ಹೊನ್ನಾವರ : ಲಿಂಗನಮಕ್ಕಿ ಆಣೇಕಟ್ಟಿನ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗಿ, ಲಿಂಗನಮಕ್ಕಿ ಆಣೆಕಟ್ಟೆಯಿಂದ ಹೆಚ್ಚುವರಿ ನೀರನ್ನು ಬಿಡುತ್ತಿರುವ ಹಿನ್ನೆಲೆಯಲ್ಲಿ ಗೇರುಸೊಪ್ಪದ ಜಲಾಶಯ ಕೂಡ ಭರ್ತಿಯಾಗಿದ್ದು ಮಂಗಳವಾರ ಸಂಜೆ ಜಲಾಶಯದ ಎಲ್ಲ ನಾಲ್ಕು ಕ್ರೆಸ್ಟ ಗೇಟ್ ತೆರೆದು ಒಟ್ಟು ಸುಮಾರು 72 ಸಾವಿರ ಕ್ಯೂಸೆಕ್ ನೀರನ್ನು ಶರಾವತಿ ನದಿಗೆ ಬಿಡಲಾಗುತ್ತಿದೆ.
ಲಿಂಗನಮಕ್ಕಿ ಮೇಲ್ಭಾಗದ ಪ್ರದೇಶಗಳಲ್ಲಿ ಇನ್ನೂ ನಾಲ್ಕು ದಿನ ಆರೆಂಜ್ ಅಲರ್ಟ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಆಣೆಕಟ್ಟೆಯ ನೀರಿನ ಮಟ್ಟ ಕಾಪಾಡಿಕೊಂಡು ಹೆಚ್ಚುವರಿ ನೀರನ್ನು ಆಣೆಕಟ್ಟೆಯ ಹೊರಗೆ ಬಿಡಲಾಗುತ್ತಿದೆ ಎಂದು ಕೆಪಿಸಿ ಮೂಲಗಳು ತಿಳಿಸಿವೆ.
ಶರಾವತಿ ನದಿ ದಂಡೆಗಳ ಪ್ರದೇಶದಲ್ಲಿ ಸದ್ಯ ನೆರೆ ಬಂದಿಲ್ಲವಾದರೂ ಇದೇ ಪ್ರಮಾಣದಲ್ಲಿ ನೀರು ನದಿಯನ್ನು ನಿರಂತರವಾಗಿ ಸೇರಿದಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇರುವುದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ. ಮುಂಜಾಗೃತಾ ಕ್ರಮವಾಗಿ ನೀರಿನ ಮಟ್ಟ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಹೆರಂಗಡಿ ಫಿರ್ಕ ವ್ಯಾಪ್ತಿಯ ಗಾಬೀತಕೇರಿ ಮಜೀರೇಯ ಜನರನ್ನು ಸ್ಥಳಾಂತರಿಸಿದ್ದು, ಸರಕಾರಿ ಪ್ರೌಢ ಶಾಲೆ ಅಳ್ಳಂಕಿಯಲ್ಲಿ ಕಾಳಜಿ ಕೇಂದ್ರ ತೇರೆಯಲಾಗಿರುತ್ತದೆ.. ಒಟ್ಟು 12 ಕುಟುಂಬದ 29 ಜನರು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.