ಯಲ್ಲಾಪುರ: ಬದುಕಿನಲ್ಲಿ ನಗುವನ್ನು ಹಂಚುತ್ತ ಬದುಕಬೇಕು. ನಗುವ ಮೂಲಕ ನೋವನ್ನು ಮರೆಯಬೇಕು ಎಂದು ಸಾಹಿತಿ ಅರುಣಕುಮಾರ ಹಬ್ಬು ಹೇಳಿದರು.
ಅವರು ಗುರುವಾರ ಪಟ್ಟಣದ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಮಾತೃಭೂಮಿ ಸೇವಾ ಟ್ರಸ್ಟ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕಾ ಘಟಕದ ಆಶ್ರಯದಲ್ಲಿ ದಿ.ವೆಂಕಣ್ಣಾಚಾರ್ಯ ಕಟ್ಟಿ ಅವರ ಸಂದೇಶ ರಾಮಾಯಣ, ನಿವೃತ್ತ ಪ್ರಾಂಶುಪಾಲ ಶ್ರೀರಂಗ ಕಟ್ಟಿ ವಿರಚಿತ ‘ಬ್ಯಾಸರಕಿ ಬ್ಯಾಡೋ ನಗುವಾಗ’ ಕೃತಿ ಲೋಕಾರ್ಪಣೆಗೊಳಿಸಿ ಮಾತನ್ನಾಡುತ್ತಿದ್ದರು. ಆಧುನಿಕ ಸಂದರ್ಭದಲ್ಲಿ ನಗು ಮಾಯವಾಗಿದೆ. ಮೊಬೈಲ್ ಕಾರಣದಿಂದ ಸಂವಹನ ಇಲ್ಲದೇ ನಿರ್ಲಿಪ್ತರಾಗಿದ್ದೇವೆ ಇಂತಹ ಸಂದರ್ಭದಲ್ಲಿ ಬದುಕಿನಲ್ಲಿ ಸಣ್ಣ ಖುಷಿಯನ್ನು ಅನುಭವಿಸುತ್ತ, ಆತ್ಮವಂಚನೆ ಇಲ್ಲದೇ ಲವಲವಿಕೆಗೆ ನಗುವ ಮೂಲಕ ಬದುಕನ್ನು ಹಸನಾಗಿಸಿಕೊಳ್ಳಬೇಕು ಎಂದರು.
ಕೃತಿಕಾರ ಶ್ರೀರಂಗ ಕಟ್ಟಿ ಮಾತನ್ನಾಡಿ, ಜಾಲತಾಣಗಳ ಮೂಲಕ ನಗೆ ಸಂದೇಶವನ್ನು ಬಿತ್ತರಿಸಿದ್ದು ಈಗ ಬ್ಯಾಸರಕಿ ಬ್ಯಾಡೋ ನಗುವಾಗ ಕೃತಿಯ ಮೂಲಕ ಓದುಗರಿಗೆ ನಗೆ ಹಂಚುವ ಪ್ರಯತ್ನ ಮಾಡಿದ್ದೇನೆ. ಅನುಭವಗಳನ್ನು ಗೃಹಿಸಿ ನಮ್ಮತನ ರೂಢಿಸಿಕೊಳ್ಳುವ ಪ್ರಯತ್ನ ಮಾಡಬೇಕು ಸಾಹಿತಿಗಳಿಂದ ಆಗಬೇಕು ಎಂದರು.
ಸಾಹಿತಿ ವನರಾಗ ಶರ್ಮಾ ಅಧ್ಯಕ್ಷತೆ ವಹಿಸಿ,ಸಾಹಿತ್ಯ ಓದುತ್ತ,ಬರೆಯುತ್ತ ಹೋದಂತೆ ಜೀವನದ ಧರ್ಮ, ಮರ್ಮ ಸಾರ್ಥಕತೆ ತಂದುಕೊಡಲು ಸಾಧ್ಯ.ಆನಿಟ್ಟಿನ ಪ್ರಯತ್ನ ಸಾಹಿತ್ಯಾಸಕ್ತರಿಂದ ಆಗಬೇಕು ಎಂದರು.
ಕಲಾವಿದ ಸತೀಶ ಯಲ್ಲಾಪುರ, ಪ್ರಾಂಶುಪಾಲ ದತ್ರಾತ್ರಯ ಗಾಂವ್ಕಾರ ಕೃತಿ ಪರಿಚಯಿಸಿದರು. ಶರಾವತಿ ಶಿರ್ನಾಲಾ ಕಾವ್ಯ ಗಾಯನ ಮಾಡಿದರು.
ಪ್ರಾಂಶುಪಾಲ ಆರ್.ಡಿ. ಜನಾರ್ಧನ ಅಭಿಪ್ರಾಯಿಸಿದರು. ಕಸಾಪ ತಾಲೂಕಾ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ಸ್ವಾಗತಿಸಿದರು. ವೇದಾ ಭಟ್ಡ ಪ್ರಾರ್ಧಿಸಿದರು. ಸುಬ್ರಾಯ ಬಿದ್ರೆಮನೆ ನಿರೂಪಿಸಿದರು. ಉಪನ್ಯಾಸಕಿ ಸವಿತಾ ನಾಯ್ಕ ವಂದಿಸಿದರು.