ಸಿದ್ದಾಪುರ:ಜಿಲ್ಲೆಯ ಶಿರೂರು ಗುಡ್ಡಕುಸಿತ ದುರಂತದಲ್ಲಿ ಮೃತಪಟ್ಟ ಕುಟುಂಬಕ್ಕೆ ಮತ್ತು ಸಂತೃಸ್ತರ ಬಗ್ಗೆ ನ್ಯಾಯಕ್ಕಾಗಿ ಸೆ.12ರಂದು ಹೊನ್ನಾವರದಲ್ಲಿ ಉತ್ತರ ಕನ್ನಡ ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಒಕ್ಕೂಟದ ಅಧ್ಯಕ್ಷ ಡಾ.ನಾಗೇಶ ನಾಯ್ಕ ಕಾಗಾಲ ಅವರನ್ನೂ ಒಳಗೊಂಡಂತೆ 8 ಮಂದಿಯ ಮೇಲೆ ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿರುವುದು ಖಂಡನಾರ್ಹವಾದದ್ದು. ಈ ಕೂಡಲೇ ದಾಖಲಿಸಿದ ಪ್ರಕರಣವನ್ನು ಹಿಂಪಡೆಯಬೇಕು ಎಂದು ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟದ ಉಪಾಧ್ಯಕ್ಷ ವಿ.ಎನ್.ನಾಯ್ಕ ಬೇಡ್ಕಣಿ ಹಾಗೂ ಇನ್ನಿತರ ಪ್ರಮುಖರು ಆಗ್ರಹಿಸಿದರು.
ಸೆ.12ರಂದು ಶಾಂತಿಯುತವಾದ ಪಾದಯಾತ್ರೆಯೊಂದಿಗೆ ನಡೆದ ಪ್ರತಿಭಟನೆಯ ನಂತರ ತಹಶೀಲ್ದಾರ ಹಾಗೂ ಐಆರ್‌ಬಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಗೆ ಮುಂಚಿತವಾಗಿ ಪೊಲೀಸ್ ಅನುಮತಿ ಕೋರಿದಾಗ್ಯೂ ಯಾವುದೇ ಪ್ರತಿಕ್ರಿಯೆ ನೀಡದೇ ನಂತರದಲ್ಲಿ ಸರಕಾರಿ ಆಸ್ತಿಪಾಸ್ತಿ ನಷ್ಟ ಮಾಡದೇ, ಹಿಂಸಾಕೃತ್ಯ ನಡೆಸದೇ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದವರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣ ಹಿಂಪಡೆಯದಿದ್ದರೆ ಜಿಲ್ಲೆಯ ಎಲ್ಲ ಸಂಘಟನೆಗಳು, ಸಾರ್ವಜನಿಕರು ಒಂದಾಗಿ ಪ್ರತಿಭಟಿಸುವದು ಅನಿವಾರ್ಯ ಎಂದು ವಿ.ಎನ್.