ಸಿದ್ದಾಪುರ : ತಾಲೂಕಿನ ಹುಸೂರ್‌ನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಲಗೇರಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಿತು.
ಹಲಗೇರಿ ಗ್ರಾಮ ಪಂಚಾಯತ ಅಧ್ಯಕ್ಷೆ ಮೋಹಿನಿ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಒಂದಲ್ಲ ಒಂದು ರೀತಿಯ ಕಲೆ ಅಡಗಿರುತ್ತದೆ. ಅವರ ಕಲೆಯನ್ನ ಗುರುತಿಸಲು ಈ ಕಾರ್ಯಕ್ರಮ ಅವಕಾಶ ಕಲ್ಪಿಸುತ್ತದೆ. ತಮ್ಮ ವಿದ್ಯಾಭ್ಯಾಸದ ಜೊತೆಗೆ ತಮಗೆ ಗೊತ್ತಿರುವ ಕಲೆಯನ್ನು ಪ್ರದರ್ಶಿಸಿ ಪ್ರತಿಭಾವಂತರಾಗಿ, ತಂದೆ ತಾಯಿ ಗುರು ಹಿರಿಯರಿಗೆ ಗೌರವವನ್ನು ನೀಡಿ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನಿವೃತ್ತ ಎಪಿಪಿ ಬಿ.ಜಿ ನಾಯ್ಕ ಮಾತನಾಡಿ ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಚಿಂತನೆಯನ್ನು ಮಾಡಿ ಸಾಹಿತ್ಯ, ಕಲೆ, ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಾಧನೆ ಮಾಡಿ ದುಶ್ಚಟಗಳಿಗೆ ಬಲಿಯಾಗದಿರಿ ಎಂದರು.
ಹಲಗೇರಿ ಗ್ರಾಮ ಪಂಚಾಯತ ಸದಸ್ಯೆ ಸುಶಿಲಾ ನಾಯ್ಕ ಮಾತನಾಡಿ ಓದುವ ಸಂದರ್ಭದಲ್ಲಿ ಚೆನ್ನಾಗಿ ಓದಿ ಸಾಧನೆಯನ್ನು ಮಾಡಿ ಶಿಕ್ಷಣದ ಜೊತೆಗೆ ಅರೋಗ್ಯ, ಸಂಸ್ಕಾರದ ಕಡೆ ಗಮನ ನೀಡಿ ಎಂದರು.
ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಾಜು ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಬಿ.ಆರ್.ಪಿ ಕೃಷ್ಣಮೂರ್ತಿ, ನಾಗರಾಜ ನಾಯ್ಕ ಮೆಣಸಿ, ಜಿ.ಆರ್.ಹೆಗಡೆ, ನಜಿಬುಲ್ಲಾ, ಶಾಲೆ ಎಸ್‌ಡಿಎಂಸಿ ಉಪಾಧ್ಯಕ್ಷೆ ಅನುಪಮಾ ನಾಯ್ಕ, ಸಂತೋಷ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ಶಾಲೆ ಮುಖ್ಯ ಶಿಕ್ಷಕ ಎಂ ಕೆ. ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಸಮೂಹ ಸಂಪನ್ಮೂಲ ಅಧಿಕಾರಿ ಭಾಸ್ಕರ ಮಡಿವಾಳ ಸ್ವಾಗತಿಸಿದರು. ಶಿಕ್ಷಕಿ ಮೇಧಾ ನಿರೂಪಿಸಿದರು.ರವಿ ನಾಯ್ಕ್ ವಂದಿಸಿದರು. ಇದೆ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕರನ್ನ ಸನ್ಮಾನಿಸಲಾಯಿತು.