ಅಡಕೆಯ ಜೊತೆಗೆ ಉಪಬೆಳೆಗೆ ಆದ್ಯತೆ ನೀಡಲು ರೈತರಿಗೆ ಕರೆ | ಶಿರಸಿಯಲ್ಲಿ ನಡೆದ 111 ನೇ ಟಿ.ಆರ್.ಸಿ. ವಾರ್ಷಿಕ ಸರ್ವಸಾಧಾರಣ ಸಭೆ
ಶಿರಸಿ: ಪ್ರಸಕ್ತ ವರ್ಷ ಉಂಟಾದ ಅತಿವೃಷ್ಟಿಯಿಂದಾಗಿ ಅನೇಕ ಪ್ರದೇಶ ಜಲಾವೃತವಾಗಿ ಅಪಾರ ಪ್ರಮಾಣದ ನಷ್ಟವಾಗಿರುವುದಲ್ಲದೆ ಜನ-ಜಾನುವಾರುಗಳಿಗೆ ಪ್ರಾಣ ಹಾನಿ ಸಂಭವಿಸಿರುವುದು ಬೇಸರದ ಸಂಗತಿಯಾಗಿದೆ. ಉತ್ತರಕನ್ನಡ ಜಿಲ್ಲೆಯಲ್ಲಿಯೂ ಗುಡ್ಡ ಕುಸಿತ ಹಾಗೂ ಪ್ರವಾಹಪೀಡಿತ ಪ್ರದೇಶಗಳಿದ್ದು ಅನೇಕರಿಗೆ ವಾಸ್ತವ್ಯ ಮನೆ ಕೂಡಾ ಇಲ್ಲದಂತಾಗಿರುವುದು ತುಂಬಾ ನೋವುಂಟುಮಾಡಿದೆ ಎಂದು ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ ಹೇಳಿದರು.
ಅವರು ಇಂದು ಇಲ್ಲಿನ ಟಿಆರ್ಸಿ ಸಭಾಭವನದಲ್ಲಿ ನಡೆದ ಟಿಆರ್ಸಿಯ 111ನೇ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉತ್ತರ ಕನ್ನಡ ಜಿಲ್ಲೆಯ ರೈತರ ಜೀವನಾಧಾರವಾಗಿರುವ ಅಡಿಕೆಗೆ ವಿಪರೀತ ಕೊಳೆರೋಗ ಬಾಧಿಸಿದ್ದು ಬಹುತೇಕ ರೈತರ ಶೇಕಡಾ 50ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ. ಸಂಘವು ತನ್ನ ಪ್ರಾರಂಭಿಕ ಕಾಲದಿಂದಲೂ ಇಂತಹ ಅನೇಕ ಸ್ಥಿತ್ಯಂತರಗಳನ್ನು ಕಂಡಿದೆ. ಅಡಿಕೆ ಉತ್ಪಾದನೆ, ಮಾರುಕಟ್ಟೆ ಸ್ಥಿತ್ಯಂತರ, ಬೆಲೆಗಳಲ್ಲಾದ ಏರಿಳಿತ ಇವುಗಳೆಲ್ಲದರ ಪರಿಣಾಮಗಳನ್ನು ಸದಸ್ಯರು ಸಹ ಎದುರಿಸುತ್ತಾ ಬಂದಿದ್ದಾರೆ. ಇಂತಹ ಸಂಕಷ್ಟಗಳ ನಡುವೆಯೂ ಪ್ರಾಮುಖ್ಯವಾಗಿ ಅಡಿಕೆ ಹಾಗೂ ಉಪ ಬೆಳೆಗಳನ್ನು ಆಧರಿಸಿ ಕೃಷಿಕ ಸದಸ್ಯರು ಜೀವನ ನಿರ್ವಹಣೆ ಮಾಡಿಕೊಂಡು ಬಂದಿರುತ್ತಾರೆ ಹಾಗೂ ಮುಂದಿನ ತಲೆಮಾರಿಗೆ ಭದ್ರತೆಯನ್ನು ಒದಗಿಸಿರುತ್ತಾರೆ. ಇಂತಹ ಸಂದರ್ಭದಲ್ಲಿ ಸದಸ್ಯರ ಆರ್ಥಿಕ ಹಾಗೂ ನೈತಿಕ ಬೆನ್ನೆಲುಬಾಗಿ ಸಂಘವು ನಿಂತು ಸದಸ್ಯರ ಏಳ್ಗೆ ಹಾಗೂ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದೇ ರೀತಿಯಾಗಿ ಪ್ರಸಕ್ತವರ್ಷವೂ ಸಹ ಸಂಘವು ಸದಸ್ಯರ ಹಿತಕಾಯಲು ಸಿದ್ಧವಾಗಿದೆ ಎಂದರು.
