ಯಲ್ಲಾಪುರ: ಬರುವ ಡಿ.20 ರಿಂದ ಮೂರು ದಿನಗಳ ಕಾಲ ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಭಾಗವಾಗಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ರಥ ಯಾತ್ರೆಯನ್ನು ಬುಧವಾರ ತಾಲೂಕಾ ಆಡಳಿತ,ಕನ್ನಡ ಸಾಹಿತ್ಯ ಪರಿಷತ್ ತಾಲೂಕಾ ಘಟಕದ ವತಿಯಿಂದ ಪಟ್ಟಣದ ಅಂಬೇಡ್ಕರ್ ಸರ್ಕಲ್ ಬಳಿ ಅದ್ದೂರಿಯಾಗಿ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು.
ಶಾಸಕ ಶಿವರಾಮ ಹೆಬ್ಬಾರ್ ತಾಯಿ ಭುವನೇಶ್ವರಿ ಪ್ರತಿಮೆ ಹೊತ್ತ ಕನ್ನಡ ರಥಕ್ಕೆ ಪೂಜೆ ಸಲ್ಲಿಸಿ, ಮಾತನಾಡಿದ ಅವರು,ಕನ್ನಡದ ನೆಲ,ಜಲ, ನಾಡಿನ ಹಿತ ಕಾಯುವುದು ಪ್ರತಿಯೊಬ್ಬರ ಜವಾಬ್ದಾರಿ. ಕನ್ನಡದ ಅಸ್ಮಿತೆಗೆ ಧಕ್ಕೆ ಬಂದರೆ, ಕನ್ನಡಿಗರೆಲ್ಲರೂ ಒಟ್ಟಾಗಿ ಹೋರಾಡಿ ನಾಡಿನ ಹಿತ ಕಾಯಬೇಕು. ಕಳೆದ ಬಾರಿ ಹಾವೇರಿಯಲ್ಲಿ ನಡೆದ ಅಖಿಲ ಭಾರತ ಸಮ್ಮೇಳನವನ್ನು ಯಶಸ್ವಿಯಾಗಿ ನಿಭಾಯಿಸಿದ ಕ್ಷಣವನ್ನು ನೆನಪು ಮಾಡಿಕೊಂಡ ಅವರು ಈ ಬಾರಿಯೂ ಸಮ್ಮೇಳನ ಯಶಸ್ವಿಯಾಗಿ ನಡೆಯಲೆಂದರು.
ಎಸ್ಪಿ ನಾರಾಯಣ, ಡಿವೈಎಸ್ಪಿ ಗಣೇಶ,ಸಿಪಿಐ ರಮೇಶ ಹಾನಾಪುರ,ಪಿಎಐ ಸಿದ್ದಪ್ಪ ಗುಡಿ, ತಹಶಿಲ್ದಾರ ಯಲ್ಲಪ್ಪ ಗೊನ್ನೆಣ್ಣನವರ್,ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಕನ್ನಡದ ರಥಯಾತ್ರೆಗೆ ಶುಭಹಾರೈಸಿದರು.
ಗ್ರೇಡ್ 2 ತಹಶಿಲ್ದಾರ ಸಿ.ಜಿ. ನಾಯ್ಕ,ಪಪಂ ಮುಖ್ಯಾಧಿಕಾರಿ ಸುನಿಲ್ ಗಾವಡೆ,ಕಸಾಪ ಕೇಂದ್ರ ಮಾರ್ಗದರ್ಶಿ ಸಮಿತಿಯ ಸದಸ್ಯ ವೇಣುಗೋಪಾಲ ಮದ್ಗುಣಿ, ಕಸಾಪ ತಾಲೂಕಾ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ಕಾರ್ಯದರ್ಶಿಗಳಾದ ಸಂಜೀವಕುಮಾರ ಹೊಸ್ಕೇರಿ, ಜಿ.ಎನ್. ಭಟ್ಟ ತಟ್ಟಿಗದ್ದೆ,ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಆರ್.ಡಿ. ಜನಾರ್ಧನ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ನಾರಾಯಣ ನಾಯಕ, ಪ್ರಮುಖರಾದ ಬೀರಣ್ಣ ನಾಯಕ ಮೊಗಟಾ,ಎಂ.ಆರ್. ಹೆಗಡೆ,ಡಿ.ಜಿ. ಹೆಗಡೆ,ಶ್ರೀರಂಗ ಕಟ್ಟಿ,ರಾಮು ನಾಯ್ಕ,ಗಜಾನನ ನಾಯ್ಕ, ವಿವಿಧ ಇಲಾಖೆಯ ಅಧಿಕಾರಿಗಳು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸಾರ್ವಜನಿಕರು,ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.