ಶಿರಸಿ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸುವುದಿಲ್ಲ ಹಾಗೂ ಕಾನೂನಿನಡಿಯಲ್ಲಿ ಅನಧೀಕೃತ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಕಾನೂನು ಪ್ರಕ್ರಿಯೆ ಜರುಗಿಸದೆ ಒಕ್ಕಲೆಬ್ಬಿಸಲಾಗದು ಎಂಬ ಹೊಸ ಟಿಪ್ಪಣೆ ಅರಣ್ಯ ಸಚಿವ ಈಶ್ವರ ಖಂಡ್ರೆ ಆದೇಶಿಸಿದ್ದಾರೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೊರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳೀದರು.
ಅವರು ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ಅರಣ್ಯ ಸಚಿವರು ಸೆ.2ರಂದು ಬಿಡುಗಡೆಗೊಳಿಸಿದ ಟಿಪ್ಪಣೆಯ ಆದೇಶವನ್ನು ಬಿಡುಗಡೆಗೊಳಿಸುತ್ತಾ ಮೇಲಿನಂತೆ ಹೇಳಿದರು. ಸಚಿವರ ಆದೇಶದಲ್ಲಿ ಎಪ್ರೀಲ್ ೨೭ ೧೯೭೮ ರ ಪೂರ್ವ ಮಂಜೂರಿಯ ಅರ್ಹ ಹಾಗೂ ಬಿಟ್ಟುಹೋಗಿರುವ ಪ್ರಕರಣ ಅಲ್ಲದೇ, ಅರಣ್ಯ ಒತ್ತುವರಿ ಮತ್ತು ಒತ್ತುವರಿದಾರನ ಪಟ್ಟಾ ಜಮೀನು ಸೇರಿ ಮೂರು ಎಕರೆಗಿಂತ ಕಡಿಮೆ ಇರುವ ಒತ್ತುದಾರರನ್ನು, ಬುಡಕಟ್ಟು ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳು ಅರ್ಜಿ ಸಲ್ಲಿಸಿದ್ದಲ್ಲಿ, ಸುಪ್ರೀಂ ಕೋರ್ಟ ಆದೇಶದ ಅನ್ವಯ ಪುನರಪರೀಶೀಲನೆಗೆ ಬಾಕಿ ಇಲ್ಲದ ಪ್ರಕರಣಗಳನ್ನು ಖಾತ್ರಿಪಡಿಸಿಕೊಂಡು ಹಾಗೂ ಕರ್ನಾಟಕ ಅರಣ್ಯ ಕಾಯಿದೆ ಕಲಂ ೬೪ ಎ ಪ್ರಕ್ರಿಯೆ ಅಡಿಯಲ್ಲಿ ಪ್ರಕ್ರಿಯೆ ಜರುಗಿಸಿ ಒತ್ತುವರಿಯನ್ನು ಜರುಗಿಸುವ ಕುರಿತು ಆದೇಶದಲ್ಲಿ ಉಲ್ಲೇಖಿಸಿದ್ದಾರೆಂದು ಅವರು ಹೇಳಿದರು.
ಒಕ್ಕಲೆಬ್ಬಿಸಲು ಅರಣ್ಯ ಕಾರ್ಯಪಡೆ:
ಟಿಪ್ಪಣೆಯಲ್ಲಿ ರಾಜ್ಯದ ೧೦ ಜಿಲ್ಲೆಗಳಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ೨೦೧೫ ನಂತರದ ಅರಣ್ಯ ಒತ್ತುವರಿ ತೆರವುಗೊಳಿಸಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಅರಣ್ಯ ಕಾರ್ಯಪಡೆ ಮುಖ್ಯಸ್ಥರ ನೇತೃತ್ವದ ಕಾರ್ಯಪಡೆ ರಚಿಸಲಾಗಿದ್ದು, ಮೊದಲಿಗೆ ಅರಣ್ಯ ಭೂಮಿ ಒತ್ತುವರಿ ಮಾಡಿ ನಿರ್ಮಿಸಿದ ರೆಸಾರ್ಟಗಳು ಹೋಂಸ್ಟೇಗಳನ್ನು ಹಾಗೂ ಕರ್ನಾಟಕ ಅರಣ್ಯ ಕಾಯಿದೆ ೧೯೬೩ರ ೬೪ ಎ ಪ್ರಕ್ರಿಯೆ ಪೂರ್ಣಗೊಂಡಿರುವ ಮತ್ತು ನ್ಯಾಯಾಲಯದ ತಡೆಯಾಜ್ಞೆ, ವಿಚಾರಣೆ ಬಾಕಿ ಇಲ್ಲದ ದೊಡ್ಡ ಒತ್ತುವರಿಗಳನ್ನು ತೆರವು ಮಾಡಲು ಸೂಚಿಸಲಾಗಿರುತ್ತದೆ. ಈ ಕಾರ್ಯಪಡೆ ಕಳೆದ ಒಂದು ತಿಂಗಳಲ್ಲಿ ಮಾಡಿರುವ ಒತ್ತುವರಿ ತೆರವಿನ ವಲಯವಾರು ವಿವರಗಳನ್ನು ಚಿತ್ರ ಸಹಿತ ಈ ಕಛೇರಿಗೆ ಕೂಡಲೇ ಸಲ್ಲಿಸಲು ಸೂಚಿಸಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.