ಸಹಕಾರ ಸಂಘಗಳ ಮೂಲಸೌಕರ್ಯದ ಅಭಿವೃದ್ಧಿಯ ಹೆಸರಿನಲ್ಲಿ ಸರ್ಕಾರವು ಸಹಕಾರ ಸಂಘಗಳ ಮೇಲೆ ವಿವಿಧ ರೀತಿಯಲ್ಲಿ ಹಿಡಿತ ಸಾಧಿಸಲು ಹೊರಟಿದೆ. ಅದರ ಭಾಗವಾಗಿ ಎಲ್ಲಾ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳಿಗೆ ಕಾಮನ್ ಸಾಫ್ಟ್ವೇರ್ ಅಳವಡಿಸಲಾಗುತ್ತಿದೆ. ಇದು ಭವಿಷ್ಯದ ದೃಷ್ಟಿಯಲ್ಲಿ ಉತ್ತಮವಾದ ಬೆಳವಣಿಗೆಯೇ ಆಗಿದ್ದರೂ ಸಹ ಸದಸ್ಯರಿಗೆ ಪ್ರಾರಂಭಿಕ ಹಂತದಲ್ಲಿ ಇದಕ್ಕೆ ಹೊಂದಿಕೊಳ್ಳುವುದು ಕಷ್ಟವಾಗಬಹುದು.
ಈ ಸಾಫ್ಟ್ವೇರ್ ಅಳವಡಿಕೆಯ ನಂತರ ಅಂದಿನ ಲೆಕ್ಕಪತ್ರಗಳನ್ನು ಅಂದೇ ಸಂಪೂರ್ಣವಾಗಿ ಮುಗಿಸಬೇಕಾಗಿದ್ದು ಸಾಲ ಮರುಪಾವತಿ ಅಥವಾ ಇನ್ನಾವುದೇ ತುರ್ತು ಸಂದರ್ಭಗಳಲ್ಲಿ ಸಹ ಹೊಂದಾಣಿಕೆ ಮಾಡಿಕೊಂಡು ವ್ಯವಹಾರ ನಡೆಸಲು ಸಾಧ್ಯವಾಗುವುದಿಲ್ಲ. ಈ ತಂತ್ರಾಂಶದ ನಿರ್ವಹಣೆ ಹಾಗೂ ತಂತ್ರಾಂಶ ಮೇಲಿನ ಹಿಡಿತ ಸಂಘದ ವ್ಯಾಪ್ತಿಯಲ್ಲಿರದ ಕಾರಣ ಸದಸ್ಯರು ಇದನ್ನು ಅರಿತು ಸಂಘದೊಂದಿಗೆ ಸಹಕಾರ ನೀಡಬೇಕೆಂದರು.
ಸಂಘದ ಸದಸ್ಯರಿಗೆ ಕಳೆದ ಹಲವಾರು ವರ್ಷಗಳಿಂದ ಬೆಳೆ ವಿಮೆ ಯೋಜನೆಯ ಗರಿಷ್ಠ ಪ್ರಯೋಜನ ದೊರಕಿಸಿಕೊಡಲು ಸಂಘವು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಾ ಬಂದಿದೆ.
