Slide
Slide
Slide
previous arrow
next arrow

ನೂತನ ಅಧ್ಯಕ್ಷ ಅಷ್ಪಾಕ್ ಶೇಖ್ ಅಧ್ಯಕ್ಷತೆಯ ಮೊದಲ ಸಾಮಾನ್ಯ ಸಭೆ ಯಶಸ್ವಿ

300x250 AD

ದಾಂಡೇಲಿ : ನಗರಸಭೆಯ ನೂತನ ಅಧ್ಯಕ್ಷರಾದ ಅಷ್ಪಾಕ್ ಶೇಖ ಅವರ ಅಧ್ಯಕ್ಷತೆಯ ಮೊದಲ ಸಾಮಾನ್ಯ ಸಭೆಯು ಗುರುವಾರ ನಗರಸಭೆಯ ಸಭಾಭವನದಲ್ಲಿ ನಡೆಯಿತು.

ನಗರಸಭೆಯ ಪೌರಾಯುಕ್ತಾರಾದ ಆರ್.ಎಸ್. ಪವಾರ್ ಸ್ವಾಗತದೊಂದಿಗೆ ಆರಂಭಗೊಂಡ ಸಭೆಯಲ್ಲಿ ನಗರಸಭೆಯ ಸ್ಥಾಯಿ ಸಮಿತಿಯ ಒಂದು ವರ್ಷದ ಅವಧಿಗೆ ಹೊಸ ಸದಸ್ಯರನ್ನು ಆಯ್ಕೆ ಮಾಡುವ ಬಗ್ಗೆ ಚರ್ಚಿಸಿ, ಸಮಿತಿಗೆ ನೂತನ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ನಗರಸಭೆಯ ನೀರು ಸರಬರಾಜು ವಿಭಾಗಕ್ಕೆ ಸಂಬಂಧಪಟ್ಟಂತೆ ಯಾವುದೇ ಕಾಮಗಾರಿ, ಯಂತ್ರೋಪಕರಣಗಳ ಖರೀದಿ, ದುರಸ್ತಿ‌ ಕಾರ್ಯ ಕೈಗೆತ್ತಿಕೊಳ್ಳುವ ಮುನ್ನ ನಗರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಗಮನಕ್ಕೆ ತರುವಂತೆ ಸಭೆಯಲ್ಲಿ ನಿರ್ಧರಿಸಲಾಯಿತು. ನಗರಸಭೆಯ ನೀರು ಸರಬರಾಜು ವಿಭಾಗ, ಆರೋಗ್ಯ ವಿಭಾಗ ಹಾಗೂ ಇತರ ವಿಭಾಗಗಳಲ್ಲಿ ಇರುವ ನಿರುಪಯುಕ್ತ ಸಾಮಗ್ರಿಗಳನ್ನು ಬಹಿರಂಗ ಹರಾಜು ಮಾಡಲು ನಿರ್ಣಯಿಸಲಾಯಿತು.

ನಗರಸಭೆಯ ಅಧ್ಯಕ್ಷರಿಗೆ ಹೊರಗುತ್ತಿಗೆ ಮೇಲೆ ಖಾಸಗಿ ವಾಹನವನ್ನು ಬಾಡಿಗೆಗೆ ಪಡೆಯಲು ಹಾಗೂ ಅಧ್ಯಕ್ಷರಿಗೆ ಹೊಸದಾಗಿ ವಾಹನವನ್ನು ಖರೀದಿಸಲು ಮಂಜೂರಾತಿಯನ್ನು ನೀಡಲಾಯಿತು.

ನಗರಸಭೆಯ ಮಾಲೀಕತ್ವದ ಅವಧಿ ಮುಕ್ತಾಯವಾದ ವಾಣಿಜ್ಯ ಮಳಿಗೆಯನ್ನು ಹರಾಜು ಮಾಡುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ನ್ಯಾಯಾಲಯದ ಆದೇಶದಂತೆ ನಗರಸಭೆಯ ಅಧೀನದಲ್ಲಿರುವ ನಿವೃತ್ತ ಸಿಬ್ಬಂದಿಗಳ ವಸತಿಗೃಹ ಮತ್ತು ಬಾಡಿಗೆಗೆ ನೀಡಲಾದ ವಸತಿ ಗೃಹಗಳನ್ನು ಖಾಲಿ‌ ಮಾಡಿಸಲು ಕೂಡಲೇ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಸಂಜಯ ನಂದ್ಯಾಳ್ಕರ ಅವರು ಆಗ್ರಹಿಸಿದರು ಇದಕ್ಕೆ ಸಭೆಯಲ್ಲಿ ಒಪ್ಪಿ ನಿರ್ಣಯವನ್ನು ಕೈಗೊಳ್ಳಲಾಯಿತು.

