ದಾಂಡೇಲಿ : ಪೊಲೀಸರ ಕಣ್ತಪ್ಪಿಸಲು ನಂಬರ್ ಪ್ಲೇಟ್ ತೆಗೆದಿಟ್ಟು ವಾಹನ ಚಲಾಯಿಸುವವರಿಗೆ ಹಾಗೂ ದೋಷಪೂರಿತ ನಂಬರ್ ಪ್ಲೇಟ್ ಹೊಂದಿರುವವರಿಗೆ ತಕ್ಕ ಶಾಸ್ತಿ ಮಾಡಲು ದಾಂಡೇಲಿ ನಗರ ಪೊಲೀಸರು ಮುಂದಾಗಿದ್ದಾರೆ.
ಗುರುವಾರ ಡಿವೈಎಸ್ಪಿ ಶಿವಾನಂದ ಮದರಖಂಡಿ ಹಾಗೂ ಪೊಲೀಸ್ ವೃತ್ತ ನಿರೀಕ್ಷಕರಾದ ಭೀಮಣ್ಣ ಎಂ. ಸೂರಿ ಅವರ ಮಾರ್ಗದರ್ಶನದಲ್ಲಿ ನಗರ ಠಾಣೆಯ ಪಿಎಸ್ಐಗಳಾದ ಐ.ಆರ್.ಗಡ್ಡೇಕರ ಮತ್ತು ಯಲ್ಲಪ್ಪ ಎಸ್. ಅವರ ನೇತೃತ್ವದ ಪೊಲೀಸರ ತಂಡ ನಂಬರ್ ಪ್ಲೇಟ್ ತೆಗೆದಿಟ್ಟು ಚಲಾಯಿಸುತ್ತಿದ್ದ ಮತ್ತು ದೋಷಪೂರಿತ ನಂಬರ್ ಪ್ಲೇಟ್ ಹೊಂದಿದ್ದ ಒಟ್ಟು 30 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ದಂಡ ವಿಧಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಡಿವೈಎಸ್ಪಿ ಶಿವಾನಂದ ಮದರಖಂಡಿ ಅವರು ವಾಹನಗಳ ನೋಂದಣಿ ಫಲಕಗಳಲ್ಲಿ ವಾಹನದ ಹೆಸರು, ಇಲಾಖೆ, ಸರಕಾರಿ ಲಾಂಛನ, ಮಂಡಳಿ, ಸಂಸ್ಥೆಗಳ ಹೆಸರು ಬರೆಸುವುದು, ವಿವಿಧ ಗಾತ್ರ ಸಂಖ್ಯೆ ಬಳಸುವುದು ಕಾನೂನು ಬಾಹಿರವಾಗಿದೆ. ಇಂತಹ ದೋಷಪೂರಿತ ನೋಂದಣಿ ಫಲಕ ಅಳವಡಿಸುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರ ಈಗಾಗಲೆ ಸುತ್ತೋಲೆ ಹೊರಡಿಸಿದೆ. ಸಾರ್ವಜನಿಕರು ವಾಹನ ಸವಾರರು ಈ ಬಗ್ಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಬೇಕೆಂದು ತಿಳಿಸಿದರು.