ಹೊನ್ನಾವರ : ಕಾಮಗಾರಿ ಬಾಕಿ ಉಳಿದಿರುವಂತೆಯೇ ವಾಹನ ಸವಾರರಿಂದ ಟೋಲ್ ಸಂಗ್ರಹಿಸಲಾಗುತ್ತಿದ್ದು, ಅದನ್ನು ತಕ್ಷಣ ನಿಲ್ಲಿಸಬೇಕು. ಈವರೆಗೆ ಮುಕ್ತಾಯವಾಗಿರುವ ಮತ್ತು ಬಾಕಿ ಉಳಿದಿರುವ ಕಾಮಗಾರಿಯನ್ನು ಭೂವಿಜ್ಞಾನ ಸಮೀಕ್ಷಾ ವರದಿ ಶಿಫಾರಿತ ಎಲ್ಲ ಮುಂಜಾಗ್ರತಾ ಸುರಕ್ಷಾ ಕ್ರಮಗಳನ್ನು ಐಆರ್‌ಬಿ ಕಂಪನಿ ಸಂಪೂರ್ಣ ಅಳವಡಿಸಬೇಕು. ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಾ.ನಾಗೇಶ ನಾಯ್ಕ ಆಗ್ರಹಿಸಿದರು.
ಅವರು ಪಟ್ಟಣದ ನಮ್ಮ ಹೊನ್ನಾವರ ಉಳಿಸಿ ಬೆಳೆಸಿ ಜನನಪರ ವೇದಿಕೆಯ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಐ.ಆರ್.ಬಿ.ಯ ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯ ಕುರಿತು ದಾಖಲೆಗಳನ್ನು ಸಂಗ್ರಹಿಸಿ ನ್ಯಾಯಾಲಯದ ಮೊರೆ ಹೋಗಲು ತೀರ್ಮಾನಿಸಿದ್ದೇವೆ. ಅವೈಜ್ಞಾನಿಕ ನಿರ್ಮಾಣದ ಪರಿಣಾಮವಾಗಿ ವಾಹನ ಅಪಘಾತ, ಭೂಕುಸಿತದಂತಹ ಘಟನೆಗಳಿಂದ ಸಂಕಷ್ಟಕ್ಕೀಡಾದ ಸಂತ್ರಸ್ತರಿಗೆ ಸೂಕ್ತಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿದರು.
ಶಿರೂರು ಗುಡ್ಡಕುಸಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಹಾಗೂ ಸಂತ್ರಸ್ಥರಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಸೆ.12ರಂದು ಹೊನ್ನಾವರದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆಗಳ ಮುಖಂಡರ ಮೇಲೆ ದಾಖಲಿಸಿರುವ ಸುಮೋಟೋ ಪ್ರಕರಣವನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಕ್ರಾಂತಿ ರಂಗದ ಜಿಲ್ಲಾಧ್ಯಕ್ಷ ಮಂಗಲದಾಸ ನಾಯ್ಕ ಮಾತನಾಡಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರು ಚುತುಷ್ಪಥ ಹೆದ್ದಾರಿಯಲ್ಲಿ ಐ.ಆರ್.ಬಿ.ಯವರು ನಡೆಸುತ್ತಿರುವ ಟೋಲ್ ಬಂದ್ ಮಾಡಿಸುತ್ತೇನೆ ಎಂದಿದ್ದರು. ಜಿಲ್ಲಾಡಳಿತ, ತಾಲೂಕಾಡಳಿತ ಜನಪ್ರತಿನಿಧಿಗಳು, ಎನ್.ಎಚ್.ಎ.ಐ. ಇವೆಲ್ಲ ಆಯ್.ಆರ್.ಬಿ.ಯನ್ನು ರಕ್ಷಿಸುತ್ತಿವೆ ಎಂದು ಆಪಾದಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಟೋಲ್ ಬಂದ್ ಮಾಡಿಸುತ್ತೇನೆ ಎಂದಿದ್ದರು. ಆದರೆ ವಿಫಲರಾಗಿದ್ದಾರೆ. ಬಂದ್ ಮಾಡಿಸಲು ತಾಕತ್ತಿಲ್ಲವೇ. ತಾಕತ್ತಿಲ್ಲದಿದ್ದರೆ ರಾಜಿನಾಮೆ ಕೊಟ್ಟು ಮನೆಗೆ ಹೋಗಲಿ ಎಂದು ನಮ್ಮ ಹೊನ್ನಾವರ ಉಳಿಸಿ ಬೆಳೆಸಿ ಜನಪರ ವೇದಿಕೆಯ ಅಧ್ಯಕ್ಷ ಜಿ.ಎನ್.ಗೌಡ ಕೊಡಾಣಿ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಡಾ.ಎಸ್.ಡಿ.ಹೆಗಡೆ, ಸಚಿನ್ ನಾಯ್ಕ, ಅನಂತ ನಾಯ್ಕ ಹೆಗ್ಗಾರ, ಮುನಾಪ್ ಶೇಖ್, ವೀರಭದ್ರ ನಾಯ್ಕ, ವಿ.ಎನ್.ನಾಯ್ಕ ಮತ್ತಿತರರು ಇದ್ದರು.