ದಾಂಡೇಲಿ: ಆದಾಯ ತೆರಿಗೆ ಹುಬ್ಬಳ್ಳಿ ವಲಯ ಹಾಗೂ ಅರಣ್ಯ ಇಲಾಖೆಯ ಸಂಯುಕ್ತ ಆಶ್ರಯದಡಿ ನಗರದ ಹಾರ್ನಬಿಲ್ ಸಭಾಭವನದಲ್ಲಿ ಸರಕಾರಿ ನೌಕರರಿಗಾಗಿ ಹಮ್ಮಿಕೊಂಡಿದ್ದ ಆದಾಯ ತೆರಿಗೆ, ಟಿಡಿಎಸ್ ಹಾಗೂ ಸೇವಾ ನಿಯಮಾವಳಿಗಳ ಒಂದು ದಿನದ ಕಾರ್ಯಾಗಾರವು ಶುಕ್ರವಾರ ಯಶಸ್ಬಿಯಾಗಿ ಸಂಪನ್ನಗೊಂಡಿತು.
ಕಾರ್ಯಗಾರವನ್ನು ಆದಾಯ ತೆರಿಗೆ ಇಲಾಖೆಯ ಜಂಟಿ ಆಯುಕ್ತರಾದ ರವೀಂದ್ರ ಹತ್ತಳ್ಳಿ ಉದ್ಘಾಟಿಸಿ ಮಾತನಾಡುತ್ತಾ, ಆದಾಯ ತೆರಿಗೆ ಹಾಗೂ ಜಿಎಸ್ಟಿಯ ಕುರಿತಂತೆ ಸಮಗ್ರವಾದ ಮಾಹಿತಿಯನ್ನು ಸರಕಾರಿ ಅಧಿಕಾರಿಗಳು ಅಗತ್ಯವಾಗಿ ತಿಳಿದುಕೊಂಡಿರಬೇಕು. ಆದಾಯ ತೆರಿಗೆ ಕುರಿತಂತೆ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಆದಾಯ ತೆರಿಗೆ ಇಲಾಖೆಯ ಉಪ ಆಯುಕ್ತರಾದ ಕೀರ್ತಿ ನಾಯಕ ಅವರು ಮಾತನಾಡಿ ಆದಾಯ ತೆರಿಗೆಯಲ್ಲಿ ನೇರ ಹಾಗೂ ಪರೋಕ್ಷ ಪದ್ಧತಿಗಳಿವೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ನೇರ ತೆರಿಗೆ ಸಂಗ್ರಹ ಪ್ರಮುಖ ಪಾತ್ರ ವಹಿಸುತ್ತದೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಎಲ್ಲ ವಸ್ತುಗಳ ಮೇಲೆ ಎಲ್ಲರಿಗೂ ಸಮನಾದ ತೆರಿಗೆ ವಿಧಿಸಲಾಗುತ್ತದೆ. ನೇರ ಮತ್ತು ಪರೋಕ್ಷ ತೆರಿಗೆಯಲ್ಲಿರುವ ಅಸಮತೋಲನ ಸರಿಪಡಿಸಲು ಎಲ್ಲ ಸರಕಾರಗಳ ಉದ್ದೇಶವಾಗಿದ್ದು, ಹೆಚ್ಚಿಗೆ ಆದಾಯ ಪಡೆಯುವವರು ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿಸಬೇಕು ಎಂದರು.
ಸನ್ನದು ಲೆಕ್ಕಪರಿಶೋಧಕರಾಗಿರುವ ಸುಬ್ರಹ್ಮಣ್ಯ ಗಾಂವಕರ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಸರಕಾರಿ ನೌಕರರು ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳುವ ಮುಖಾಂತರ ಆದಾಯ ತೆರಿಗೆ ಪಾವತಿಸಬೇಕು. ಸರಕಾರಿ ನೌಕರರು ಆದಾಯ ತೆರಿಗೆ ಬಗ್ಗೆ ಸಂಪೂರ್ಣ ತಿಳುವಳಿಕೆ ಹೊಂದಬೇಕು. ಕಚೇರಿ ಮುಖ್ಯಸ್ಥರು, ಲೆಕ್ಕಿಗರು, ಆದಾಯ ತೆರಿಗೆಯ ಜ್ಞಾನ ಹೊಂದಿ ಕಚೇರಿಗಳ ಸಹ ಸಿಬ್ಬಂದಿಗಳ ಆದಾಯ ತೆರಿಗೆ ಲೆಕ್ಕ ಹಾಕಬೇಕು. ಸರಕಾರಿ ಸೇವಾ ನಿಯಮಾವಳಿಗಳಲ್ಲಿ ಕಾಲಕಾಲಕ್ಕೆ ತರುವ ತಿದ್ದುಪಡಿಗಳನ್ನು ಅರ್ಥಮಾಡಿಕೊಳ್ಳಬೇಕು. ಇಲಾಖೆಗಳಲ್ಲಿ ಪರಿವೀಕ್ಷಣಾವಧಿ ಘೋಷಿಸುವಲ್ಲಿ, ಮುಂಬಡ್ತಿ, ವೇತನ ಬಡ್ತಿ ನೀಡುವಲ್ಲಿ ಸದಾ ಗೊಂದಲಗಳು ಇರುತ್ತವೆ. ಸೇವಾ ನಿಯಮಾವಳಿಗಳ ಬಗ್ಗೆ ಸಂಪೂರ್ಣ ಜ್ಞಾನ ಹೊಂದಿ ಇವು ಮರುಕಳಿಸದಂತೆ ನೋಡಿಕೊಳ್ಳಬೇಕು. ಖಜಾನೆಗೆ ಸಲ್ಲಿಸಿದ ಬಿಲ್ಲುಗಳು ಸರಿಯಿಲ್ಲ ಎಂದು ವಾಪಸ್ಸು ಇಲಾಖೆಗಳಿಗೆ ಕಳಿಸಲಾಗುತ್ತಿದೆ. ಬಿಲ್ಲು ಸರಿಯಾಗಿ ತಯಾರಿಸುವಲ್ಲಿ ಲೆಕ್ಕಿಗರು ಹಾಗೂ ವಿಷಯ ನಿರ್ವಾಹಕರು ಸರಿಯಾಗಿ ತಿಳಿದುಕೊಳ್ಳಬೇಕು. ಖಜಾನೆಯವರು ಇಲಾಖೆಯಿಂದ ಪದೇ ಪದೇ ಆಗುವ ತಪ್ಪುಗಳನ್ನು ಗುರುತಿಸಿ ಅವುಗಳ ಬಗ್ಗೆ ತಿಳುವಳಿಕೆ ನೀಡಬೇಕು ಎಂದು ಹೇಳಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ಕೆ ಶೇಟ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಈ ಕಾರ್ಯದ ಉದ್ದೇಶವನ್ನು ವಿವರಿಸಿದರು. ವಿನಾಯಕ ಸ್ವಾಗತಿಸಿ, ವಂದಿಸಿದರು.
ಕಾರ್ಯಾಗಾರದಲ್ಲಿ ದಾಂಡೇಲಿ, ಹಳಿಯಾಳ ಮತ್ತು ಜೋಯಿಡಾ ತಾಲೂಕಿನ ವಿವಿಧ ಇಲಾಖೆಗಳ ಹಣಕಾಸು ನಿರ್ವಹಣಾ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.