ಹಳಿಯಾಳ : ತಾಲೂಕಿನ ಹಿರಿಯರು ಹಾಗೂ ತಾಲೂಕು ಪಂಚಾಯಿತಿಯ ಮಾಜಿ ಅಧ್ಯಕ್ಷರು ಮತ್ತು ವಿಶ್ವ ಹಿಂದೂ ಪರಿಷತ್ತಿನ ಮಾಜಿ ಅಧ್ಯಕ್ಷರಾದ ತೇರಗಾಂವ ಗ್ರಾಮದ ಎನ್.ಜಿ.ಪಾಟಣಕರ ಅವರು ನಿಧನರಾದರು. ಮೃತರಿಗೆ 82 ವರ್ಷ ವಯಸ್ಸಾಗಿತ್ತು.
ಎನ್.ಜಿ.ಪಾಟಣಕರ ಅವರು ತಾಲೂಕಿನ ರಾಜಕೀಯ, ಸಾಮಾಜಿಕ, ಧಾರ್ಮಿಕ, ಆರ್ಥಿಕ, ಸಹಕಾರಿ ಕ್ಷೇತ್ರದಲ್ಲಿ ಅನುಪಮ ಸೇವೆಯನ್ನು ಸಲ್ಲಿಸಿ ತನ್ನದೇ ಆದ ಛಾಪನ್ನು ಮೂಡಿಸಿದ್ದರು.
ಹಳಿಯಾಳ ತಾಲೂಕು ಭತ್ತದ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾಗಿ, ತೇರಗಾಂವ ಗ್ರಾಮದ ದೇವಸ್ಥಾನ ಸಮಿತಿಗಳ ಅಧ್ಯಕ್ಷರಾಗಿಯೂ ಸೇವೆಯನ್ನು ಸಲ್ಲಿಸಿದ ಪಾಟನಕರ ಅವರು ತೇರಗಾಂವ ಗ್ರಾಮವನ್ನು ಮಧ್ಯಪಾನ ಮುಕ್ತ ಗ್ರಾಮವನ್ನಾಗಿಸುವ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು ಹೋರಾಟಕ್ಕೆ ಹೊಸ ಆಯಾಮವನ್ನು ತಂದು ಕೊಟ್ಟಿದ್ದರು.
ಹಲವು ವರ್ಷ ಹಳಿಯಾಳ ತಾಲೂಕು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾಗಿ ಧರ್ಮ ಸಂಘಟನೆ, ಧರ್ಮ ಜಾಗೃತಿ ಕಾರ್ಯದಲ್ಲಿ ಪ್ರಾಮಾಣಿಕವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ತಾಲೂಕಿನ ಹಿಂದೂ ಜನಜಾಗೃತಿ ಸಮಿತಿಯ ಪ್ರತಿಯೊಂದು ಕಾರ್ಯ ಚಟುವಟಿಕೆಗಳಲ್ಲಿ ತಮ್ಮನ್ನು ನಿಷ್ಠೆಯಿಂದ ತೊಡಗಿಸಿಕೊಂಡಿದ್ದರು.
ಸರಳ, ಸಹೃದಯಿ ವ್ಯಕ್ತಿತ್ವದ, ಪರೋಪಕಾರಿ ಗುಣ ಸಂಪನ್ನರಾಗಿದ್ದ ಎನ್.ಜಿ.ಪಾಟಣಕರ ಅವರು ಪತ್ನಿ ಓರ್ವ ಪುತ್ರ, ಪುತ್ರಿ ಹಾಗೂ ಅಪಾರ ಸಂಖ್ಯೆಯಲ್ಲಿ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ನಿಧನಕ್ಕೆ ತಾಲೂಕಿನ ಗಣ್ಯರೇನೇಕರು ಕಂಬನಿಯನ್ನು ಮಿಡಿದು ಸಂತಾಪವನ್ನು ಸೂಚಿಸಿದ್ದಾರೆ. ಎನ್.ಜಿ.ಪಾಟಣಕರ ಅವರ ನಿಧನಕ್ಕೆ ಹಳಿಯಾಳ ತಾಲೂಕು ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷರಾದ ಶ್ರೀಪತಿ ಭಟ್ ಅವರು ಸಂತಾಪವನ್ನು ಸೂಚಿಸಿ, ಹಿಂದೂಪರ ಸಂಘಟನೆಗಳಿಗೆ ಸಮರ್ಥ ಮಾರ್ಗದರ್ಶಕರಾಗಿದ್ದ ಎನ್.ಜಿ.ಪಾಟಣಕರ ಅವರ ನಿಧನ ತಾಲೂಕಿನ ಸಾಮಾಜಿಕ, ಧಾರ್ಮಿಕ, ಸಹಕಾರಿ ಕ್ಷೇತ್ರಕ್ಕೆ ತುಂಬಲಾರದ ನಷ್ಟ ತಂದಿದೆ. ಸಂಕಷ್ಟದಲ್ಲಿರುವವರ ಸಮಸ್ಯೆಗಳಿಗೆ ತಡವರಿಯದೆ ಸ್ಪಂದಿಸುವ ಅವರ ಗುಣ ಸದಾ ಅಮರ. ತಾಲೂಕಿನಲ್ಲಿ ವಿಶ್ವ ಹಿಂದೂ ಪರಿಷತ್ ಸೇರಿದಂತೆ ಹಿಂದೂ ಪರ ಸಂಘಟನೆಗಳ ಬೆಳವಣಿಗೆಗೆ ಎನ್.ಜಿ.ಪಾಟಣಕರ ಅವರ ಕೊಡುಗೆ ಅಪಾರವಾಗಿದೆ ಎಂದು ಮೃತರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ದಯಪಾಲಿಸಲೆಂದು ಎಂದು ಶ್ರೀಪತಿ ಭಟ್ ಪ್ರಾರ್ಥಿಸಿದ್ದಾರೆ. ಅಂತೆಯೇ ತಾಲೂಕಿನ ವಿಶ್ವ ಹಿಂದು ಪರಿಷತ್ತಿನ ಪದಾಧಿಕಾರಿಗಳು, ಸದಸ್ಯರು ಮತ್ತು ಬಜರಂಗದಳದ ಪದಾಧಿಕಾರಿಗಳು, ಸದಸ್ಯರು ಹಾಗೂ ಹಿಂದೂಪರ ಸಂಘಟನೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದ್ದಾರೆ.