ಅಂಜಿಕೆಯಿಂದ ಜೀವನದಲ್ಲಿ ಸಾಧನೆ ಅಸಾಧ್ಯ | ಕಲಿಕಾ ಸ್ಪೂರ್ತಿ ತರಬೇತಿ ಶಿಬಿರಕ್ಕೆ ಚಾಲನೆ
ಶಿರಸಿ: ಗೆಲುವಿಗೆ ಹಿಗ್ಗಬೇಡಿ, ಸೋಲಿಗೆ ಅಂಜಬೇಡಿ. ನಾನೂ ನಾಲ್ಕು ಸಲ ಸೋತು ಐದನೇ ಸಲ ಜನ ಸೇವೆಗೆ ಪ್ರತಿನಿಧಿಯಾಗಿದ್ದೇನೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಸೋಮವಾರ ನಗರದ ಮಾರಿಕಾಂಬಾ ಪ್ರೌಢಶಾಲೆಯಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ವತಿಯಿಂದ ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲೂಕಿನ ಪ್ರತಿಭಾವಂತ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಹಮ್ಮಿಕೊಳ್ಳಲಾದ ನಾಲ್ಕು ದಿನಗಳ ಕಲಿಕಾ ಸ್ಪೂರ್ತಿ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಸೋಲಾಯಿತು ಎಂದು ಅಂಜಿದರೆ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಿಲ್ಲ. ಆದರೆ, ಸಮಯ ಹಾಳು ಮಾಡಿಕೊಂಡು ಸೋತರೆ ನಮಗೆ ನಾವೇ ಹೊಣೆ. ನಮ್ಮ ಸಮಯ ಸದ್ಭಳಕೆ ಮಾಡಿಕೊಂಡು ಸಾಧನೆ ಮಾಡಬೇಕು ಎಂದರು. ಗುಣಮಟ್ಟದ ಶಿಕ್ಷಣಕ್ಕೆ ಶಿಕ್ಷಣ ಇಲಾಖೆ ಕೆಲಸ ಮಾಡುತ್ತಿದೆ. ನಮ್ಮ ಗುರಿ ತಲುಪಲು ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ದೇಹದ ಆರೋಗ್ಯದ ಜೊತೆಗೆ ಶಿಕ್ಷಣಕ್ಕೆ ಮಹತ್ವ ನೀಡಬೇಕು ಎಂದರು.
ಡಯಟ್ ಪ್ರಾಚಾರ್ಯ ಎಂ.ಎಸ್.ಹೆಗಡೆ ಮಾತನಾಡಿ, ದಸರಾ ರಜೆಯಲ್ಲಿ ಅರ್ಧ ವಾರ್ಷಿಕ ಪರೀಕ್ಷೆ ತನಕದ ಅಭ್ಯಾಸ ಗಟ್ಟಿಗೊಳಿಸಲು ೪ ದಿನದ ತರಬೇತಿ ಕಲಿಕಾ ಸ್ಪೂರ್ತಿ ಶಿಬಿರ ಆಯೋಜಿಸಲಾಗಿದೆ ಎಂದರು.
ವೇದಿಕೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಐಐಟಿ ಸಂತೋಷ ಹೆಗಡೆ ಇದ್ದರು. ಡಿಡಿಪಿಐ ಬಸವರಾಜ ಪಿ. ಅಧ್ಯಕ್ಷತೆವಹಿಸಿದ್ದರು.
ಮಾನ್ಯ ಹೆಗಡೆ ಪ್ರಾರ್ಥಿಸಿದಳು. ಕೆ.ಎಚ್.ಶ್ರೀಧರ ವಂದಿಸಿದರು. ಡಯಟ್ ಉಪನ್ಯಾಸಕ ನಾರಾಯಣ ಭಾಗವತ್ ನಿರ್ವಹಿಸಿದರು