ಆದರೆ ಪ್ರಸಕ್ತ ಸರ್ಕಾರದ ಬೆಳೆ ಸರ್ವೆ ತಂತ್ರಾಂಶದಲ್ಲಿ ಉಂಟಾಗಿರುವ ತಾಂತ್ರಿಕ ತೊಂದರೆಯಿಂದಾಗಿ ಬಹಳಷ್ಟು ರೈತರ ಬೆಳೆ ವಿಮೆ ತುಂಬಲು ಸಾಧ್ಯವಾಗಿರುವುದಿಲ್ಲ. ಈ ಬಗ್ಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದ್ದು ಸಮಸ್ಯೆಯನ್ನು ಸರಿಪಡಿಸಿಕೊಡುವ ಭರವಸೆ ಸಹ ದೊರೆತಿದೆ. ಅಲ್ಲದೆ 2017-18ನೇ ಸಾಲಿನಲ್ಲಿ ಸಿದ್ದಾಪುರ ತಾಲೂಕಿನ ನಿಲ್ಕುಂದ, ತಂಡಾಗುಂಡಿ ಭಾಗದ ಸದಸ್ಯರು ವಿಮಾ ಪರಿಹಾರಕ್ಕೆ ಅರ್ಹರಿದ್ದರೂ ವಿಮಾ ಕಂಪನಿ ಪರಿಹಾರ ನೀಡಿರಲಿಲ್ಲ. ಈ ಕುರಿತು ಸದಸ್ಯರ ಪರವಾಗಿ ಸಂಘವೇ ಮುಂದೆ ನಿಂತು ಗ್ರಾಹಕರ ನ್ಯಾಯಾಲಯದಿಂದ ಸದಸ್ಯರಿಗೆ ಪರಿಹಾರ ದೊರಕುವಂತೆ ತೀರ್ಪು ಬರುವಲ್ಲಿ ಕ್ರಮ ಕೈಗೊಂಡ ಪ್ರತಿಫಲವಾಗಿ ಸದಸ್ಯರ ಪರವಾಗಿ ನ್ಯಾಯಾಲದಲ್ಲಿ ತೀರ್ಪು ಬಂದಿದೆ. ಹಾಗೂ 2018ರಲ್ಲಿ ರಾಜ್ಯ ಸರ್ಕಾರದಿಂದ ರೈತರ ಬೆಳೆಸಾಲ ಮನ್ನಾ ಆದ ಬಾಬ್ತು ಗ್ರೀನ್ ಲೀಸ್ಟ್ನಲ್ಲಿ ಬಂದ ಸದಸ್ಯರ ಪರವಾಗಿ ಮನ್ನಾ ಹಣ ಬಿಡುಗಡೆಗೊಳಿಸುವಂತೆ ಈಗಾಗಲೇ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದರು.
ಸಂಘದ ಕಾರ್ಯವ್ಯವಹಾರ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸಿದ್ದಾಪುರ ಹಾಗೂ ಯಲ್ಲಾಪುರ ಭಾಗದ ರೈತರಿಗೆ ಅನುಕೂಲವಾಗುವಂತೆ ಸಂಘದ ಶಾಖೆಗಳನ್ನು ತೆರೆಯಲು ಚಿಂತನೆ ನಡೆಸಲಾಗಿದೆ. ಸದಸ್ಯರು ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಸೂಚಿಸಿದಲ್ಲಿ ಸಂಘವು ಮುಂದಿನ ದಿನಗಳಲ್ಲಿ ಶಾಖೆ ತೆರೆಯುವ ಬಗ್ಗೆ ಕ್ರಮಕೈಗೊಳ್ಳಲು ಅನುಕೂಲವಾಗಲಿದೆ ಎಂದು ರಾಮಕೃಷ್ಣ ಹೆಗಡೆ ಹೇಳಿದರು.
ಟಿಆರ್ಸಿ ಉಪಾಧ್ಯಕ್ಷರಾದ ವಿಶ್ವಾಸ ಬಲ್ಸೆ ಚವತ್ತಿ ಮಾತನಾಡಿ, ಕೊಳೆ ರೋಗದಿಂದ ರೈತರ ವಾರ್ಷಿಕ ಉತ್ಪನ್ನದಲ್ಲಿ ಅರ್ಧಕ್ಕಿಂತಲೂ ಕಡಿಮೆಯಾಗಿರುವುದಲ್ಲದೆ ಅಡಿಕೆ ದರವೂ ಇಳಿಕೆಯಾಗಿದ್ದರಿಂದ ಮುಂಬರುವ ದಿನಗಳಲ್ಲಿ ಇದು ರೈತರ ಆರ್ಥಿಕ ಸ್ಥಿತಿಗತಿಯ ಮೇಲೆ ಖಂಡಿತವಾಗಿಯೂ ಪ್ರತಿಕೂಲ ಪರಿಣಾಮ ಬೀರಲಿದೆ.
