ಕುಮಟಾ: ತಾಲೂಕಿನ ಮಾಸೂರಿನ ಕೋಮಾರ ಜೈನ ಜಟಕ ದೇವಾಲಯದಲ್ಲಿ ಶ್ರೀ ಬೊಬ್ರುಲಿಂಗೇಶ್ವರ ಭಜನಾ ಮಂಡಳಿ ಅ.5 ರಿಂದ 7ರವರೆಗೆ 3 ದಿನಗಳ ಕಾಲ ಅಹೋರಾತ್ರಿ ಸಪ್ತಭಜನಾ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಮೊದಲ ದಿನ ಮಾಸೂರಿನ ಭಜನಾ ಮಂಡಳಿಯ ಸರ್ವ ಸದಸ್ಯರು ಹಾಗೂ ಊರಿನ ನಾಗರಿಕರು ಕೋಮಾರ ಗೋಳಿ ಜೈನ ಜಟಕ ದೇವಾಲಯದಲ್ಲಿ ಪೂಜೆ ಸಲ್ಲಿಸಿ ವಂದಿಪೆ ನಿನಗೆ ಗಣನಾಥ ಎಂಬ ಮಹಾ ಗಣಪತಿಯ ಪ್ರಥಮ ಭಜನೆ ಮೂಲಕ ಭಜನೆ ಪ್ರಾರಂಭಿಸಿ, ಸತತವಾಗಿ 3ದಿನಗಳ ಪರ್ಯಂತ ಅಹೋರಾತ್ರಿ ಭಜನೆ ಮಾಡಿ ಮೂರನೇ ದಿನ ಭಜನೆ ಮಾಡುತ್ತಾ ನಂದಾದೀಪವನ್ನು ಒಯ್ದು, ದೋಣಿಯ ಮೂಲಕ ಅಘನಾಶಿನಿ ನದಿಯನ್ನು ದಾಟಿ, ಮಾಸೂರು ಕೂರ್ವೆಯ ಬೊಬ್ರುಲಿಂಗೇಶ್ವರ ದೇವಾಲಯಕ್ಕೆ ಹೊರಟು, ಅಲ್ಲಿ ಭಜನೆ ಮಾಡುತ್ತಲೇ ಮಹಾ ಮಂಗಳಾರತಿಯ ನಂತರ ಮರಳಿ ದೋಣಿಯ ಮೂಲಕ ಮಾಸೂರಿನ ಭಂಡಾರ ದೇವತೆ ದೇವಾಲಯ ಪ್ರದಕ್ಷಿಣೆ ಮಾಡಿ, ಕೋಮಾರ ಗೋಳಿ ಜೈನ ಜಟಕ ದೇವಾಲಯಕ್ಕೆ ಬರುತ್ತಾರೆ. ಅಲ್ಲಿ ಮಹಾಪೂಜೆಯ ನಂತರ ಜಯ ಮಂಗಳ ಆರತಿ ಎತ್ತಿರೇ… ಶುಭ ಮಂಗಳ ಆರತಿ ಬೆಳಗಿರೇ ಎಂಬ ಕೊನೆಯ ಭಜನೆಯನ್ನು ಮಾಡಿ ಭಜನೆಯನ್ನು ದೇವರಿಗೆ ಒಪ್ಪಿಸುವ ವಿಶಿಷ್ಟ ಸಂಪ್ರದಾಯ ಭಕ್ತಿಯ ಪರಾಕಾಷ್ಠೆಯನ್ನೇ ತಲುಪಿತು. ಅಲ್ಲದೇ ಸಾಮೂಹಿಕ ಸತ್ಯ ನಾರಾಯಣ ಕಥೆಯನ್ನು ಮಾಡಿ ಸರ್ವರಿಗೂ ತೀರ್ಥ, ಪ್ರಸಾದ ವಿತರಣೆ ಮಾಡಲಾಯಿತು. ಮೊಬೈಲ್‌ನಲ್ಲೇ ವ್ಯರ್ಥ ಕಾಲಹರಣ ಮಾಡುವ ಇಂದಿನ ಮಕ್ಕಳಿಂದ ಹಿಡಿದು ವೃದ್ಧರಿಗೆ ಭಜನೆ ದಿನನಿತ್ಯ ಮಾಡಬೇಕು ಎಂಬ ಉತ್ತಮ ಸಂದೇಶವನ್ನು ಪ್ರತಿ ವರ್ಷ ನವರಾತ್ರಿಯ ಪರ್ವ ಕಾಲದಲ್ಲಿ ಮಾಸೂರಿನ ಶ್ರೀ ಬೊಬ್ರುಲಿಂಗೇಶ್ವರ ಭಜನಾ ಮಂಡಳಿ ಭಜನಾ ಕಾರ್ಯಕ್ರಮದ ಮೂಲಕ ಮಾಡಿ ತೋರಿಸುತ್ತಿರುವುದು ಶ್ಲಾಘನೀಯ ಎಂಬ ಮಾತು ಎಲ್ಲೆಡೆ ವ್ಯಕ್ತವಾಗುತ್ತಿದೆ.