300x250 AD

ಕಾಗದ ಕಾರ್ಖಾನೆಯ ವ್ಯಾಪ್ತಿಯಲ್ಲಿ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಉನ್ನತಿಗಾಗಿ ಅಂಗನವಾಡಿ ಕೇಂದ್ರವನ್ನು ತೆರೆಯಬೇಕೆಂದು ದಶರಥ ಬಂಡಿವಡ್ಡರ ಅವರು ಆಗ್ರಹಿಸಿದರು. ಕೆ. ಸಿ ವೃತ್ತ ಮತ್ತು ಕುಳಗಿ ರಸ್ತೆಗೆ ಪೂರ್ಣಪ್ರಮಾಣದಲ್ಲಿ ಬೀದಿ ದೀಪಗಳ ಅಳವಡಿಕೆಗೆ ರೋಷನಜಿತ್ ಅವರು ಆಗ್ರಹಿಸಿದರು. ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮತ್ತು ವ್ಯಾಕ್ಸಿನೇಷನ್ ಬಗ್ಗೆ ಕೂಡಲೇ ಟೆಂಡರ್ ಕರೆಯುವ ಬಗ್ಗೆ ನಿರ್ಣಯಿಸಲಾಯಿತು.

ಬಹಳ ಪ್ರಮುಖವಾಗಿ g+2 ಪಕ್ಕದಲ್ಲಿರುವ ನಗರಸಭೆ ಮಾಲೀಕತ್ವದ ಅಂಬೇವಾಡಿ ಸರ್ವೆ ನಂಬರ್ 21ರಲ್ಲಿ ಜಾಗೆಯ ಸಿಟಿ ಸರ್ವೆ ನಂ : 7797 ರಲ್ಲಿನ ನಿವೇಶನಗಳ ಬಗ್ಗೆ ಸುಮಾರು ಹೊತ್ತು ಚರ್ಚೆ ನಡೆಯಿತು. ಸದಸ್ಯರಾದ ನಂದೀಶ ಮುಂಗರವಾಡಿ, ಯಾಸ್ಮಿನ್ ಕಿತ್ತೂರು, ಆಸೀಪ್ ಮುಜಾವರ, ಬುದವಂತಗೌಡ ಪಾಟೀಲ್, ರೋಶನಜಿತ್, ನರೇಂದ್ರ ಚೌಹ್ವಾಣ್, ರುಕ್ಮಿಣಿ ಭಾಗಡೆ‌ ಸೇರಿದಂತೆ ಅನೇಕ ಸದಸ್ಯರು ಈ ನಿವೇಶನಗಳಿಗೆ ಬೇಲಿ ಹಾಕಿ ನಗರಸಭೆಯ ನಾಮಫಲಕವನ್ನು ಹಾಕಬೇಕು. ಕೂಡಲೇ ಈ ನಿವೇಶನಗಳ ಹರಾಜಿಗೆ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷರಾದ ಅಷ್ಪಾಕ್ ಶೇಖ ಅವರು ಪೌರಾಯುಕ್ತರಾದ ಆರ್.ಎಸ್.ಪವಾರ್ ಅವರಲ್ಲಿ ಚರ್ಚಿಸಿ ಈ ಬಗ್ಗೆ ಕಾನೂನು ತಜ್ಞರ ಸಲಹೆಯನ್ನು ಪಡೆದು, ಯೋಗ್ಯಕ್ರಮವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಉಳಿದಂತೆ ಇನ್ನಿತರ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ನಗರಸಭೆ ಉಪಾಧ್ಯಕ್ಷ ಶಿಲ್ಪಾ ಕೋಡೆ ವಂದಿಸಿದರು. ಸಭೆಯಲ್ಲಿ ನಗರಸಭೆಯ ಸದಸ್ಯರು, ನಗರಸಭೆಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top