ಸದಸ್ಯರಾದ ತಾವು ಆರ್ಥಿಕ ಸಂಕಷ್ಟಕ್ಕೊಳಗಾದರೆ ಸ್ವಾಭಾವಿಕವಾಗಿ ತಾವು ವ್ಯವಹರಿಸುವ ಸಂಸ್ಥೆ ಸಹ ಆರ್ಥಿಕ ಸಂಕಷ್ಟವನ್ನು ಎದುರಿಸಲೇಬೇಕಾಗುತ್ತದೆ.
ಇದನ್ನು ಎಲ್ಲ ಸದಸ್ಯರು ಈಗಿನಿಂದಲೇ ಗಂಭೀರವಾಗಿ ಪರಿಗಣಿಸಿ ಮುಂದಿನ ವರ್ಷದಲ್ಲಿ ಉಂಟಾಗಬಹುದಾದ ಆರ್ಥಿಕ ಖರ್ಚುವೆಚ್ಚಗಳ ಮೇಲೆ ಸಾಧ್ಯವಾದಷ್ಟು ಹಿಡಿತ ಸಾಧಿಸಿ ಅನಾವಶ್ಯಕ ಖರ್ಚುವೆಚ್ಚಗಳನ್ನು ಕಡಿಮೆಗೊಳಿಸಿಕೊಂಡು ಎದುರಾಗಬಹುದಾದ ಆರ್ಥಿಕ ಸಂಕಷ್ಟದಿಂದ ಪಾರಾಗಲು ನಾವೆಲ್ಲ ಒಗ್ಗೂಡಿ ಮುನ್ನೆಚ್ಚರಿಕೆ ವಹಿಸುವುದು ಅನಿವಾರ್ಯವಾಗಿದೆ ಎಂದರು.
ಆರ್ಥಿಕ ಏರಿಳಿತವನ್ನು ತಪ್ಪಿಸಿಕೊಳ್ಳಲು ಅಡಿಕೆಯೊಂದಿಗೆ ಕಾಳು ಮೆಣಸು ಏಲಕ್ಕಿ ಬಾಳೆ ಇನ್ನಿತರ ಉಪಬೆಳೆಯನ್ನು ಹೆಚ್ಚಿನ ಆದ್ಯತೆಯೊಂದಿಗೆ ಬೆಳೆಯಿರಿ. ಆಗ ಯಾವುದಾದರೂ ಒಂದು ಬೆಳೆ ನಮ್ಮ ಕೈ ಹಿಡಿದು ನಮ್ಮನ್ನು ಸಂಕಷ್ಟದಿಂದ ಪಾರಾಗಲು ಸಹಕರಿಸುತ್ತದೆ ಎಂದರು.
ನಿವೃತ್ತ ಸಿಬ್ಬಂದಿಗಳಿಗೆ ಸಾಧಕ ಸದಸ್ಯರಿಗೆ ಸನ್ಮಾನ: ಸಂಘದಲ್ಲಿ ಸುದೀರ್ಘ 33 ವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಯಂ ಸೇವಾ ನಿವೃತ್ತಿ ಹೊಂದಿದ ವಿನೋದಾ ನರಸಿಂಹ ಹೆಗಡೆ, ಜುಮ್ಮನಕೊಪ್ಪ ಹಾಗೂ ಫೋಟೋಗ್ರಫಿಯಲ್ಲಿ ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ನಾಗೇಂದ್ರ ಮುತ್ಮುರ್ಡು ಅವರನ್ನು ಹಾಗೂ ಸಂಘದಲ್ಲಿ ಹಲವು ವರ್ಷಗಳಿಂದ ಪ್ರಾಮಾಣಿಕವಾಗಿ ವ್ಯವಹರಿಸಿದ 11 ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಹಾಗೂ ಪ್ರಸಕ್ತ ವರ್ಷ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ರಾಜ್ಯಮಟ್ಟದಲ್ಲಿ 10 ರೊಳಗಿನ ರ್ಯಾಂಕ್ ಪಡೆದ ಸಂಘದ ಸದಸ್ಯರ ಕುಟುಂಬ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಮುಜುಗರಕ್ಕೊಳಗಾದ ಜಿ.ವಿ. ಜೋಶಿ ಕಾಗೇರಿ: ಟಿಎಸ್ಎಸ್ನ ಚುನಾವಣಾ ಪ್ರಚಾರದ ಸಮಯದಲ್ಲಿ ರಾಮಕೃಷ್ಣ ಹೆಗಡೆ ಕಡವೆ ಅವರು ತಮ್ಮ ಚುನಾವಣಾ ಮನವಿಯಲ್ಲಿ ಟಿಆರ್ಸಿ ಸಂಘ ನಷ್ಟವಾಗಿರುವ ಬಗ್ಗೆ ಹಾಗೂ ತಾವು ಅಧಿಕಾರ ವಹಿಸಿಕೊಂಡ ನಂತರ ಲಾಭದತ್ತ ಸಂಘವನ್ನು ಕೊಂಡೊಯ್ದ ಬಗ್ಗೆ ಉಲ್ಲೇಖಿಸಿದ್ದು, ಟಿಆರ್ಸಿಗೆ ಯಾವ ಸಾಲಿನ ವರದಿಯಲ್ಲಿ ನಷ್ಟವಾಗಿದೆ ಎಂದು ಸಭೆಗೆ ತಿಳಿಸಬೇಕು. ಈ ಮಾಹಿತಿಯಿಂದ ಸದಸ್ಯರಲ್ಲಿ ತಪ್ಪು ಭಾವನೆ ಮೂಡಿ ಬಂದಿರುತ್ತದೆ. ನೀವು ನೀಡಿದ ಮಾಹಿತಿ ತಪ್ಪಾಗಿದ್ದರೆ ಸಭೆಯಲ್ಲಿ ಕ್ಷಮೆಯಾಚಿಸಬೇಕೆಂದು ಹಿರಿಯ ಸಹಕಾರಿ ಜಿ.ವಿ. ಜೋಶಿ ಕಾಗೇರಿ ಅವರು ಸಲ್ಲಿಸಿರುವ ಮನವಿಗೆ ಪ್ರತಿಕ್ರಿಯಿಸಿದ ಟಿಆರ್ಸಿ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ಟಿಎಸ್ಎಸ್ನ ಚುನಾವಣಾ ಮನವಿಯಲ್ಲಿ ಉಲ್ಲೇಖಿಸಿದ ವಿಷಯದ ಕುರಿತು ನಮ್ಮ ಸಂಘದ ವಾರ್ಷಿಕ ಸಭೆಯಲ್ಲಿ ಚರ್ಚಿಸುವುದು ಸರಿಯಾದ ಕ್ರಮವಲ್ಲ. ಆದರೆ ಸದಸ್ಯರಲ್ಲಿ ತಪ್ಪು ಭಾವನೆ ಉಂಟಾಗಿದೆ ಎಂದು ತಾವು ಹೇಳಿದ ಹಿನ್ನೆಲೆಯಲ್ಲಿ ಇದನ್ನು ಈ ಸಭೆಯಲ್ಲಿ ಸ್ಪಷ್ಟಪಡಿಸಲೇ ಬೇಕಾಗಿದೆ.
