ಶರನ್ನವರಾತ್ರಿಯಲ್ಲಿ ಹೆಚ್ಚು ಚಿಂತನೆಗೆ ಒಳಪಡುವ ದೇವೀ ಮಹಾತ್ಮೆಯು ಅನೇಕ ಆಧ್ಯಾತ್ಮ ರಹಸ್ಯಗಳನ್ನು ಒಳಗೊಂಡಿದೆ. ಗುಪ್ತವತೀ ಮೊದಲಾದಪ್ತವತೀ ಮೊದಲಾದ ವ್ಯಾಖ್ಯಾನಗಳನ್ನು ಓದಿದರೆ ಇದು ಹೆಚ್ಚು ಗಮನಕ್ಕೆ ಬರುತ್ತದೆ. ಯೋಗನಿದ್ರೆಯಿಂದ ದೇವತಾ ಶಕ್ತಿಗಳ ಆವಿರ್ಭಾವವಾದರೆ, ಭೋಗ ನಿದ್ರೆಯಿಂದ ಆಸುರೀ ಶಕ್ತಿಗಳ ಆವಿರ್ಭಾವವಾಗುತ್ತವೆ.
ನವರಾತ್ರಿಯ ಮೊದಲದಿನ ಪೂಜಿಸಲ್ಪಡುವ ದುರ್ಗೆಯ ಹೆಸರು ಯೋಗನಿದ್ರಾ. ಭಗವಂತನು ಆಷಾಢ ಶುದ್ಧ ಏಕಾದಶಿಯ ದಿವಸ ಯೋಗನಿದ್ರೆಯನ್ನು ಪ್ರವೇಶಿಸುತ್ತಾನೆ. ಕಾರ್ತಿಕ ಶುದ್ಧ ದ್ವಾದಶಿಯಂದು ಯೋಗ ನಿದ್ರೆಯಿಂದ ಹೊರ ಬರುತ್ತಾನೆ. ಇವೆರಡರ ಮಧ್ಯದಲ್ಲಿಯೇ ಶರನ್ನವರಾತ್ರಿ ಬರುತ್ತದೆ. ಆದ್ದರಿಂದಲೇ ನವದುರ್ಗೆಯರ ಪೂಜೆ ಯೋಗನಿದ್ರಾದೇವಿಯಿಂದ ಆರಂಭಗೊಳ್ಳುತ್ತದೆ. ಮೊದಲನೇ ದಿನ ಯೋಗನಿದ್ರಾ ದೇವಿಯಿಂದ ಆರಂಭಗೊಂಡರೆ ಎರಡನೇ ದಿನದಿಂದ ಕ್ರಮವಾಗಿ ದೇವಜಾತಾ, ಮಹಿಷಾಸುರ ಮರ್ದಿನೀ, ಶೈಲಜಾತಾ, ಧೂಮ್ರಹಾ, ಚಂಡಮುಂಡಹಾ, ರಕ್ತಬೀಜಹಾ, ನಿಶುಂಭಹಾ, ಮತ್ತು ಶುಂಭಹಾ ಹೀಗೆ ನವದುರ್ಗೆಯರು ಕ್ರಮವಾಗಿ ಪೂಜಿಸಲ್ಪಡುತ್ತಾರೆ. ಮುಂದೆ ಬರುವ ಎಲ್ಲಾ ದುರ್ಗೆಯರೂ ಅಸುರರನ್ನು ಸಂಹಾರ ಮಾಡಿದ ಕಥೆಯೂ ಬರುತ್ತದೆ.
ದೈವೀಶಕ್ತಿಯ ಆವಿರ್ಭಾವಾದಿಂದಲೇ ಆಸುರಿ ಶಕ್ತಿಗಳ ದಮನವಾಗುತ್ತವೆ. ಯೋಗನಿದ್ರೆಯಿಂದ ದೈವೀ ಶಕ್ತಿಗಳ ಆವಿರ್ಭಾವವಾಗುತ್ತವೆ. ಇದಕ್ಕೆ ಸಾತ್ವಿಕವಾದ ಆಹಾರ ಪೂರಕವಾಗಿರುತ್ತದೆ. ಯೋಗ ನಿದ್ರೆಯಲ್ಲಿ ಸ್ವಪ್ನಗಳಿರುವುದಿಲ್ಲ. ನಿದ್ರೆಯ ಆರಂಭದಲ್ಲಿಯೂ ಕೊನೆಯಲ್ಲಿಯೂ ಭಗವಂತನ ಸ್ಮರಣೆ ಇರುತ್ತದೆ. ನಿದ್ರೆಯ ಕಾಲದಲ್ಲಿ ಆನಂದಮಯ ಸ್ಥಿತಿ ಇರುತ್ತದೆ. ರಾತ್ರಿಯ ಮಧ್ಯಭಾಗದಲ್ಲಿ ನಿದ್ರೆಯ ಕಾಲ ಇರುವಂತೆ ನಮ್ಮ ದಿನಚರಿಯನ್ನು ಹೊಂದಿಸಿಕೊಂಡರೆ ಸಾತ್ವಿಕ ನಿದ್ರೆಗೆ ಅನುಕೂಲ. ನಿದ್ರೆಗೆ ಹೋಗುವ ಮೊದಲು ದೇವರ ಧ್ಯಾನ ಅತ್ಯಂತ ಅಗತ್ಯ.
