ಯಲ್ಲಾಪುರ : ‘ರಕ್ಷೆ ಇದು ಕೇವಲ ದಾರವಲ್ಲ, ನೂಲಿನ ಸಮೂಹ. ಇದು ಸಂಘಟನೆಯ ಸಂಕೇತ. ಒಗ್ಗಟ್ಟಿನ ಸಂಕೇತ’ ಎಂದು ಭಊ ಸೇನಾದ ನಿವೃತ್ತ ಸೈನಿಕ, ಸುಬೇದಾರ ಮೇಜರ್ ತುಳಸಿದಾಸ ನಾಯ್ಕ ಹೇಳಿದರು.
ಪಟ್ಟಣದ ಜೋಡುಕೆರೆ ಮಾರುತಿ ದೇವಸ್ಥಾನದ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಹನುಮಾನ್ ಮಾಲಾಧಾರಿಗಳ ಸಮೂಹ ಶನಿವಾರ ಆಯೋಜಿಸಿದ್ದ ಹನುಮಾನ ಚಾಲೀಸಾ ಪಠಣ ಹಾಗೂ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ದೇಶವನ್ನು ಹಾಳುಮಾಡಲು ದುಷ್ಟ ಶಕ್ತಿಗಳು ಒಂದಾದರೆ, ಮಾತ್ರಭೂಮಿಯ ರಕ್ಷಣೆಗೆ ದೇಶಭಕ್ತರು ಒಂದಾಗುವ ಅಗತ್ಯವಿದೆ. ರಕ್ಷೆಗಾಗಿ ಬಂಧನ. ನಮ್ಮ ಹಿರಿಯರು ರಕ್ಷೆಯನ್ನು ಕಟ್ಟಿಕೊಂಡು ಜಾತಿ ಬೇದ ಮರೆತು ಬ್ರಿಟೀಷರ ವಿರುದ್ಧ ಹೋರಾಟ ನಡೆಸಿದ್ದರು. ಹೀಗಾಗಿ ರಕ್ಷೆಯನ್ನು ನಾವೆಲ್ಲರೂ ಕಟ್ಟಿಕೊಂಡು ದೇಶದ ರಕ್ಷಣೆಗೆ ಕಟಿಬದ್ಧರಾಗೋಣ’ ಎಮದು ಅವರು ಕರೆ ನೀಡಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಾಂಡೇಲಿ ಜಿಲ್ಲಾ ಸಂಪರ್ಕ ಪ್ರಮುಖ ಅರ್ಜುನ ನಾಯ್ಕ ಮಾತನಾಡಿ, ‘ನಮ್ಮ ರಕ್ಷಣೆಯ ಜೊತೆಗೆ ಸಮಾಜದ ರಕ್ಷಣೆ, ದೇಶದ ರಕ್ಷಣೆ, ಸನಾತನ ಧರ್ಮದ ರಕ್ಷಣೆ ಆಗಬೇಕಾಗಿದೆ. ಅದಕ್ಕಾಗಿ ನಾವು ಪಣತೊಡೋಣ’ ಎಂದರು.
ಮಾರುತಿ ದೇವಸ್ಥಾನದ ಪ್ರಧಾನ ಅರ್ಚಕ ನಾರಾಯಣ ಭಟ್ಟ ಮಾತನಾಡಿದರು. ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಗಜಾನನ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಖಜಾಂಚಿ ನಾಗರಾಜ ಮದ್ಗುಣಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಮಕೃಷ್ಣ ಭಟ್ಟ ಕೌಡಿಕೇರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ಸಿದ್ಧಾರ್ಥ ನಂದೊಳ್ಳಿಮಠ ಸ್ವಾಗತಿಸಿ,ನಿರೂಪಿಸಿದರು.
ನಾಗಾರ್ಜುನ ರಮೇಶ್ ಬದ್ಧಿ , ಶ್ರೀನಂದನ್ ಮಂಗಳದಾಸ್ ನಾಯ್ಕ, ಚಂದನ್ ಕೇಶವ್ ನಾಯ್ಕ, ರವಿ ಗೋವಿಂದ್ ದೇವಾಡಿಗ, ಸುದೀಪ ನಾಯ್ಕ, ಮಾರುತಿ ಮರಾಠಿ, ದುರ್ಗಾದಾಸ್ ದೇವಾಡಿಗ, ರಾಮು ಆಚಾರಿ, ಪ್ರತೀಕ್ ನಾಯ್ಕ, ಶಿವರಾಜ್ ಪಿ ಕಲ್ಮಠ ಇದ್ದರು.