ಟಿಆರ್ಸಿಯು ಸನ್ 2004-05ನೇ ಸಾಲಿನಲ್ಲಿ ರೂ.12,35,960.70 ನಷ್ಟ ಅನುಭವಿಸಿರುತ್ತದೆ. ನಂತರ 2005-06ರಲ್ಲಿ ನಾನು ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಿರುತ್ತೇನೆ. ನಂತರ ಒಂದು ವರ್ಷದಲ್ಲಿಯೇ ಸಂಘವು ಲಾಭಗಳಿಸಿರುತ್ತದೆ. ಹಿರಿಯರಯ ಹಾಗೂ ಟಿಆರ್ಸಿಯ ಗೌರವಾನ್ವಿತ ಸದಸ್ಯರೂ ಆಗಿರುವ ತಾವು ಅಂದಿನ ಅವಧಿಯ ಸಂಘದ ನಿರ್ದೇಶಕರೂ ಆಗಿರುತ್ತೀರಿ. ಇಂತಹ ಪ್ರಶ್ನೆಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿ ಸದಸ್ಯರಲ್ಲಿ ತಪ್ಪು ಭಾವನೆಯನ್ನು ನೀವು ಮೂಡಿಸುತ್ತಿರುವುದು ಸರಿಯಲ್ಲ. ನಾನು ಚುನಾವಣಾ ಸಂದರ್ಭದಲ್ಲಿ ನೀಡಿದ ಮಾಹಿತಿ ತಪ್ಪಾಗಿದ್ದರೆ ಸಭೆಯ ಕ್ಷಮೆ ಕೇಳಬೇಕೆಂದು ಹೇಳಿರುತ್ತೀರಿ. ನಾನು ನೀಡಿದ ಮಾಹಿತಿ ಸರಿಯಾಗಿದ್ದರೆ ನಿಮ್ಮ ನಡೆಯೇನು ಎಂಬುದನ್ನು ಸ್ಪಷ್ಟಪಡಿಸಿ ಎಂದು ರಾಮಕೃಷ್ಣ ಹೆಗಡೆ ಕಡವೆ ಜಿ.ವಿ. ಜೋಶಿ ಅವರನ್ನು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಸದಸ್ಯರೆಲ್ಲರು ಚಪ್ಪಾಳೆ ಮೂಲಕ ಕಡವೆಯರನ್ನು ಬೆಂಬಲಿಸಿದರು. ಕಡವೆಯವರು ಚುನಾವಣಾ ಸಂದರ್ಭದಲ್ಲಿ ಹೇಳಿದ ಸಂಗತಿ ನಿಜವಾದಲ್ಲಿ ನೀವು ಕ್ಷಮೆ ಕೇಳಬೇಕೆಂದು ಜಿ.ವಿ. ಜೋಶಿಯವರನ್ನು ಸದಸ್ಯರು ಒತ್ತಾಯಿಸಿದರು. ಈ ಸನ್ನಿವೇಶದ ಮಧ್ಯ ಪ್ರವೇಶಿಸಿದ ರಾಮಕೃಷ್ಣ ಹೆಗಡೆ ಅವರು ನನಗೆ ಯಾರೂ ಕ್ಷಮೆ ಕೇಳಬೇಕೆಂಬ ಅಪೇಕ್ಷೆ ಇಲ್ಲ. ಸದಸ್ಯರಿಗೆ ಸತ್ಯಾಂಶ ತಿಳಿಸುವ ಉದ್ದೇಶದಿಂದ ಈ ವಿಷಯ ಸ್ಪಷ್ಟಪಡಿಸಿದ್ದೇನೆ ಎಂದು 2004-05ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯನ್ನು ಸಭೆಗೆ ತೋರಿಸಿ ಸದರ ಸಾಲಿನಲ್ಲಿ ಸಂಘ ನಷ್ಟ ಉಂಟಾಗಿರುವುದನ್ನು ದಾಖಲೆ ಸಮೇತ ಸ್ಪಷ್ಟಪಡಿಸಿದ ನಂತರ ಜಿ.ವಿ. ಜೋಶಿ ಅವರು ಮುಜುಗರಕ್ಕೊಳಗಾದ ಪ್ರಸಂಗ ನಡೆಯಿತು.
