಧನ, ಜಗ್ಗೇಶ, ರವಿಚಂದ್ರನ್ ಎಲ್ಲರೂ ಇದನ್ನು ಓಡಿಸಿದ್ದಾರೆ. ಈ ಕಾರಿನಲ್ಲೇ ಈಗಲೂ ಓಡಾಡುತ್ತಿದ್ದೇನೆ. ನನ್ನ ಈ ಕಾರನ್ನು ನೋಡಿ ಶಿವರಾಜಕುಮಾರ ಸಹ ಇದೇ ತರಹದ ಕಾರನ್ನು ಆಗ ತಂದಿದ್ದರು ಎಂದರು.
ಐದು ತಾಸು ಕುಳಿತ ಶಾಸಕ…
ಶಾಸಕ ಭೀಮಣ್ಣ ನಾಯ್ಕ ಅವರು ನಮ್ಮನೆ ಹಬ್ಬ ಕಾರ್ಯಕ್ರಮದ ಆರಂಭದಿಂದ ಕೊನೆಯವರೆಗೂ ಸುಮಾರು ಐದು ತಾಸು ಕಾಲ ಕುಳಿತು ಕಾರ್ಯಕ್ರಮ ವೀಕ್ಷಿಸಿದ್ದು ವಿಶೇಷವಾಗಿತ್ತು. ಜತೆಗೆ ಕಲಾವಿದೆ ತುಳಸಿ ಒಂದು ತಾಸು ಕಾಲ ಪ್ರದರ್ಶಿಸಿದ ವಿಶ್ವಾಭಿಗಮನಮ್ ಯಕ್ಷನೃತ್ಯ ರೂಪಕ ಸಂಯೋಜಿಸಿದ ತಂಡವನ್ನು ಗೌರವಿಸಿದರು. ವಿವಿಧ ಕ್ಷೇತ್ರಗಳ ಗಣ್ಯರು, ಹಳ್ಳಿಗರು ಸೇರಿದಂತೆ ೭೦೦ಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು. ಪ್ರಸಿದ್ಧ ತಾರೆ ಪೂಜಾ ಗಾಂಧಿ ಅವರು ನೆಲದಲ್ಲಿ ಕುಳಿತು ನೂತನ ಯಕ್ಷ ರೂಪಕ ಅನುಭವಿಸಿದ್ದು ಗಮನ ಸೆಳೆಯಿತು.
ಈ ನೆಲದ ಹಾಡು, ಸಂಗೀತ, ನೃತ್ಯ. ಸಂಸ್ಕೃತಿ ಒಳಗೊಂಡ ನಮ್ಮನೆ ಹಬ್ಬ ಪ್ರತಿವರ್ಷ ಸೊಗಸಾಗಿ ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ. ನಮ್ಮನೆ ಹಬ್ಬದ ಸ್ಪೂರ್ತಿ, ಪ್ರೇರಣೆಯಿಂದ ರಾಜ್ಯದಲ್ಲಿ ಪ್ರತಿ ವಾರ ಇಂತಹ ಕಾರ್ಯಕ್ರಮ ನಡೆಯುವಂತಾಗಲಿ.
-ಪೂಜಾ ಗಾಂಧಿ, ಪ್ರಸಿದ್ಧ ನಟಿ