ಹೊನ್ನಾವರ:ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಏಷ್ಯನ್ ಪೆಸಿಫಿಕ್ ಯೋಗಾಸನ ಚಾಂಪಿಯನ್ಶಿಪ್ನಲ್ಲಿ ಹೊನ್ನಾವರದ ಮಹೇಂದ್ರ ಗೌಡ ಚಿನ್ನದ ಪದಕ ಪಡೆದು ಸಾಧನೆಗೈದಿದ್ದಾನೆ.
ಆರ್ಟಿಸ್ಟಿಕ್ ಯೋಗದಲ್ಲಿ ಪ್ರಥಮ ಸ್ಥಾನ ಹಾಗೂ ಟ್ರೇಡಿಸನಲ್ ಯೋಗದಲ್ಲಿ ದ್ವೀತೀಯ ಸ್ಥಾನ ಪಡೆದು, ಬಂಗಾರ ಹಾಗೂ ಬೆಳ್ಳಿ ಪದಕವನ್ನು ಪಡೆಯುವ ಮೂಲಕ ಮತ್ತೊಮ್ಮೆ ಯೋಗದಲ್ಲಿ ಸಾಧನೆಗೈದಿದ್ದಾನೆ. ಮೂಲತಃ ಹೊನ್ನಾವರ ತಾಲೂಕಿನ ಖರ್ವಾ ಗ್ರಾಮದ ನಾಥಗೇರಿಯ ಗಣಪತಿ ಗೌಡ,ಮಹಾಲಕ್ಷ್ಮೀ ಗೌಡ ದಂಪತಿಯ ಪುತ್ರನಾಗಿದ್ದಾನೆ. ಮಹೇಂದ್ರ ಗೌಡ ಪ್ರಾಥಮಿಕ,ಪ್ರೌಢ ಶಾಲಾ ಹಂತದಲ್ಲಿಯೇ ಅದ್ಬುತ ಯೋಗಪಟುವಾಗಿದ್ದನು. ಖರ್ವಾ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವ್ಯಾಸಂಗದಲ್ಲಿದ್ದಾಗ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವೀತಿಯ ಸ್ಥಾನಗಳಿಸಿ ಬೆಳ್ಳಿ ಪದಕ ಪಡೆದಿದ್ದ. ಈ ಸಂದರ್ಭದಲ್ಲಿ ಖ್ಯಾತ ಯೋಗಪಟು,ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ರಾಜೇಶ್ವರಿ ಹೆಗಡೆಯವರು ಸಾಧಕ ಮಹೇಂದ್ರನ ಯೋಗಗುರು ಆಗಿದ್ದರು. ನಂತರದಲ್ಲಿಯು ಯೋಗಗುರುಗಳ ಮಾರ್ಗದರ್ಶನದಲ್ಲಿ ಫ್ರೌಡಶಾಲೆ ಹಾಗೂ ಕಾಲೇಜು ವ್ಯಾಸಂಗದ ವೇಳೆಯು ಯೋಗವನ್ನು ಮುಂದುವರೆಸಿದ್ದಾನೆ.ಅಲ್ಲಿಂದ ನಿರಂತರವಾಗಿ ರಾಜ್ಯ,ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಗಳಲ್ಲಿ ಕಾಲೇಜನ್ನು ಪ್ರತಿನಿಧಿಸುತ್ತಾ ಬರುತ್ತಿದ್ದಾನೆ. ಬೆಂಗಳೂರಿನ ಇಂಡಿಪೆಂಡೆಂಟ್ ಮ್ಯಾನೆಜ್ಮೆಂಟ್ ಸ್ಟಡಿಸ್ ನಲ್ಲಿ ಬಿಕಾಂ ಪದವಿ ವ್ಯಾಸಂಗದಲ್ಲಿದ್ದಾನೆ. ಇಲ್ಲಿ ರಾಜೇಶ್ ಆಚಾರಿ ಎನ್ನುವವರಿಂದ ಹೆಚ್ಚಿನ ಯೋಗಾಭ್ಯಾಸ ಪಡೆದಿದ್ದಾನೆ.ಅವರ ಮೂಲಕವೇ ಶ್ರೀಲಂಕಾದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ. ಯೋಗ ಸಾಧಕ ಮಹೇಂದ್ರನ ಸಾಧನೆಗೆ ತಾಲೂಕಿನೆಲ್ಲೆಡೆಯಿಂದ ಅಭಿನಂಧನೆಗಳ ಮಹಾಪೂರವೆ ಹರಿದುಬರುತ್ತಿದೆ.