ಅಡಿಕೆ ಕೊಳೆ ಪರಿಹಾರಕ್ಕೆ ಆಗ್ರಹಿಸಿ ಮನವಿ: ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರ ತಾಲೂಕುಗಳಲ್ಲಿ ಉಂಟಾದ ಅತಿವೃಷ್ಠಿಯ ಕಾರಣದಿಂದ ಎಲ್ಲ ರೈತರ ಅಡಿಕೆ ತೋಟಗಳಲ್ಲಿಯೂ ತೀವ್ರವಾಗಿ ಕೊಳೆರೋಗ ಕಾಣಿಸಿಕೊಂಡು ಬಾಧಿಸುತ್ತಿದೆ. ಇದರಿಂದಅಡಿಕೆ ಮರಗಳೂ ಸಾಯುತ್ತಿವೆ. ಅಡಿಕೆಯ ಬೆಲೆಯಲ್ಲಿಯೂ ಕುಸಿತವಾಗಿದೆ. ಇದರಿಂದ ರೈತರ ಆರ್ಥಿಕ ಪರಿಸ್ಥಿತಿಯ ಮೇಲೆ ಗುರುತರ ಪರಿಣಾಮ ಉಂಟಾಗುವ ಎಲ್ಲ ಲಕ್ಷಣಗಳೂ ಕಾಣಿಸಿಕೊಳ್ಳುತ್ತಿದೆ. ಮುಂದಿನ ಬೆಳೆಗೆ ಅತೀವತೊಂದರೆ ಮತ್ತು ನಷ್ಟ ಉಂಟಾಗುತ್ತಿದ್ದು ಮುಂದಿನ 8-10ಆರ್ಥಿಕ ವರ್ಷಗಳಲ್ಲಿ ರೈತರ ಬದುಕು ದುಸ್ಥರವಾಗಲಿರುವ ಕುರಿತು ಸಭೆಯಲ್ಲಿ ಚರ್ಚಿಸಿ ಈ ಕುರಿತು ಪರಿಹಾರಕ್ಕೆ ಆಗ್ರಹಿಸಿ ಶಿರಸಿ ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಭೀಮಣ್ಣ ನಾಯ್ಕ ಹಾಗೂ ಯಲ್ಲಾಪುರ, ಮುಂಡಗೋಡ ವಿಧಾನಸಭಾ ಕ್ಷೇತ್ರದ ಶಾಸಕರಾದ ಶಿವರಾಮ ಹೆಬ್ಬಾರ ಅವರಿಗೆ ಮನವಿ ಸಲ್ಲಿಸಲು ಗೊತ್ತುವಳಿ ಅಂಗೀಕರಿಸಲಾಯಿತು.
ನಿರ್ಣಯದಲ್ಲೇನಿದೆ?
1) ಎಲ್ಲ ಸಾಲದ ಕಂತು ಮತ್ತು ಬಡ್ಡಿಯನ್ನು ಪ್ರಸಕ್ತ ಸಾಲಿನಲ್ಲಿ ರೈತರಿಂದ ತೆಗೆದುಕೊಳ್ಳದೇ ಮುಂದಿನ ಸಾಲಿನಲ್ಲಿ ಭರಣ ಮಾಡುವಂತೆ ಸರಕಾರದಿಂದ ವ್ಯವಸ್ಥೆ ಮಾಡಿಕೊಡಬೇಕು
2) ಎಲ್ಲ ಸಾಲಗಳಿಗೂ ಸಂಬAಧಪಟ್ಟ ಬಡ್ಡಿಯನ್ನು ಸರಕಾರದಿಂದ ಭರಾಯಿಸಿಕೊಡುವಂತೆ ಅಗತ್ಯಕ್ರಮ ಕೈಗೊಳ್ಳಬೇಕು.
3) ಸಾಲ ಮತ್ತು ಬಡ್ಡಿಯನ್ನು ಮರುಸಂದಾಯ ಮಾಡದ ರೈತರು ಕಟಬಾಕಿಯಾಗದಂತೆ ಚಾಲ್ತಿ ಸಾಲವನ್ನಾಗಿ ಮಾಡಿಕೊಡಲು ಸರಕಾರದಿಂದ ಆದೇಶ ಕೊಡಿಸಬೇಕು.
4) ಪ್ರಕೃತಿ ವಿಕೋಪದ ಇಂಥ ಸಮಯದಲ್ಲಿ ರೈತರ ಸಾಲದ ಮಿತಿಯನ್ನು ಅಗತ್ಯಕ್ಕನುಗುಣವಾಗಿ ಸರಕಾರದಿಂದ ಹೆಚ್ಚಿಸಬೇಕು.
5) ಯೋಗ್ಯರೀತಿಯಲ್ಲಿ ವಿಮಾ ಪರಿಹಾರ ಮೊತ್ತವು ರೈತರಿಗೆ ದೊರೆಯುವಂತೆ ಅಗತ್ಯಕ್ರಮ ಕೈಗೊಳ್ಳಬೇಕು.
