ಜನರ ದೂರುಗಳನ್ನು ಆದ್ಯತೆಯ ಮೇಲೆ ಪರಿಹರಿಸಲು ಸೂಚನೆ
ಹೊನ್ನಾವರ :ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ ಮತ್ತು ಶಕ್ತಿ ಯೋಜನೆಗಳ ಅನುಷ್ಠಾನ ಯೋಜನೆಗಳ ಕುಂದು ಕೊರತೆ ಮತ್ತು ಸಮಸ್ಯೆಗಳ ಬಗ್ಗೆ ಚರ್ಚಿಸಲು ಬುಧವಾರ ತಾಲೂಕ ಪಂಚಾಯತ ಸಭಾಭವನದಲ್ಲಿ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಣ್ಣಪ್ಪ ನಾಯ್ಕ ಮಾತನಾಡಿ ಗ್ಯಾರಂಟಿ ಯೋಜನೆಗಳ ಮಹತ್ವ ಮತ್ತು ಉಪಯುಕ್ತತೆ ಕುರಿತು ಸಭೆಗೆ ವಿವರಿಸಿದರು. ಸದ್ರಿ ಯೋಜನೆಗಳ ಅನುಷ್ಠಾನದಲ್ಲಿ ಎದುರಾಗುತ್ತಿರುವ ತಾಂತ್ರಿಕ ಮತ್ತು ಇತರೆ ಸಮಸ್ಯೆಗಳನ್ನು ಚರ್ಚಿಸಿದರು. ಸಮಿತಿಗೆ ಸಲ್ಲಿಕೆಯಾದ ದೂರುಗಳನ್ನು ಪರಿಶೀಲಿಸಿ ಚರ್ಚಿಸಲಾಯಿತು. ತಾಲೂಕಿನ ವ್ಯಾಪ್ತಿಯಲ್ಲಿ ಸಮಾಜದ ಅರ್ಹ ಯಾರೊಬ್ಬರು ಈ ಗ್ಯಾರಂಟಿ ಯೋಜನೆಗಳಿಂದ ವಂಚಿತರಾಗದಿರಲು ಇಲಾಖಾ ಅಧಿಕಾರಿಗಳೊಂದಿಗೆ ಸೇರಿ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡಿ ಸವಲತ್ತುಗಳನ್ನು ಪಡೆಯಲು ನೆರವು ನೀಡುವಂತೆ ಎಲ್ಲಾ ನಾಮ ನಿರ್ದೇಶಿತ ಸದಸ್ಯರಿಗೆ ಸೂಚಿಸಿದರು. ಐದು ಅನುಷ್ಠಾನ ಇಲಾಖೆಗಳು ಈ ಯೋಜನೆಗಳ ಅನುಷ್ಠಾನದಲ್ಲಿ ಜನರಿಂದ ಸಲ್ಲಿಕೆಯಾಗುವ ದೂರುಗಳನ್ನು ಆದ್ಯತೆಯ ಮೇರೆಗೆ ಪರಿಹರಿಸಲು ಇಲಾಖಾ ಪ್ರತಿನಿಧಿಗಳಿಗೆ ಸೂಚಿಸಲಾಯಿತು.
ಸಭೆಯಲ್ಲಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಉಪಸ್ಥಿತರಿದ್ದರು. ಐದು ಇಲಾಖಾ ಅಧಿಕಾರಿಗಳು, ತಾಲೂಕು ಸಮಿತಿ ಸದಸ್ಯರು ಹಾಜರಿದ್ದರು. ತಾಲೂಕ ಪಂಚಾಯತ ವ್ಯವಸ್ಥಾಪಕ ರಾಮ ಭಟ್ ಸ್ವಾಗತಿಸಿ ವಂದಿಸಿದರು.