ಇಂತಹ ನಿದ್ರೆಯಿಂದ ಎಚ್ಚೆತ್ತ ನಂತರ ದೈವೀಶಕ್ತಿಗಳು ನಮ್ಮಲ್ಲಿ ಹೆಚ್ಚು ಪ್ರಕಟಗೊಳ್ಳುತ್ತವೆ. ಭಯವಿಲ್ಲದ ಮನಸ್ಥಿತಿ- ಇನ್ನೊಬ್ಬರನ್ನು ವಂಚಿಸುವ ಪ್ರವೃತ್ತಿ-ನಾಟಕೀಯತೆ-ಸುಳ್ಳು ಹೇಳುವುದು- ಮುಂತಾದವುಗಳಿಲ್ಲದ ಶುದ್ಧಬುದ್ಧಿ, ಜ್ಞಾನ, ಏಕಾಗ್ರತೆಗಳು, ಇಂದ್ರಿಯ ನಿಗ್ರಹ, ಮನಸ್ಸಿನ ನಿಗ್ರಹ, ಪ್ರಾಣಿಗಳಲ್ಲಿ ದಯೆ, ಮೃದು ಸ್ವಭಾವ ಮುಂತಾದವುಗಳ ಬೆಳವಣಿಗೆಗಳು ಇಂತಹ ನಿದ್ರೆಯಿಂದ ಹಂತ ಹಂತವಾಗಿ ಆಗುತ್ತದೆ. ಇವೆಲ್ಲವೂ ದೈವೀ ಸಂಪತ್ತುಗಳು ಅಥವಾ ದೈವೀ ಶಕ್ತಿಗಳೇ ಆಗಿವೆ. ಆರೋಗ್ಯದ ದೃಷ್ಟಿಯಿಂದ ಸಾತ್ವಿಕ ನಿದ್ರೆ ತುಂಬಾ ಅನುಕೂಲ. ಮೇಧಾಶಕ್ತಿ (ನೆನಪಿನ ಶಕ್ತಿ) ವೃದ್ಧಿಯಾಗಲು ಯೋಗನಿದ್ರೆಯು ಪ್ರಮುಖ ಕಾರಣ.
ಇಂತಹ ದೈವೀಶಕ್ತಿಗಳು ನಮ್ಮಲ್ಲಿ ಆವಿರ್ಭಾವಗೊಂಡಾಗಲೇ ಅವುಗಳ ವಿರುದ್ಧವಾದ ಆಸುರೀ ಶಕ್ತಿಗಳು ಕಡಿಮೆಯಾಗುತ್ತವೆ. ದರ್ಪ, ಕ್ರೋಧ, ಕ್ರೂರವಾದ ಮಾತು, ಅತಿಯಾದ ಆಸೆ, ಹಿಂಸೆ, ಅತಿಯಾದ ಚಿಂತೆ, ಮುಂತಾದವುಗಳು ಆಸುರೀ ಸಂಪತ್ತುಗಳು ಅಥವಾ ಆಸುರೀ ಶಕ್ತಿಗಳು. ಎಲ್ಲಾ ಅಪರಾಧ ಪ್ರಕರಣಗಳು ಆಸುರೀ ಶಕ್ತಿಯ ಮೂಲದಿಂದಲೇ ಬರುತ್ತದೆ. ಆದ್ದರಿಂದ ಯೋಗ ನಿದ್ರೆಯ ಅಭ್ಯಾಸದ ಮೂಲಕ ದೈವಿಕತೆಯ ಕಡೆಗೆ ನಮ್ಮನ್ನು ನಾವು ಮುಂದುವರಿಸಿಕೊಳ್ಳಬೇಕು.
—ಶ್ರೀಮಜ್ಜಗದ್ಗುರು ಶಂಕರಾಚಾರ‍್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು, ಸ್ವರ್ಣವಲ್ಲೀ ಮಹಾ ಸಂಸ್ಥಾನ