ದಾಂಡೇಲಿ:ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘದ ವತಿಯಿಂದ ಎಲ್ಲಾ ಗುತ್ತಿಗೆ ಮುನ್ಸಿಪಲ್ ಕಾರ್ಮಿಕರ ನೇರ ಪಾವತಿಯಡಿಯಲ್ಲಿ ಸಮಾನ ವೇತನ ಜಾರಿಗಾಗಿ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಶೀಲ್ದಾರ ಕಚೇರಿಯ ಶಿರಸ್ತೇದಾರ ಗೋಪಿ ಚೌವ್ಹಾಣ್ ಅವರ ಮೂಲಕ ಸಲ್ಲಿಸಲಾಯಿತು.
ಕಳೆದ 15-20 ವರ್ಷಗಳಿಂದ ನಿರಂತರವಾಗಿ ದುಡಿಯುತ್ತಿರುವ ಎಲ್ಲಾ ಗುತ್ತಿಗೆ, ಹೊರಗುತ್ತಿಗೆ, ಮುನ್ಸಿಪಲ್ ಕಾರ್ಮಿಕರನ್ನು ಖಾಯಂಗೊಳಿಸಲಾಗಿದೆ. ಆದರೆ ಇತರೆ ಗುತ್ತಿಗೆ ಮುನ್ಸಿಪಲ್ ಕಾರ್ಮಿಕರ ಬಗ್ಗೆ ಯಾವುದೆ ಕ್ರಮ ವಹಿಸದೆ ಇರುವುದು ನ್ಯಾಯ ಸಮ್ಮತವಲ್ಲ. ಮುನ್ಸಿಪಾಲಿಟಿಗಳಲ್ಲಿ ದುಡಿಯುವ ಎಲ್ಲಾ ಗುತ್ತಿಗೆ, ಹೊರಗುತ್ತಿಗೆ ಆಧಾರಿತ ಪೌರಕಾರ್ಮಿಕರನ್ನು, ವಿವಿಧ ವಿಭಾಗಗಳಲ್ಲಿನ ಸ್ವಚ್ಛತಾ ಕಾರ್ಮಿಕರು ಎಂಬ ಅಸಂಬದ್ಧ ವಿಂಗಡಣೆಯನ್ನು ಕೈಬಿಟ್ಟು ಎಲ್ಲಾ ಸ್ವಚ್ಛತಾ ಕಾರ್ಮಿಕರನ್ನು ಈ ತಕ್ಷಣದಿಂದ ನೇರ ಪಾವತಿಯಡಿಯಲ್ಲಿ ತಂದು ಸಮಾನ ವೇತನ ನೀಡಬೇಕು.
ಎಲ್ಲಾ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನದ ವಿವಿಧ ವಿಭಾಗಗಳಲ್ಲಿನ ಕಾರ್ಮಿಕರ ಸೇವೆಗಳನ್ನು ಖಾಯಂ ಮಾಡಬೇಕು. ಕಾನೂನು ಬದ್ಧ ವೇತನ, ಅನಾರೋಗ್ಯ ರಜೆ, ಹೆಚ್ಚುವರಿ ಕೆಲಸಕ್ಕೆ ವಾರದಲ್ಲಿ ಸಂಬಳ ಸಹಿತ ರಜೆ, ರಾಷ್ಟ್ರೀಯ ಹಬ್ಬಗಳ, ಹಬ್ಬಗಳ ರಜೆ, ಗಳಿಕೆ ರಜೆ, ಸೇರಿದಂತೆ ಕನಿಷ್ಟ ಕೂಲಿ ರೂ 31,000, ತುಟ್ಟಿಭತ್ಯೆ, ಪಿ.ಎಫ್. ಹಾಗೂ ಇ.ಎಸ್. ಐ ಸೌಲಭ್ಯ, ಗೃಹಭಾಗ್ಯ ಯೋಜನೆಯಡಿಯಲ್ಲಿ ಉಚಿತ ನಿವೇಶನವನ್ನು ನೀಡಬೇಕೆಂದು ಈ ಹಕ್ಕೊತ್ತಾಯಗಳ ಅಧಾರದ ಮೇಲೆ ದಿನಾಂಕ 30-09-2024 ರಂದು ಮುನ್ಸಿಪಲ್ ಕಾರ್ಮಿಕರು ವಿಧಾನ ಸೌಧ ಚಲೋ ನಡೆಸಲಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ಮುನ್ಸಿಪಲ್ ಕಾರ್ಮಿಕ ಸಂಘದ ಜಿಲ್ಲಾ ಅಧ್ಯಕ್ಷ ಡಿ.ಸ್ಯಾಮಸನ್ , ಮುಖಂಡರಾದ ಕಾಂತರಾಜು, ರೋಸಯ್ಯ, ಬಾಬಾರಾವ್, ರಾಮಾಂಜನೇಯ, ತಿರುಪತಿ, ಚನ್ನದಾಸಯ್ಯ, ಪೆದ್ದದೇವಯ್ಯ, ವಿನಾಯಕ, ಭರತ, ರಾಘವೇಂದ್ರ ಹಾಗೂ ಸ್ವಚ್ಛತಾ, ನೀರು ಸರಬರಾಜು ಮತ್ತು ವಾಹನ ಚಾಲಕರು ಉಪಸ್ಥಿತರಿದ್ದರು.