ಯಲ್ಲಾಪುರ: ತಾಲೂಕಿನ ವಜ್ರಳ್ಳಿ ಗ್ರಾಪಂ ವ್ಯಾಪ್ತಿಯ ಬಾಗಿನಕಟ್ಟಾ ಬಳಿ ಕಳಚೆಗೆ ನಿರ್ಮಿಸಿದ ಕೂಡು ರಸ್ತೆಯ ಅಸಮರ್ಪಕ ಕಾಮಗಾರಿಯಿಂದಾಗಿ ಕಚ್ಚಾರಸ್ತೆಯ ಮಣ್ಣು ತೋಟಕ್ಕೆ ನೀರು ಪೂರೈಕೆಯಾಗುವ ಕಾಲುವೆ ತುಂಬಿ ಮುಚ್ಚಿಹೋಗಿ ಅವಾಂತರ ಉಂಟಾಗಿದೆ. ಇದನ್ನು ಕೂಡಲೇ ಸರಿಪಡಿಸಲು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ನರಸಿಂಹ ವಿ. ಗಾಂವ್ಕಾರ ಬಾಗಿನಕಟ್ಟಾ ಆಗ್ರಹಿಸಿದ್ದಾರೆ.
ಅವರು ಈ ಕುರಿತು ಹೇಳಿಕೆ ನೀಡಿ, ಬಾಗಿನಕಟ್ಟಾ ಬಳಿ ಕಳಚೆ ಸಂಪರ್ಕದ ಸಲುವಾಗಿ ಎರಡು ವರ್ಷದ ಹಿಂದೆ ಸೇತುವೆ ನಿರ್ಮಿಸಿರುವುದು ಸ್ವಾಗತಾರ್ಹ. ಇಲ್ಲಿಂದ ಕಳಚೆಗೆ ಹೋಗಲು ಇರುವ ಹಳೆಯ ಮಾರ್ಗ ದುರಸ್ತಿ ಮಾಡುವುದನ್ನು ಬಿಟ್ಟು,ತಮ್ಮ ಖಾಸಗಿ ಜಮೀನಿನಲ್ಲಿ ಶಾರ್ಟ ಕಟ್ ರಸ್ತೆ ಮಾಡಲಾಗಿದೆ. ಅವೈಜ್ಞಾನಿಕ, ಅಸಮರ್ಪಕ ಕಾಮಗಾರಿಯಿಂದಾಗಿ ಗುಡ್ಡದ ಮಣ್ಣು ಕಡಿದು ಕೆಳಗೆ ಹಾಕಲಾಗಿದೆ. ಇದರಿಂದ ಬಾಗಿನಕಟ್ಟಾ ಊರಿಗೆ ನೀರೋದಗಿಸುವ ಕಾಲುವೆಯಲ್ಲಿ ಪದೇ ಪದೇ ಮಣ್ಣು ಕುಸಿದು ಸಮಸ್ಯೆಯಾಗಿದೆ.
ಅಲ್ಲದೇ ರಸ್ತೆ ಕಾಮಗಾರಿಯಿಂದಾಗಿ ದಬ್ಬೆಸಾಲ್ ರಸ್ತೆಗೆ ಧಕ್ಕೆ ಆಗಿದೆ. ನೀರು ಕಾಲುವೆ ಮುಚ್ಚಿಹೋಗಿದೆ. ನೈಸರ್ಗಿಕ ನೀರು ಹರಿಯುವ ಕಾಲುವೆ ಕುಸಿದರೆ, ಬಾಗಿನಕಟ್ಟಾ ಗ್ರಾಮಸ್ಥರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಕಾರಣ ಸಂಬಂಧ ಪಟ್ಟವರು ಗಮನಹರಿಸಿ, ಶಾರ್ಟಕಟ್ ರಸ್ತೆ ಬಿಟ್ಟು,ಹಳೆಯ ಮಾರ್ಗವನ್ನು ಸರಿಪಡಿಸಬೇಕು. ಶಾರ್ಟಕಟ್ ಕಾಮಗಾರಿಯಿಂದ ಉಂಟಾದ ಅದ್ವಾನ ಸರಿಪಡಿಸಿ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.