ಸಿದ್ದಾಪುರ : ತಾಲೂಕಿನ ಮುಗದೂರನಲ್ಲಿರುವ ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮದಲ್ಲಿ ಸ್ಥಳೀಯ ಪ್ರಾಥಮಿಕ, ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಆಶ್ರಮದ ವತಿಯಿಂದ ಆಯೋಜಿಸಿದ್ದ ಉಚಿತ ಚಿತ್ರಕಲೆ ತರಬೇತಿ ಶಿಬಿರಕ್ಕೆ ಸ್ಥಳೀಯ ಪೊಲೀಸ್ ಠಾಣೆಯ ಪಿಎಸ್ಐ ಅನಿಲ್ ಬಿ. ಎಂ. ವಿದ್ಯಾರ್ಥಿಗಳಿಗೆ ಚಿತ್ರಕಲಾ ಕಿಟ್ ವಿತರಿಸಿ ಚಾಲನೆ ನೀಡಿದರು.
ನಂತರ ಮಾತನಾಡಿ ಎಲ್ಲೋ ರಸ್ತೆಯಲ್ಲಿ ಅನಾರೋಗ್ಯ ಹಾಗೂ ಅನಾಥರಾಗಿರುವವರಿಗೆ, ಮಕ್ಕಳಿಗೆ ಬೇಡವಾದ ತಂದೆ ತಾಯಂದಿರಿಗೆ ಚಿಕಿತ್ಸೆ ನೀಡಿ ಆರೈಕೆ ಮಾಡಿ ಆಶ್ರಮದಲ್ಲಿ ಆಶ್ರಯ ನೀಡಿ ಬದುಕು ಕಟ್ಟಿ ಕೊಟ್ಟು ಮಾನವೀಯತೆ ಮೆರೆಯುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಈ ರೀತಿಯ ತರಬೇತಿ ಕಾರ್ಯಕ್ರಮ ಆಯೋಜಿಸಿರುವುದು ಖುಷಿಯ ಸಂಗತಿ , ನಮ್ಮ ಇಲಾಖೆಗೆ ತಡ ರಾತ್ರಿಯಲ್ಲಿ ಅನಾಥ ಸ್ಥಿತಿಯಲ್ಲಿ ವ್ಯಕ್ತಿಗಳು ಸಿಕ್ಕಾಗ ಕೂಡಲೇ ಬಂದು ರಕ್ಷಿಸಿ ಸಹಾಯ ಮಾಡುತ್ತಾರೆ ಈ ರೀತಿಯಲ್ಲಿ ಮಾಡುವ ಇವರ ಕಾರ್ಯ ಶ್ಲಾಘನೀಯ ಎಂದರು.
ಪತ್ರಕರ್ತ ದಿವಾಕರ ಸಂಪಖಂಡ ಅತಿಥಿಗಳಾಗಿ ಭಾಗವಹಿಸಿ ಅನಾಥರ ರಕ್ಷಣೆಯ ಜವಾಬ್ದಾರಿಯ ಜೊತೆಗೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿಕೊಳ್ಳಲು ಚಿತ್ರ ಕಲೆ ಶಿಬಿರ ಆಯೋಜಿಸಿರುವುದು ನಾವೆಲ್ಲರೂ ಇವರ ಕಾರ್ಯಕ್ಕೆ ಕೈ ಜೋಡಿಸಬೇಕಿದೆ ಮಕ್ಕಳು ಇದರ ಉಪಯೋಗ ಪಡೆದುಕೊಳ್ಳಿ ಎಂದರು.
ಕನ್ನಡ ಪರ ಸಂಘಟನೆಯ ಅನಿಲ್ ಕೊಠಾರಿ, ಪೊಲೀಸ್ ಇಲಾಖೆ ಸಿಬ್ಬಂದಿಗಳು ಶುಭ ಹಾರೈಸಿದರು. ಆಶ್ರಮದ ಮುಖ್ಯಸ್ಥ ನಾಗರಾಜ ನಾಯ್ಕ ಸ್ವಾಗತಿಸಿ ವಂದಿಸಿದರು. ತರಬೇತುದಾರ ರಾಘವೇಂದ್ರ ನಾಯ್ಕ ಮಕ್ಕಳಿಗೆ ಚಿತ್ರ ಕಲೆ ತರಬೇತಿ ಆರಂಭಿಸಿದರು. ಪ್ರತಿ ರವಿವಾರ ತರಬೇತಿ ನಡೆಯಲಿದೆ ಮುಂದಿನ ದಿನದಲ್ಲಿ ಸ್ಪೋಕನ್ ಇಂಗ್ಲಿಷ್ ತರಬೇತಿ ಆಯೋಜಿಸುವುದಾಗಿ ಆಶ್ರಮದ ವ್ಯವಸ್ಥಾಪಕಿ ಮಮತಾ ನಾಯ್ಕ್ ತಿಳಿಸಿದರು.