ನಾಯ್ಕ ಹೇಳಿದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕನ್ನೇಶ ಕೋಲಸಿರ್ಸಿ ಮಾತನಾಡಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಐಆರ್‌ಬಿ ಕಂಪನಿ ನಡೆಸುತ್ತಿರುವ ಕಾಮಗಾರಿ ಅವೈಜ್ಞಾನಿಕವಾಗಿ, ಹಲವು ನ್ಯೂನ್ಯತೆಗಳಿಂದ ಕೂಡಿದೆ. ರಾಜ್ಯ ಸರಕಾರ ಎಚ್ಚರಿಕೆ ಕೊಟ್ಟರೂ ನಿರ್ಲಕ್ಷ ಮಾಡುತ್ತಿದ್ದು ಈವರೆಗೆ ಹಲವು ಅಫಘಾತಗಳು, ಸಾವುಗಳು ಸಂಭವಿಸಿವೆ. ಅಲ್ಲದೇ ಕಾಮಗಾರಿ ಮುಗಿಸದೇ ದುಬಾರಿ ಟೋಲ್ ಶುಲ್ಕ ವಸೂಲು ಮಾಡುತ್ತಿದೆ. ಆ ಬಗ್ಗೆ ಧ್ವನಿಯೆತ್ತುತ್ತಿದ್ದರೂ ಐಆರ್‌ಬಿ ಕಂಪನಿ ಅದಕ್ಕೆ ಸ್ಪಂದಿಸಿಲ್ಲ. ಶಿರೂರು ದುರಂತಕ್ಕೆ ಈ ಕಂಪನಿ ಸಂಪೂರ್ಣ ಹೊಣೆಯಾದರೂ ಅಲ್ಲಿ ಸಂತ್ರಸ್ತರಾದವರಿಗೆ ಈವರೆಗೂ ಸ್ಪಂದಿಸಿಲ್ಲ. ಕಂಪನಿಯನ್ನು ನಿಯಂತ್ರಿಸುವ ಶಕ್ತಿ ಯಾರಿಗೂ ಇಲ್ಲ. ಅವರ ಒತ್ತಡದ ಮೇರೆಗೆ ಪ್ರತಿರೋಧವನ್ನು ಹತ್ತಿಕ್ಕುವ ದೃಷ್ಟಿಯಿಂದ ಸುಮೋಟೊ ಪ್ರಕರಣ ದಾಖಲಿಸಲಾಗಿದೆ. ಮುಂದಿನ ದಿನಗಳಲ್ಲಿ ಇಂಥ ಕಂಪನಿಗಳು ಕಾಮಗಾರಿ ನಡೆಸಬಹುದಾಗಿದ್ದು ಸಾರ್ವಜನಿಕರಿಗೆ ಸ್ಪಂದಿಸದ ಇಂಥ ದೈತ್ಯ ಕಂಪನಿಗಳ ವಿರುದ್ಧ ಸಾರ್ವಜನಿಕರು ಸಂಘಟಿತರಾಗಬೇಕು ಎಂದರು.
ಸಾಮಾಜಿಕ ಧುರೀಣ ವಸಂತ ನಾಯ್ಕ ಅನುಮತಿ ಪಡೆದು ಶಾಂತಿಯುತವಾಗಿ ಮನವಿ ನೀಡಿದ ನಂತರ ಪ್ರಕರಣ ದಾಖಲಿಸಿದ್ದು ಖಂಡನೀಯ. ಪ್ರಕರಣವನ್ನು ತಕ್ಷಣದಲ್ಲಿ ಹಿಂದಕ್ಕೆ ಪಡೆಯಬೇಕು.ಜಿಲ್ಲೆಯಲ್ಲಿ ಇಂಥ ಅನ್ಯಾಯಗಳಾದಾಗ ಎಲ್ಲರೂ ಸಂಘಟಿತರಾಗಿ ಬೆಂಬಲಿಸಬೇಕು. ಅವೈಜ್ಞಾನಿಕ ಕಾಮಗಾರಿ ಮಾಡುತ್ತ, ಕಾಮಗಾರಿ ಮುಗಿಯದ ಮೊದಲೇ ವಿಪರೀತ ಟೋಲ್ ಶುಲ್ಕ ವಸೂಲು ಮಾಡುತ್ತಿರುವ ಐಆರ್‌ಬಿ ಕಂಪನಿ ಪ್ರತಿಭಟಿಸದಿದ್ದರೆ ಇನ್ನಷ್ಟು ದೌರ್ಜನ್ಯ ನಡೆಸುತ್ತದೆ. ಜಿಲ್ಲೆಯ ಜನ ಸಂಘಟಿತರಾಗಿ ಹೋರಾಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ವೀರಭದ್ರ ನಾಯ್ಕ, ಸಿ.ಆರ್.ನಾಯ್ಕ, ಸಿ.ಜಿ.ನಾಯ್ಕ, ಲೋಕೇಶ ಹೆಗಡೆ,ರಾಮಕೃಷ್ಣ ನಾಯ್ಕ,ನಾರಾಯಣ ನಾಯ್ಕ ಮುಂತಾದವರಿದ್ದರು.