ಸಿದ್ದಾಪುರ: ತಾಲೂಕಿನ ಭುವನಗಿರಿಯ ಭುವನೇಶ್ವರಿ ದೇವಸ್ಥಾನದಲ್ಲಿ ಸುಷಿರ ಸಂಗೀತ ಪರಿವಾರ ಭುವನಗಿರಿ (ರಿ) ಕಲ್ಲಾರೆಮನೆ ಮತ್ತು ಶ್ರೀ ಭುವನೇಶ್ವರಿ ದೇವಾಲಯ ಭುವನಗಿರಿ ಇವರ ಸಂಯುಕ್ತ ಆಶ್ರಯದಲ್ಲಿ ಎರಡನೇ ವರ್ಷದ “ಭಜ ಭುವನೇಶ್ವರಿ” ಅಖಂಡ ಭಜನಾ ಕಾರ್ಯಕ್ರಮ ಶನಿವಾರ ಮತ್ತು ಭಾನುವಾರ ಅಹೋರಾತ್ರಿ ನಡೆದು ಸಂಪನ್ನಗೊಂಡಿತು.
ಕಾರ್ಯಕ್ರಮಕ್ಕೆ ಭುವನಗಿರಿ ದೇವಸ್ಥಾನದ ಅಧ್ಯಕ್ಷ ಶ್ರೀಕಾಂತ ಹೆಗಡೆ, ಶಿಕ್ಷಣ ಪ್ರಸಾರಕ ಸಮಿತಿ ಅಧ್ಯಕ್ಷ ಡಾ. ಶಶಿಭೂಷಣ ಹೆಗಡೆ ದೊಡ್ಮನೆ, ದೇವಾಲಯದ ಪ್ರಧಾನ ಅರ್ಚಕ ಶ್ರೀಧರ ಭಟ್ಟ ಮುತ್ತಿಗೆ ದೀಪ ಬೆಳಗಿಸಿ ಚಾಲನೆ ನೀಡಿದರು. ಪಂ. ಶ್ರೀಪಾದ ಹೆಗಡೆ ಸೋಮನಮನೆ ಅವರ ಭಜನೆಯಿಂದ ಆರಂಭಗೊಂಡು, ನಂತರ ಸುಮಾರು 65ಕ್ಕೂ ಹೆಚ್ಚು ಕಲಾವಿದರು ನಿರಂತರ ಭಜನಾ ಕಾರ್ಯಕ್ರಮವನ್ನು ನಡೆಸಿ ದೇವಿಯ ಆರಾಧನೆಯಲ್ಲಿ ಪಾಲ್ಗೊಂಡರು. ಪ್ರಸಿದ್ಧ ಕಲಾವಿದರುಗಳಾದ ವಸುಧಾ ಶರ್ಮ ಹಳೆಇಕ್ಕೇರಿ, ಮನು ಹೆಗಡೆ ಪುಟ್ಟನಮನೆ, ವಿನಾಯಕ ಹೆಗಡೆ ಹಿರೇಹದ್ದ, ಮಹೇಶ್ ಕುಲಕರ್ಣಿ ಮುಂಬೈ, ವಿನಾಯಕ ಲಲಿತ್ ಮುಂಬೈ, ಗಜಾನನ ಪಾಟೀಲ್ ಮುಂಬೈ ತಮ್ಮ ಸುಶ್ರಾವ್ಯ ಹಾಡುಗಾರಿಕೆಯಿಂದ ಕಾರ್ಯಕ್ರಮಕ್ಕೆ ಮೆರಗು ತಂದರು.
ಸಿದ್ದಾಪುರ ತಾಲೂಕಿನ ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿ ಬಾಳೂರು, ಶ್ರೀ ರಾಮಾಂಜನೇಯ ಭಜನಾ ಮಂಡಳಿ ಹೊಸಳ್ಳಿ, ಶ್ರೀ ಮಾರುತಿ ಭಜನಾ ಮಂಡಳಿ ಬಿಳಗಿ, ಸ್ವರಗಂಗಾ ಭಜನಾ ಮಂಡಳಿ ಭುವನಗಿರಿ, ಓಂ ಶಾಂತಿ ಭಜನಾ ಮಂಡಳಿ ಸಿದ್ದಾಪುರ ಮುಂತಾದ ತಂಡಗಳು ಭಾಗವಹಿಸಿದ್ದವು. ಹಾಡುಗಾರರಿಗೆ ಕೊಳಲಿನಲ್ಲಿ ಪ್ರಕಾಶ್ ಹೆಗಡೆ ಕಲ್ಲಾರೆಮನೆ, ಸಂವಾದಿನಿಯಲ್ಲಿ ವಿನಾಯಕ ಲಲಿತ್ ಮುಂಬೈ, ಪ್ರಕಾಶ್ ಹೆಗಡೆ ಯಡಳ್ಳಿ, ಅಜಯ್ ಹೆಗಡೆ ವರ್ಗಾಸರ ಮುಂತಾದವರು ಹಾಗೂ ಪಖವಾಜ್ ದಲ್ಲಿ ಸೋಮದತ್ತ ಮಾನೆ ಮುಂಬೈ, ನರಸಿಂಹಮೂರ್ತಿ ಹಳೆ ಇಕ್ಕೇರಿ, ಅನಂತ ಭಟ್ಟ ಹೆಗ್ಗಾರಳ್ಳಿ, ತಬಲಾದಲ್ಲಿ ವಿನಾಯಕ ನಾಯಕ್ ಮುಂಬೈ, ಗುರುರಾಜ್ ಹೆಗಡೆ ಆಡುಕಳ, ನಿತಿನ್ ಹೆಗಡೆ ಕಲಗದ್ದೆ, ಮಹೇಶ ಹೆಗಡೆ ಹೊಸಗದ್ದೆ, ಮಂಜುನಾಥ ಮೋಟಿನಸರ, ತಾಳದಲ್ಲಿ ಅನಂತಮೂರ್ತಿ ಭಟ್ ಮತ್ತಿಘಟ್ಟ ಪಾಲ್ಗೊಂಡಿದ್ದರು. ಜಯರಾಮ ಭಟ್ಟ ಗುಂಜಗೋಡು ಸ್ವಾಗತಿಸಿದರು. ಸುಷಿರ ಸಂಗೀತ ಪರಿವಾರದ ಸಂಚಾಲಕ ನಾರಾಯಣ ಹೆಗಡೆ ಮತ್ತು ಶ್ರೀಕಾಂತ ಹೆಗಡೆ ಗುಂಜಗೋಡ ಕೃತಜ್ಞತೆ ಸಲ್ಲಿಸಿದರು.