6) ಸರಕಾರದಿಂದ ಈಗಾಗಲೇ ಚಾಲ್ತಿಯಲ್ಲಿರುವ ಪ್ರತಿ ಹೆಕ್ಟೇರಿಗೆ ಬದಲಾಗಿ ಚಿಕ್ಕ ಮತ್ತು ಅತಿ ಚಿಕ್ಕ ರೈತರಿಗೆ ಅನುಕೂಲವಾಗುವಂತೆ, ಪ್ರತಿಗುಂಟೆಗೆ ಪರಿಹಾರ ಮೊತ್ತವನ್ನು ಅನ್ವಯಿಸಿ ಇಂದಿನ ಕಾಲಕ್ಕೆ ಅನುಗುಣವಾಗಿ ವೈಜ್ಞಾನಿಕವಾಗಿ ಹೆಚ್ಚಿಸಬೇಕು.
7) ಮೇಲಿನ ಎಲ್ಲ ಸಮಸ್ಯೆಗಳನ್ನೂ ಗಂಭೀರವಾಗಿ ಪರಿಗಣಿಸಿ ರೈತರಿಗೆ ಸರಕಾರದಿಂದ ವಿಶೇಷ ಪ್ಯಾಕೇಜ ವ್ಯವಸ್ಥೆ ಮಾಡಿಕೊಡಲು ರೈತರೆಲ್ಲರ ಪರವಾಗಿ ಕೋರಿದೆ.
ಸದಸ್ಯರಿಗೆ ಕೊಡುಗೆ: ಕಳೆದ ಸಾಲಿನಲ್ಲಿ ಸಂಘದ ಮೂಲಕ ಮಹಸೂಲು ವಿಕ್ರಯಿಸಿದ ಸದಸ್ಯರಿಗೆ ಪ್ರೋತ್ಸಾಹಕವಾಗಿ ಸಮೃದ್ದಿ ಬುಟ್ಟಿಯನ್ನು ಕೊಡಲು ತೀರ್ಮಾನಿಸಿದ್ದು ವಾರ್ಷಿಕ ಸಭೆಯಲ್ಲಿ ಸಾಂಕೇತಿಕವಾಗಿ ಇಬ್ಬರು ಸದಸ್ಯರಿಗೆ ನೀಡುವ ಮೂಲಕ ಚಾಲನೆ ನೀಡಲಾಯಿತು.
ಸಂತಾಪ: ದೀರ್ಘ ಕಾಲದಿಂದ ನಮ್ಮ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಅತ್ಯಮೂಲ್ಯ ಸಹಾಯ ಸಹಕಾರ ನೀಡುತ್ತಿದ್ದ ಈ ಹಿಂದೆ ಟಿಎಸ್ಎಸ್ ಅಧ್ಯಕ್ಷರಾದ ಶಾಂತಾರಾಮ ಹೆಗಡೆ ಶೀಗೇಹಳ್ಳಿ ಹಾಗೂ ಸಂಘದಲ್ಲಿ ಚಾಲಕ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಂಜುನಾಥ ಕೃಷ್ಣ ನಾಯ್ಕ ಮರಾಠಿಕೊಪ್ಪ ಇವರು ನಿಧನರಾದ ಹಿನ್ನೆಲೆಯಲ್ಲಿ ಮೌನಾಚರಣೆ ಮಾಡಿ ಸಂತಾಪ ಮೃತರಿಗೆ ಸಂತಾಪ ಸೂಚಿಸಲಾಯಿತು.
ಸಭೆಯಲ್ಲಿ ಟಿಆರ್ಸಿ ಎಲ್ಲ ನಿರ್ದೇಶಕರು ಉಪಸ್ಥಿತರಿದ್ದರು. ಟಿಆರ್ಸಿ ಪ್ರಭಾರಿ ಮುಖ್ಯಕಾರ್ಯನಿರ್ವಾಹಕ ಕಿರಣ ಶ್ರೀಪಾದ ಭಟ್ ಮಾವಿನಕೊಪ್ಪ ವಾರ್ಷಿಕ ವರದಿ ವಾಚಿಸಿದರು. ಜಿ.ಜಿ. ಹೆಗಡೆ ಕುರುವಣಿಗೆ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಮಹಿಳಾ ಸಿಬ್ಬಂದಿಗಳು ಪ್ರಾರ್ಥಿಸಿದರು.